ADVERTISEMENT

ಇಂದೋರ್ ಪ್ರವಾಸ: 2 ದಿನದಲ್ಲಿ ವೆಚ್ಚದ ಮಾಹಿತಿ; ಜ್ಯೋತಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:46 IST
Last Updated 31 ಡಿಸೆಂಬರ್ 2025, 4:46 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ–ಧಾರವಾಡ ಮಹಾಗನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿಪಕ್ಷ ಸದಸ್ಯರು ಚರ್ಚೆ ನಡೆಸಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ–ಧಾರವಾಡ ಮಹಾಗನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿಪಕ್ಷ ಸದಸ್ಯರು ಚರ್ಚೆ ನಡೆಸಿದರು   

ಹುಬ್ಬಳ್ಳಿ: ಸ್ವಚ್ಛ ಭಾರತ್ ಮಿಷನ್‌–2 ಯೋಜನೆಯಡಿ ಮೆಯರ್, ಉಪಮೇಯರ್, ಆಯುಕ್ತ, ಸದಸ್ಯರು ಮತ್ತು ಅಧಿಕಾರಿಗಳು ಕೈಗೊಂಡಿದ್ದ ಇಂದೋರ್ ಅಧ್ಯಯನ ಪ್ರವಾಸ ಕುರಿತು ಮಂಗಳವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ಆಯುಕ್ತ ರುದ್ರೇಶ ಘಾಳಿ ಅವರು ಅಧ್ಯಯನ ಪ್ರವಾಸದ ಕುರಿತು ವಿವರಿಸಿದರು. ಬಹುತೇಕ ಸದಸ್ಯರು ಪ್ರವಾಸವನ್ನು ಸಮರ್ಥಿಸಿಕೊಂಡರು.

ಈ ವಿಷಯ ಪ್ರಸ್ತಾಪಿಸಿದ ಸದಸ್ಯ ತಿಪ್ಪಣ್ಣ ಮಜ್ಜಗಿ, ‘ಕೆಲ ಮಾಧ್ಯಮಗಳಲ್ಲಿ ಪ್ರವಾಸಕ್ಕೆ ₹2 ಕೋಟಿ ವೆಚ್ಚವಾಗಿದೆ ಎಂದು ವರದಿಯಾಗಿದೆ. ಪ್ರವಾಸದ ಉದ್ದೇಶ, ಅದರಿಂದ ಪಾಲಿಕೆಗೆ ಆಗುವ ಪ್ರಯೋಜನಗಳು ಮತ್ತು ಯಾವ ಅನುದಾನದಲ್ಲಿ ವೆಚ್ಚ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

‘ಇಲ್ಲಿ ಎಲ್ಲ ಸೌಲಭ್ಯಗಳು ಇವೆ. ಆದರೆ, ಕಸ ಸಂಗ್ರಹಿಸಲು ವಾಹನ ಬಂದು ಹೋದ ನಂತರ ರಸ್ತೆ ಬದಿ ಕಸ ಎಸೆಯುವ ಜನರ ಮನಸ್ಥಿತಿ ಬದಲಾಗಬೇಕು. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸ್ವಚ್ಛತೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ದಂಡ ಹಾಕುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು. 

ADVERTISEMENT

ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ‘ಸ್ವಚ್ಛ ಭಾರತ್ ಮಿಷನ್-2 ಯೋಜನೆಯಡಿ ಪಾಲಿಕೆಗೆ ₹2 ಕೋಟಿ ಅನುದಾನ ಬಿಡುಗಡೆ ಆಗಿದೆ. ನೈರ್ಮಲ್ಯ ಶಿಕ್ಷಣ, ಮಾಹಿತಿ ಹಂಚಿಕೆ ಹಾಗೂ ಸಾಮರ್ಥ್ಯ ಅಭಿವೃದ್ಧಿ ಕುರಿತು ಪೌರಕಾರ್ಮಿಕರು, ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ. ಸಾಮರ್ಥ್ಯ ಅಭಿವೃದ್ಧಿ ಅಡಿ ₹87 ಲಕ್ಷ ಖರ್ಚು ಮಾಡಲು ಅವಕಾಶವಿದೆ’ ಎಂದು ತಿಳಿಸಿದರು.

‘ಸ್ವಚ್ಛತೆಯಲ್ಲಿ ಇಂದೋರ್ ಮಾದರಿ ನಗರವಾಗಿದೆ. ಅಲ್ಲಿ ಯಾವ ರೀತಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ, ಮನೆ ಮನೆ ಕಸ ಸಂಗ್ರಹ ವ್ಯವಸ್ಥೆ ಬಗ್ಗೆ ಸದಸ್ಯರು ಪ್ರವಾಸದ ವೇಳೆ ಮಾಹಿತಿ ಪಡೆದರು. ಜನರು, ಸ್ವಚ್ಛತಾ ಕಾರ್ಮಿಕರ ಜತೆ ಚರ್ಚಿಸಿದರು’ ಎಂದರು.

ವಿಪಕ್ಷ ನಾಯಕ ಇಮ್ರಾನ್ ಯಲಿಗಾರ ಮಾತನಾಡಿ, ‘ಹಲವು ವರ್ಷಗಳಿಂದ ಇಂದೋರ್‌ ಪ್ರವಾಸಕ್ಕೆ ಹೋಗಲಾಗುತ್ತಿದೆ. ಪ್ರವಾಸದಲ್ಲಿ ಅಧ್ಯಯನ ಮಾಡಿದ ಅಂಶಗಳು ಅನುಷ್ಠಾನವಾಗಬೇಕು. ಇಲ್ಲದಿದ್ದರೆ  ಪ್ರವಾಸ ವ್ಯರ್ಥ’ ಎಂದರು. 

ಸದಸ್ಯ ರಾಮಪ್ಪ ಬಡಿಗೇರ ಮಾತನಾಡಿ, ‘ಇಂದೋರ್‌ನಲ್ಲಿ ಒಂದು ವಾರ್ಡ್‌ಗೆ 50 ಪೌರಕಾರ್ಮಿರು ಇದ್ದಾರೆ. ಎರಡು ಬಾರಿ ಸ್ವಚ್ಛತೆ ಮಾಡಲಾಗುತ್ತದೆ. ಅಲ್ಲಿನ ಜನರಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಜಾಗೃತಿ ಇದೆ’ ಎಂದರು.

ಸದಸ್ಯ ವೀರಣ್ಣ ಸವಡಿ, ‘ಸ್ವಚ್ಛ ಭಾರತ್‌ ಯೋಜನೆಯಡಿ ಸಾಕಷ್ಟು ಸಾಧನಗಳನ್ನು ಖರೀದಿಸಲಾಗಿದೆ. ಅವುಗಳ ನಿರ್ವಹಣೆಗೆ ಕಾರ್ಮಿಕರ ಕೊರತೆ ಇದೆ. ಯಾವ ಸರ್ಕಾರಗಳು ಬಂದರೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕಾರ್ಮಿಕರ ನೇಮಕಕ್ಕೆ ಅವಕಾಶ ಕೊಡುತ್ತಿಲ್ಲ’ ಎಂದರು.

‘ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯೋಜನೆಗಳಿಗೆ ಅನುಮೋದನೆ ಪಡೆಯುವ ಜತೆಗೆ ಅವುಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು. ಈ ಬಗ್ಗೆ ಅಧಿಕಾರಿಗಳು ವಿಚಾರ ಮಾಡುತ್ತಿಲ್ಲ. ಹಳೆ ಯೋಜನೆಗಳು ಇನ್ನೂ ಅನುಷ್ಠಾನವಾಗಿಲ್ಲ. ಇಂದೋರ್ ಮಾದರಿ ಮಾಡಲು ಎಲ್ಲ ಸಾಮರ್ಥ್ಯ, ಸೌಲಭ್ಯ ನಮ್ಮಲ್ಲಿವೆ. ಅದಕ್ಕೆ ಇಚ್ಛಾಶಕ್ತಿ ಅಗತ್ಯ’ ಎಂದು ಹೇಳಿದರು.

ಉಪಮೇಯರ್‌ ಸಂತೋಷ್ ಚವ್ಹಾಣ್‌ ಇದ್ದರು.

ಮಧ್ಯಾಹ್ನಕ್ಕೆ ಮುಗಿದ ಪಾಲಿಕೆ ಸಾಮಾನ್ಯ ಸಭೆ ಒಂದು ಗಂಟೆ ಸಭೆ ವಿಳಂಬ, ತಡವಾಗಿ ಬಂದ ಸದಸ್ಯರು ಇಂದೋರ್ ಪ್ರವಾಸ; ಆಯುಕ್ತ ಮಾಹಿತಿ

ಇಂದೋರ್‌ ಪ್ರವಾಸಕ್ಕೆ ತಗುಲಿದ ಖರ್ಚಿನ ವಿವರ ಎರಡು ದಿನಗಳಲ್ಲಿ ಸಿಗಲಿದೆ. ಅವಳಿ ನಗರದಲ್ಲಿ ಸ್ವಚ್ಛತೆ ಸುಧಾರಣೆ ಬಗ್ಗೆ ತಿಳಿಯಲು ಇಂದೋರ್‌ ಪ್ರವಾಸಕ್ಕೆ ತೆರಳಿದ್ದೆವು. ಅದರ ಫಲಿತಾಂಶ ಶೀಘ್ರವೇ ಸಿಗಲಿದೆ.
ಜ್ಯೋತಿ ಪಾಟೀಲ ಮೇಯರ್
ಸ್ವಚ್ಛತೆ ಪಾಲಿಕೆ ಕೆಲಸ ಮಾತ್ರವಲ್ಲ. ಅದಕ್ಕೆ ಎಲ್ಲರ ಸಹಕಾರ ಅಗತ್ಯ. ಅಧ್ಯಯನ ಪ್ರವಾಸಕ್ಕೆ ಹೋದವರು ಇಲ್ಲಿಯೂ ಬದಲಾವಣೆ ತರುವ ಸಂಕಲ್ಪ ಮಾಡಿದ್ದಾರೆ. ಇದು ಉಪಯುಕ್ತ ಪ್ರವಾಸ
ರಾಮಪ್ಪ ಬಡಿಗೇರ ಸದಸ್ಯ 
ಅವಳಿ ನಗರದಲ್ಲಿ ಸಮರ್ಪಕ ಸಾರ್ವಜನಿಕ ಶೌಚಾಲಯ ಇಲ್ಲ. ಶೌಚಾಲಯ ನಿರ್ಮಿಸಲು ಅಗದಷ್ಟು ಬಡತನ ಮಹಾನಗರ ಪಾಲಿಕೆಗಿದೆಯೇ?  ಇಂದೋರ್‌ಗೆ ಹೋಗಿ ಏನು ಪ್ರಯೋಜನ
ಇಮ್ರಾನ್ ಯಲಿಗಾರ ವಿಪಕ್ಷ ನಾಯಕ ಹು–ಧಾ ಮಹಾನಗರ ಪಾಲಿಕೆ

ಜನವರಿಯಲ್ಲಿ ಸಿ.ಎಂ ಬಳಿ ಸರ್ವಪಕ್ಷ ನಿಯೋಗ

‘ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೋರುವ ಮತ್ತು ಹಳೇ ಕೋರ್ಟ್ ಕಟ್ಟಡವನ್ನು ಪಾಲಿಕೆಯು ಪಡೆಯುವ ಬಗ್ಗೆ ಜನವರಿ ಮೊದಲ ವಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ  ಜೋಶಿ ನೇತೃತ್ವದಲ್ಲಿ ಸರ್ವಪಕ್ಷ ಸದಸ್ಯರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಪಾಲಿಕೆಯಿಂದ ಜಾಗ ನೀಡಿರುವುದು ಅದಕ್ಕೆ ಪರ್ಯಾಯವಾಗಿ ಜಾಗ ಪಡೆಯುವ ಬಗ್ಗೆ ವೀರಣ್ಣ ಸವಡಿ ರಾಜಣ್ಣ ಕೊರವಿ ಅವರು  ಪ್ರಸ್ತಾಪಿಸಿದ ವಿಷಯ ಕುರಿತು ಅವರು ಪ್ರತಿಕ್ರಿಯಿಸಿದರು. ಬೆಳಗಾವಿ ಅಧಿವೇಶನದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ತಂದಿದ್ದು ಸಿ.ಎಂ ಅವರನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.  ಪಾಲಿಕೆ ವಿಪಕ್ಷ ನಾಯಕರು ಸಿ.ಎಂ ಭೇಟಿಗೆ ಸಮಯ ಕೊಡಿಸಬೇಕು ಎಂದರು. ಸಿ.ಎಂ ಭೇಟಿ ಮಾಡಿಸುವ ವಿಷಯ ಕುರಿತು ಆಡಳಿತ ಹಾಗೂ ವಿಪ‍ಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.

‘ಬೀದಿ ನಾಯಿ ಹಾವಳಿ ನಿಯಂತ್ರಿಸಿ’

‘ಅವಳಿ ನಗರದಲ್ಲಿ ಬೀದಿ ನಾಯಿ ಹಾವಳಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬೀದಿ ನಾಯಿ ಹಿಡಿಯಲು ಗುತ್ತಿಗೆ ನೀಡಲಾಗಿದೆ. ಆದರೆ ಅವರಿಗೆ ವಾಹನ ಒದಗಿಸಿಲ್ಲ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು’  ಎಂದು ಸಭಾ ನಾಯಕ ಈರೇಶ ಅಂಚಟಗೇರಿ ಹೇಳಿದರು. ವಾರ್ಡ್‌ಗಳಿಗೆ ಪೌರಕಾರ್ಮಿಕರನ್ನು ನಿಯೋಜಿಸುವ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದರಿಂದ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಸಂದಿಲ್‌ಕುಮಾರ್ ಹೇಳಿದರು. ಮೇಯರ್ ಪ್ರತಿಕ್ರಿಯಿಸಿ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರನ್ನು ನಿಯೋಜಿಸಬೇಕು ಎಂದರು. ಧಾರವಾಡದ ಶಿವಳ್ಳಿಯಲ್ಲಿ ₹2.59 ಕೋಟಿ ವೆಚ್ಚದಲ್ಲಿ ಪ್ರಾಣಿ ರಕ್ಷಣಾ ಪುನರ್ವಸತಿ ಕೇಂದ್ರ ಹಾಗೂ ನಾಯಿ ಆಶ್ರಯ ಕೇಂದ್ರ ಸ್ಥಾಪಿಸುವ ಯೋಜನೆಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.