ADVERTISEMENT

International Labor Day | ಉದ್ಯೋಗ ಅಭದ್ರತೆ: ಸಂಕಷ್ಟ

ನಾಗರಾಜ ಚಿನಗುಂಡಿ
Published 1 ಮೇ 2025, 5:13 IST
Last Updated 1 ಮೇ 2025, 5:13 IST
<div class="paragraphs"><p>ಹುಬ್ಬಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾದ ಕಾರ್ಮಿಕರು</p></div>

ಹುಬ್ಬಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾದ ಕಾರ್ಮಿಕರು

   

ಹುಬ್ಬಳ್ಳಿ: ‘ಹುಬ್ಬಳ್ಳಿಯಲ್ಲಿ ವಾಲ್ವ್ ತಯಾರಿಸುವ ಬಿಡಿಕೆ ಕಂಪನಿಯ ಲೋಡಿಂಗ್- ಅನ್‌ಲೋಡಿಂಗ್‌ ವಿಭಾಗದಲ್ಲಿ ಉದ್ಯೋಗಿಯಾಗಿ 2009ರಲ್ಲಿ ಸೇರಿಕೊಂಡಾಗ ಖುಷಿಯಾಗಿದ್ದೆ. 10 ವರ್ಷಗಳ ಬಳಿಕ ಗುತ್ತಿಗೆ ಸಿಬ್ಬಂದಿ ಎಂದು ನಮಗೆ ಕಂಪನಿಯಿಂದ ಹೊಸ ಪತ್ರ ನೀಡಿದರು. 2023ರಲ್ಲಿ ನನ್ನನ್ನೂ ಸೇರಿ 32 ಜನರನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿದರು. ಇದಕ್ಕಿದ್ದಂತೆ ಕೆಲಸ ಹೋಗಿದ್ದರಿಂದ ಜೀವನ ನಡೆಸುವುದು ಕಷ್ಟವಾಗಿದೆ' ಎಂದು ಹುಬ್ಬಳ್ಳಿ ವ್ಯಾಪ್ತಿಯ ಗೋಕುಲ ಗ್ರಾಮದ ನಿವಾಸಿ ಸದಾನಂದ ಹುಲಕೊಪ್ಪ ಅಳಲು ತೋಡಿಕೊಂಡರು.

‘ನನಗೆ ಕೊಡುತ್ತಿದ್ದ ₹13 ಸಾವಿರ ಸಂಬಳದಲ್ಲಿ ಜೀವನ ನಡೆಸುತ್ತಿದ್ದೆ. ಈಗ ದಿನಗೂಲಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ಬಿಡಿಕೆ ಕಂಪನಿಯು ಕಳೆದ ವರ್ಷ ಮತ್ತೆ ನೂರಾರು ಕಾರ್ಮಿಕರನ್ನು ಹೊರಹಾಕಿದೆ. ಹೊರರಾಜ್ಯದ ಕಾರ್ಮಿಕರನ್ನು ನೇಮಿಸಿಕೊಂಡಿದೆ. ನಮಗೆ ನ್ಯಾಯ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದರು.

ADVERTISEMENT

ಭೈರಿದೇವರಕೊಪ್ಪದ ನಿವಾಸಿ ಸುಹಾಸ್‌, ಈಚೆಗಷ್ಟೇ ಬ್ಲಿಂಕ್‌ ಇಟ್‌ ಕಂಪನಿಯಲ್ಲಿ ಡೆಲಿವರಿ ಬಾಯ್‌ (ಗಿಗ್‌ ವರ್ಕರ್‌) ಆಗಿ  ಸೇರಿಕೊಂಡಿದ್ದಾರೆ. ದಿನಕ್ಕೆ ಕನಿಷ್ಠ 10 ಡೆಲಿವರಿ ಕೊಡಬೇಕು ಎನ್ನುವ ನಿಯಮ ಒಪ್ಪಿ ಕೆಲಸಕ್ಕೆ ಸೇರಿದ್ದಾರೆ. ತಿಂಗಳಿಗೆ ನಿಗದಿತ ವೇತನ ಇಲ್ಲ. ಗರಿಷ್ಠ ಪ್ರಮಾಣದಲ್ಲಿ ಡೆಲಿವರಿ ಆರ್ಡರ್‌ ಪ‍್ರತಿದಿನವೂ ಬಂದರೆ ಮಾತ್ರ ಅವರಿಗೆ ತಿಂಗಳಿಗೆ ₹15 ಸಾವಿರದವರೆಗೂ ಹಣ ದೊರೆಯುತ್ತದೆ. ಉದ್ಯೋಗ ಭದ್ರತೆಯೂ ಇಲ್ಲ, ವೇತನ ಭದ್ರತೆಯೂ ಇಲ್ಲ. ‌

ಇನ್ನೊಂದು ಕಡೆ, ದಿನಗೂಲಿ ಅರಿಸಿ ಹುಬ್ಬಳ್ಳಿ ನಗರಕ್ಕೆ ಧಾವಿಸುವ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಲಘಟಗಿ, ಕುಂದಗೋಳ, ನವಲಗುಂದ, ಶಿಗ್ಗಾವಿ ತಾಲ್ಲೂಕಿನ ಅನೇಕ ಗ್ರಾಮಗಳಿಂದ ಕೆಲಸ ಹುಡುಕಿಕೊಂಡು ಜನರು, ಪ್ರತಿದಿನ ಹುಬ್ಬಳ್ಳಿಗೆ ಬರುತ್ತಾರೆ. ಇಲ್ಲಿನ ರೈಲ್ವೆನಿಲ್ದಾಣ ಹಾಗೂ ಹಳೇ ಹುಬ್ಬಳ್ಳಿಯಲ್ಲಿರುವ ಪಾಲಿಕೆ ಕಚೇರಿ ಎದುರು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ದಿನಗೂಲಿಗಾಗಿ ಕಾದು ನಿಂತಿರುವುದನ್ನು ನೋಡಬಹುದು.

‘20 ವರ್ಷಗಳಿಂದ ಹುಬ್ಬಳ್ಳಿಗೆ ಬಂದು ದಿನಗೂಲಿ ಮಾಡಿ, ಊರಿಗೆ ಹೋಗುತ್ತಿದ್ದೇನೆ’ ಎಂದು ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿಯ ಮಂಜುನಾಥ ಗುಡಗೇರಿ ಹೇಳಿದರು.

ಹಳೇ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಮಾಡುವ ಮಂಜುನಾಥ ಅವರಿಗೆ ಪ್ರತಿದಿನವೂ ಕೆಲಸ ಸಿಗುವ ಭರವಸೆ ಇಲ್ಲ. ಆದರೆ, ಕೆಲಸ ಹುಡುಕಿಕೊಂಡು ಹಳೇ ಹುಬ್ಬಳ್ಳಿಗೆ ಬಂದು ನಿಲ್ಲುವುದನ್ನು ಅವರು ತಪ್ಪಿಸುವುದಿಲ್ಲ. ಹಳೇ ಹುಬ್ಬಳ್ಳಿ ನಿವಾಸಿ ನೌಶಾದ, ಹಿರೇಹೊನ್ನಳ್ಳಿಯ ಈರಪ್ಪ, ಶಂಕ್ರೆಪ್ಪ ಸೇರಿದಂತೆ ಎಲ್ಲರದ್ದು ಇದೇ ರೀತಿಯ ಕಥೆ. ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಇವರಿಗೆ ಉದ್ಯೋಗ ಭದ್ರತೆಯೂ ಇಲ್ಲ. ನಿಗದಿತ ದಿನಗೂಲಿಯೂ ಇಲ್ಲ. 

ಹುಬ್ಬಳ್ಳಿ ಎಪಿಎಂಸಿ ವಹಿವಾಟಿನಲ್ಲಿ ರೈತರು ಮತ್ತು ದಲ್ಲಾಳಿಗಳು ಎಷ್ಟು ಪ್ರಮುಖರೋ, ಅಷ್ಟೇ ಮಹತ್ವ ಹಮಾಲಿಗಳಿಗೂ ಇದೆ. ಆದರೆ, ಜೀವನ ಭದ್ರತೆ ವಿಷಯ ಭಿನ್ನ. 60 ವರ್ಷದ ಹಮಾಲರರು ದುಡಿಯುವ ಶಕ್ತಿಯೂ ಇಲ್ಲದೆ, ಸೌಲಭ್ಯವೂ ಇಲ್ಲ. ಹಮಾಲರಿಗೆ ವಸತಿ ಸೌಲಭ್ಯ, ಪಿಂಚಣಿ ವ್ಯವಸ್ಥೆ ಮಾಡುವಂತೆ ಬೇಡಿಕೆ ಹಲವು ವರ್ಷಗಳಿಂದ ಇದೆ. ಇನ್ನೂ ಈಡೇರಿಲ್ಲ. 

‘ಕಾರ್ಮಿಕರ ಬದುಕು ಅಸ್ಥಿರ’

ದೇಶದಲ್ಲಿ ಶೇ 6ರಷ್ಟು ಸಂಘಟಿತ ಕಾರ್ಮಿಕರು ಹಾಗೂ ಶೇ 94ರಷ್ಟು ಅಸಂಘಟಿತ ಕಾರ್ಮಿಕರು ಇದ್ದಾರೆ. ಅಸಂಘಟಿತ ವಲಯದಲ್ಲಿ ಕೃಷಿ ಕೂಲಿ ಕಾರ್ಮಿಕರೂ ಇದ್ದಾರೆ. ಈ ಕಾರ್ಮಿಕರಿಗೆ ರಕ್ಷಣೆ ನೀಡುವುದಕ್ಕಾಗಿ  ಸರ್ಕಾರವು ವಿವಿಧ ಸಮಿತಿಗಳನ್ನು ನೇಮಿಸಿ, ವರದಿ ಪಡೆದಿದೆ. ಜಿಡಿಪಿಯಲ್ಲಿ ಶೇ 6ರಷ್ಟು ಹಣ ಮೀಸಲಿಡಬೇಕೆಂದು ಸಮಿತಿಯೊಂದು ಸೂಚಿಸಿತ್ತು. ‌ಅದರನ್ವಯ ಸರ್ಕಾರವು ಹಣ ಮೀಸಲಿಟ್ಟರೂ ವೆಚ್ಚ ಮಾಡಲು ಕ್ರಮ ವಹಿಸಿಲ್ಲ.

‘ವರ್ಷಗಳು ಕಳೆದಂತೆ ಸಂಘಟಿತ ಕಾರ್ಮಿಕರ ಸಂಖ್ಯೆ ಕುಸಿಯುತ್ತಿದೆ. ಅವರೂ ಅತಂತ್ರರಾಗಿದ್ದಾರೆ. 2014ರ ಬಳಿಕ ಕೇಂದ್ರ ಸರ್ಕಾರವು ಕಾರ್ಮಿಕ ‌ಕಾಯ್ದೆಗಳನ್ನು ಸೇರ್ಪಡೆಗೊಳಿಸಿ ನಾಲ್ಕು ಕೋಡ್‌ಗಳನ್ನು ಮಾಡಿ ಜಾರಿಗೊಳಿಸಲು ಮುಂದಾಗಿದೆ. ಕಾನೂನುಗಳು ಬದಲಾದಲ್ಲಿ, ಕಾರ್ಮಿಕರ ಪರಿಸ್ಥಿತಿ ಇನ್ನಷ್ಟು ಬದಲಾಗಲಿದೆ’ ಎಂಬ ಆತಂಕ ಕಾರ್ಮಿಕ ಮುಖಂಡರು ವ್ಯಕ್ತಪಡಿಸುತ್ತಾರೆ.

ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಮಿಕರ ಪರ ಬದ್ಧತೆ ಪ್ರದರ್ಶಿಸಬೇಕು. ವೇತನ ಭದ್ರತೆ ಒದಗಿಸುವ ಕೆಲಸ ಮಾಡಬೇಕು
ಕೆ.ಮಹಾಂತೇಶ, ಕಾರ್ಯದರ್ಶಿ, ಸಿಐಟಿಯು ರಾಜ್ಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.