ಹುಬ್ಬಳ್ಳಿ: ಧಾರವಾಡದ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ಯೋಗದಲ್ಲಿ ಸಾಧನೆ ಮಾಡಿದ್ದು, ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ 6.30 ರಿಂದ 7.15ರವರೆಗೆ ಇಲ್ಲಿಯ 105 ವಿದ್ಯಾರ್ಥಿಗಳಿಗೂ ಯೋಗಾಸನ ಅಭ್ಯಾಸ ಕಡ್ಡಾಯ.
ಆರಂಭದಲ್ಲಿ ಸೂಕ್ಷ್ಮ ವ್ಯಾಯಾಮ, ನಂತರ ಸೂರ್ಯ ನಮಸ್ಕಾರ. ಬಳಿಕ ಕೂತು, ನಿಂತು ಮಾಡುವ ಆಸನಗಳು, ಹೊಟ್ಟೆಯ ಮೇಲೆ, ಬೆನ್ನ ಮೇಲೆ ಮಾಡುವ ಆಸನಗಳು, ಶವಾಸನ, ಕಪಾಲಭಾತಿ, ನಾಡಿ ಶುದ್ಧಿ ಪ್ರಾಣಾಯಾಮ, ಧ್ಯಾನ... ಹೀಗೆ 45 ನಿಮಿಷಗಳ ಕಾಲ ಯೋಗಾಸನ ನಡೆಯುತ್ತದೆ.
‘ಈ ವಸತಿ ಶಾಲೆಯಲ್ಲಿ 25 ವರ್ಷಗಳಿಂದ ಯೋಗ ತರಬೇತಿ ನೀಡುತ್ತಿದ್ದೇನೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಕಫ, ಕೆಮ್ಮು, ನೆಗಡಿ ಮೊದಲಾದ ಆಗಾಗ ಕಾಡುವ ಅನಾರೋಗ್ಯವನ್ನು ದೂರವಿಡುತ್ತದೆ. ಧ್ಯಾನದಿಂದ ಏಕಾಗ್ರತೆ ಸಾಧ್ಯವಾಗುತ್ತದೆ. ಇಲ್ಲಿಯ ವಿದ್ಯಾರ್ಥಿಗಳು ಓದಿನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಯೋಗ ಶಿಕ್ಷಕ, ಧಾರವಾಡ ಯೋಗಾಸನ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಪವಾಡಶೆಟ್ಟಿ ತಿಳಿಸಿದರು.
‘1997ರಲ್ಲಿ ಆರಂಭವಾದ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಈಗ 6ರಿಂದ 10ನೇ ತರಗತಿಯವರೆಗೆ 105 ವಿದ್ಯಾರ್ಥಿಗಳು ಕಲಿಯುತ್ತಾರೆ. 6ನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗೆ ₹ 5,000 ಠೇವಣಿ ಹಣ ಪಡೆಯಲಾಗುತ್ತದೆ. ನಂತರ 10ನೇ ತರಗತಿಯವರೆಗೂ ಉಚಿತ ವಸತಿಯೊಂದಿಗೆ ಶಿಕ್ಷಣ ನೀಡಲಾಗುತ್ತದೆ. ಯೋಗ ತರಬೇತಿಯಿಂದ ಮಕ್ಕಳಿಗೆ ಹಲವು ಪ್ರಯೋಜನಗಳಾಗಿವೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸುನಂದಾ ಬಿರಾದಾರ ತಿಳಿಸಿದರು.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಆಯ್ಕೆಯಾದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 2ರಷ್ಟು ಮೀಸಲಾತಿ ಲಭ್ಯವಿದೆ.– ಪ್ರಕಾಶ ಪವಾಡಶೆಟ್ಟಿ, ಕಾರ್ಯದರ್ಶಿ ಯೋಗಾಸನ ಕ್ರೀಡಾ ಸಂಸ್ಥೆ ಧಾರವಾಡ
ಹಲವು ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದಾರೆ. ಶಾಲೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಗಳಿಸುತ್ತಿದೆ.– ಸುನಂದಾ ಬಿರಾದಾರ, ಮುಖ್ಯ ಶಿಕ್ಷಕಿ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಧಾರವಾಡ
68 ಆಸನ ಮಾಡಬಲ್ಲ ವಿಜಯ್
8ನೇ ತರಗತಿಯ ವಿಜಯ ಸಂಗಪ್ಪ ಅರಳಿಕಟ್ಟಿ ಎನ್‌ಸಿಇಆರ್‌ಟಿ ನಡೆಸುವ ರಾಷ್ಟ್ರೀಯ ಓಲಿಂಪಿಯಾಡ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾನೆ. ಕಳೆದ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಯೋಗ ಸ್ಪರ್ಧೆ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್‌ಐ) ನಡೆಸುವ ಯೋಗ ಸ್ಪರ್ಧೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಒಟ್ಟು 68 ಆಸನಗಳನ್ನು ಮಾಡಬಲ್ಲ ವಿಜಯ್ ಪ್ರತಿದಿನ ಬೆಳಿಗ್ಗೆ 2 ತಾಸು ಸಂಜೆ 2 ತಾಸು ಯೋಗಾಸನ ಅಭ್ಯಾಸ ಮಾಡುತ್ತಾನೆ. ರಾಷ್ಟ್ರಮಟದ ಸ್ಪರ್ಧೆಯಲ್ಲಿ ಪಶ್ಚಿಮೋತ್ಥಾನಾಸನ ತಾಡಾಸನ ಶಲಭಾಸನ ವೃಕ್ಷಾಸನ ಹಾಗೂ ಪ್ರಾಣಾಯಾಮಗಳನ್ನು ಪ್ರದರ್ಶಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.