ADVERTISEMENT

ಹುಬ್ಬಳ್ಳಿ | ಭಾರತದ ಆರ್ಥಿಕತೆ ಸದೃಢ: ಪಾರ್ಥ ಜಿಂದಾಲ್‌

ಕೆಸಿಸಿಐ ಸಂಸ್ಥಾಪನಾ ದಿನಾಚರಣೆ, ಆರು ಮಂದಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:18 IST
Last Updated 3 ಆಗಸ್ಟ್ 2025, 6:18 IST
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರು ಮಂದಿ ಉದ್ಯಮಿಗಳಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರು ಮಂದಿ ಉದ್ಯಮಿಗಳಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ್ದು ‘ಸತ್ತ’ ಆರ್ಥಿಕತೆ ಎಂದು ಟೀಕಿಸಿದ್ದು ಸರಿಯಲ್ಲ. ಭಾರತ ಆರ್ಥಿಕವಾಗಿ ಸದೃಢವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿನ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ’ ಎಂದು ಜೆಎಸ್‌ಡಬ್ಲ್ಯೂ ಸಿಮೆಂಟ್ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಜಿಂದಾಲ್ ಹೇಳಿದರು.

ನಗರದ ಅಮರಗೋಳ ಎಪಿಎಂಸಿಯ ವಿವಿಧೋದ್ದೇಶ ವಸ್ತು ಪ್ರದರ್ಶನ ಸಭಾಭವನದಲ್ಲಿ ಶನಿವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 97ನೇ ಸಂಸ್ಥಾಪನಾ ದಿನ ಮತ್ತು ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ಪಾದನಾ ವಲಯದಲ್ಲಿ ಪ್ರಗತಿ ಸಾಧಿಸಲು ಭಾರತದಲ್ಲಿ ಸಾಕಷ್ಟು ಅನುಕೂಲಕರ ವಾತಾವರಣವಿದೆ. ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗಳು ಆಗಬೇಕು. ಪ್ರತಿವರ್ಷ 10 ಲಕ್ಷ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು. ದೇಶದಲ್ಲಿ ಶೇ 70ರಷ್ಟು ಯುವಶಕ್ತಿಯಿದ್ದು, ಎಲ್ಲರಿಗೂ ಉದ್ಯೋಗ ದೊರೆಯಬೇಕು. ಹೀಗಾದರೆ, 2047ರ ವೇಳೆ ವಿಕಸಿತ ಭಾರತವನ್ನು ನೋಡಬಹುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಜಿಂದಾಲ್‌ ಕಂಪನಿಗೆ ಉತ್ತರ ಕರ್ನಾಟಕ ಅದೃಷ್ಟದ ಜಾಗ. ಶೈಕ್ಷಣಿಕ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿ, ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಮುಂದಾಗುತ್ತಿದ್ದೇವೆ. ನಮ್ಮ ಕಂಪನಿಯು ಉಳಿದ ಉದ್ಯಮಿಗಳಿಗೂ ಪ್ರೇರಣಾದಾಯಕವಾಗಿದೆ. ಹೊಸ ತಲೆಮಾರಿನ ಯುವಕರಿಗೆ ಉದ್ಯಮದ ಕಡೆಗೆ ಆಸಕ್ತಿ ಬೆಳೆಸಬೇಕಿದೆ. ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾದರೆ, ಉದ್ಯೋಗದ ಸಂಖ್ಯೆಯೂ ಹೆಚ್ಚುತ್ತವೆ. ದೇಶದ ಆರ್ಥಿಕತೆಯೂ ಪ್ರಗತಿಯಾಗುತ್ತದೆ. ದೊಡ್ಡ ಕನಸು ಕಂಡು, ಅದನ್ನು ಸಾಧಿಸುವತ್ತ ಗಮನಹರಿಸಬೇಕು’ ಎಂದರು.

ಕೆಸಿಸಿಐ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಅವರು, ಸಂಸ್ಥೆ ನಡೆದು ಬಂದ ಹಾದಿ, ಅದರ ಪಾತ್ರ ಹಾಗೂ ಸಾಧನೆ ಕುರಿತು ಮಾಹಿತಿ ನೀಡಿದರು.

ಇದೇ ವೇಳೆ ಉದ್ಯಮಿಗಳಾದ ಜಯಂತ ಹುಂಬರವಾಡಿ, ಪ್ರಕಾಶ ಬಾಫ್ನಾ, ರವೀಂದ್ರಕುಮಾರ ಬೆಕನಾಳ, ಶರಣಬಸಪ್ಪ ಗುಡಿಮನಿ, ಸಿದ್ದಣ್ಣ ನಾಲ್ವಾಡ, ದೇವಕಿ ಯೋಗಾನಂದ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಸಿ.ಬಿ.ಪಾಟೀಲ, ಶಂಕ್ರಣ್ಣ ಬಿ.ಡಿ.ಲಿಂಗನಗೌಡರ, ಎಂ.ಸಿ.ಹಿರೇಮಠ, ವಸಂತ ಲದ್ವಾ, ರಮೇಶ ಪಾಟೀಲ, ಮಹೇಂದ್ರ ಲದ್ದಡ, ವಿನಯ ಜವಳಿ ಇದ್ದರು.

‘ಕೆಸಿಸಿಯಿಂದ ಸಲಹೆ ಸೂಚನೆ’:

‘ಆಗಸ್ಟ್ 1 1928ರಂದು ಸ್ಥಾಪನೆಯಾದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ರಾಜ್ಯದ 23 ಜಿಲ್ಲೆಗಳ ಸದಸ್ಯರನ್ನು ಒಳಗೊಂಡ ಅತಿದೊಡ್ಡ ಸಮಸ್ಥೆಯಾಗಿದ್ದರೂ ಹುಬ್ಬಳ್ಳಿಗೆ ಮಾತ್ರ ಸೀಮಿತ ಎನ್ನುವ ತಪ್ಪು ಅಭಿಪ್ರಾಯ ಕೆಲವರಲ್ಲಿ ಇದೆ. ತೆರಿಗೆ ನೀರಿನ ಶುಲ್ಕ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಸಂಸ್ಥೆ ಧ್ವನಿ ಎತ್ತಿ ಸಲಹೆ ಸೂಚನೆಗಳನ್ನು ನೀಡುತ್ತದೆ’ ಎಂದು ಕೆಸಿಸಿಐ ಮಾಜಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.