
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರವನ್ನು ಶುಚಿನಗರವನ್ನಾಗಿಸಲು ಹು–ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರು ಒಳಗೊಂಡ ತಂಡ ಕೈಗೊಂಡಿರುವ ಇಂದೋರ್ ಪ್ರವಾಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
‘ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ’ಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಇಂದೋರ್ ಪ್ರವಾಸದ ಚಿತ್ರಗಳನ್ನು ಹಂಚಿಕೆ ಮಾಡಲಾಗಿದೆ. ‘ಇಂದೋರ್‌ನಂತೆ ಅವಳಿನಗರವನ್ನು ಸ್ವಚ್ಛವಾಗಿರಿಸುವ ದೃಢ ಸಂಕಲ್ಪದೊಂದಿಗೆ ಪಾಲಿಕೆ ತಂಡ ಅಧ್ಯಯನ ಪ್ರವಾಸ ಕೈಗೊಂಡಿದೆ. ಸ್ವಚ್ಛತೆ ಕಾಪಾಡುವ ಶಿಸ್ತನ್ನು ಹತ್ತಿರದಿಂದ ಕಂಡು, ಆ ಮಾದರಿಯನ್ನು ಅಳವಡಿಸಿಕೊಳ್ಳುವುದು ಪ್ರವಾಸದ ಮುಖ್ಯ ಉದ್ದೇಶ’ ಎಂದು ಬರೆಯಲಾಗಿದೆ.
ಪಾಲಿಕೆ ಹಂಚಿಕೊಂಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಜಾಲತಾಣಿಗರು, ‘ಸ್ಮಾರ್ಟ್ ಸಿಟಿ ಯೋಜನೆ ತಂದು ನಗರವನ್ನು ಹಾಳು ಮಾಡಿದ್ದೀರಿ. ಈಗ ಮತ್ತೆ ಇಂದೋರ್ ಪ್ರವಾಸ ಎಂದು ಸಾರ್ವಜನಿಕರ ಹಣ ಹಾಳು ಮಾಡುತ್ತಿದ್ದೀರಿ. ಕಸ ಎತ್ತಲು ಇಂದೋರ್‌ಗೆ ಹೋಗಬೇಕೆ?’ ಎಂದು ಪ್ರಶ್ನಿಸಿದ್ದಾರೆ.
ಪವನ ಕುಲಕರ್ಣಿ ಅವರು, ‘ನಗರ ಸ್ವಚ್ಛಮಾಡಲು ಬದ್ಧತೆ ಬೇಕು, ನಿಮ್ಮಲ್ಲಿದೆಯಾ? ಎಷ್ಟು ಜನ ಪಾಲಿಕೆ ಸದಸ್ಯರು ವಾರಕ್ಕೆ ಒಮ್ಮೆಯಾದರೂ ವಾರ್ಡ್ ಪ್ರದಕ್ಷಿಣೆ ಮಾಡ್ತಾ ಇದ್ದೀರಿ? ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ, ಮಜಾ ಮಾಡ್ರಿ. ಜನ ದೂಳು ಕುಡಿದು ಸಾಯಲಿ, ನಿಮಗೇನು? ಒಂದು ಸರಿಯಾದ ರಸ್ತೆ ಮಾಡ್ಸಿ ಅಂದ್ರೆ ಅನುದಾನ ಇಲ್ಲಾ ಅಂತ ಪಾಲಿಕೆ ಸದಸ್ಯರು ಹೇಳ್ತಾರೆ. ಜನರ ಶಾಪ ಸುಮ್ನೆ ಹೋಗಲ್ಲ, ತಿಳ್ಕೊಳ್ಳಿ’ ಎಂದು ಟೀಕಿಸಿದ್ದಾರೆ.
ಕಿರಣಕುಮಾರ ಬಣಕರ ಅವರು, ‘ಎಲ್ಲ ಸದಸ್ಯರು ಸ್ವಂತ ಖರ್ಚು ಮಾಡಿಕೊಂಡು ಹೋಗಿರುವರೇ’ ಎಂದು ಪ್ರಶ್ನಿಸಿದ್ದರೆ, ‘ದೀಪಕ್‌ಸಿಂಗ್ ರಾಥೋಡ್ ಅವರು, ‘ಕಸ ತೆಗೆಯಲು ತರಬೇತಿ ಯಾಕೆ ಬೇಕು, ಸುಮ್ಮನೆ ಹಣ ಹಾಳು’ ಎಂದಿದ್ದಾರೆ.
‘ಬರೀ ಪ್ರವಾಸ ಮಾಡೋದಲ್ಲ, ಉಪಯೋಗ ಪಡೆಯಿರಿ. ಸ್ವಚ್ಛತೆಯ ಹೆಸರಲ್ಲಿ ಹಣ ಹಾಳು ಮಾಡಬೇಡಿ. ಕಳೆದ ವರ್ಷ ತೆರಿಗೆ ಹೆಚ್ಚಳ ಮಾಡಿದ್ದೇ ಸಾಧನೆಯಾಗಿತ್ತು’ ಎಂದು ಬಸು ಬಡಿಗೇರ ವ್ಯಂಗ್ಯವಾಡಿದ್ದಾರೆ. ಸೂರಜ್ ಅವರಾದಿ ಅವರು ‘ಸಾರ್ವಜನಿಕರ ಹಣ ಲೂಟಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವೆಲ್ಲ ಅಭಿಪ್ರಾಯಗಳ ನಡುವೆ, ಹುಲಗಪ್ಪ ಗಾಡಿವಡ್ಡರ ಅವರು, ‘ಹುಬ್ಬಳ್ಳಿಯನ್ನು ಇಂದೋರ್ ನಗರದಂತೆ ಪರಿವರ್ತನೆ ಮಾಡಬಹುದು ಎನ್ನುವುದು ನಮ್ಮ ಆಸೆ’ ಎಂದು ಆಶಾದಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ–ಧಾರವಾಡ ಮಹಾನಗರವನ್ನು ತ್ಯಾಜ್ಯಮುಕ್ತ ಮಾಡುವ ಕನಸು ನನಸಾಗಿಸಲು ಇಂದೋರ್ ‘ಫೀಲ್ಡ್ ವಿಸಿಟ್’ ಮಹತ್ವದ ಹೆಜ್ಜೆಯಾಗಿದ್ದು ಯಶಸ್ಸಿನ ಸೂತ್ರಗಳನ್ನು ಕಲಿಯಲು ತಂಡ ಉತ್ಸುಕವಾಗಿದೆ–ಹು–ಧಾ ಮಹಾನಗರ ಪಾಲಿಕೆ ಫೇಸ್‌ಬುಕ್ ಖಾತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.