ADVERTISEMENT

ಅಸ್ತಿತ್ವ ಕಳೆದುಕೊಳ್ಳಲಿದೆಯೇ ಜಲಮಂಡಳಿ?

ಎಲ್‌ ಅಂಡ್‌ಟಿ ಗೆ ಜವಾಬ್ದಾರಿ: ಹುಬ್ಬಳ್ಳಿ– ಧಾರವಾಡ ಪಾಲಿಕೆ ಮುಂದಿದೆ ಹಲವು ಸವಾಲು

ಹಿತೇಶ ವೈ.
Published 11 ಜೂನ್ 2022, 16:08 IST
Last Updated 11 ಜೂನ್ 2022, 16:08 IST
ಹುಬ್ಬಳ್ಳಿಯ ಪಾಲಿಕೆ ಕಚೇರಿ ಆವರಣದಲ್ಲಿರುವ ಜಲಮಂಡಳಿಯ ಕಚೇರಿ ಪ್ರಜಾವಾಣಿಚಿತ್ರ 
ಹುಬ್ಬಳ್ಳಿಯ ಪಾಲಿಕೆ ಕಚೇರಿ ಆವರಣದಲ್ಲಿರುವ ಜಲಮಂಡಳಿಯ ಕಚೇರಿ ಪ್ರಜಾವಾಣಿಚಿತ್ರ    

ಹುಬ್ಬಳ್ಳಿ: ಅವಳಿ ನಗರದಲ್ಲಿ ನೀರು ಸರಬರಾಜು, ಶುಲ್ಕ ಸಂಗ್ರಹ ಹಾಗೂ ನಿರ್ವಹಣೆ ಸೇರಿದಂತೆ ವಿವಿಧ ಜವಾಬ್ದಾರಿಯನ್ನು ಜಲಮಂಡಳಿ ಈಗಾಗಲೇ ಹಂತ– ಹಂತವಾಗಿ ಎಲ್‌ ಅಂಡ್ ಟಿ ಕಂಪನಿಯ ಕೈಗೆ ಇರಿಸಿದೆ.

ಈ ಮೂಲಕ ನಗರದ ನೀರು ಪೂರೈಕೆಯಂತಹ ಮಹತ್ವದ ಜವಾಬ್ದಾರಿ ಖಾಸಗಿ ಕಂಪನಿಯ ಹೆಗಲ ಮೇಲೆ ಇರಿಸಲಾಗಿದೆ. ಜಲಮಂಡಳಿಯ ನಿತ್ಯ ಜವಾಬ್ದಾರಿಗಳನ್ನು ಖಾಸಗಿ ಸಂಸ್ಥೆಗೆ ನೀಡಿರುವುದರಿಂದ ಮುಂದೆ ಜಲಮಂಡಳಿ ವಿಭಾಗವು ಹುಬ್ಬಳ್ಳಿ– ಧಾರವಾಡದಲ್ಲಿ ಅಧಿಕೃತವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ‍ನಗರದಲ್ಲಿ ಸುಗಮ ನೀರು ಸರಬರಾಜಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಪಾಲಿಕೆಯು ಜಲಮಂಡಳಿಯ ಕೆಲವು ಅಧಿಕಾರಿಗಳನ್ನು ಕಂಪನಿಗೆ ಬೆನ್ನೆಲುಬಾಗಿ ಕೆಲಸ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದೆ.

‘ಜಲಮಂಡಳಿಯ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಪಾಲಿಕೆಯ ಬೇಡಿಕೆಗೆ ಜಲಮಂಡಳಿ ಮುಖ್ಯ ಕಚೇರಿಯಿಂದ ಅನುಮತಿ ನೀಡುವ ಸಾಧ್ಯತೆ ಕಡಿಮೆ ಇದೆ. ಜಲಮಂಡಳಿ ಕಾರ್ಯನಿರ್ವಹಣೆ ಹಸ್ತಾಂತರ ಮಾಡಿದ ನಂತರ ಕಂಪನಿಗೆ ಪೂರಕವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ. ಪಾಲಿಕೆಯಿಂದಲೇ ವೇತನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ’ ಎಂದು ಹೆಸರು ಹೇಳಲಿಚ್ಛಿಸದ ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಹುಬ್ಬಳ್ಳಿ– ಧಾರವಾಡದಲ್ಲಿ ಉಳಿಸಿಕೊಳ್ಳುವುದು ಅಥವಾ ಬೇರೆ ಕಡೆ ವರ್ಗಾವಣೆ ಮಾಡುವುದು ಜಲಮಂಡಳಿಗೆ ಸಂಬಂಧಿಸಿದೆ. ಆದರೆ, ಸುಗಮ ನೀರು ಸರಬರಾಜಿಗೆ ಆರು ತಿಂಗಳು ಸಿಬ್ಬಂದಿಯನ್ನು ಉಳಿಸುವಂತೆ ಮನವಿ ಮಾಡಿದ್ದೇವೆ’ ಎಂದು ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಜಲಮಂಡಳಿಯ ಸಿಬ್ಬಂದಿ ನೇತೃತ್ವದಲ್ಲಿ ಎಲ್‌ ಅಂಡ್ ಟಿ ಕಂಪನಿಯ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆದಿದೆ. ಪಾಲಿಕೆಯೇ ಖಾಸಗಿ ಸಂಸ್ಥೆಗೆ ಅನುದಾನ ನೀಡುವುದರಿಂದ ಮುಂದೆ ಖಾಸಗಿ ಕಂಪನಿಯ ಸಿಬ್ಬಂದಿ ವೇತನ ಪಾವತಿಯಲ್ಲಿ ಸಮಸ್ಯೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಶುಲ್ಕ ಹೆಚ್ಚಿಸುವ ಆತಂಕ: ಖಾಸಗಿ ಸಂಸ್ಥೆಗೆ ನೀರು ಪೂರೈಕೆ ಜವಾಬ್ದಾರಿಯನ್ನು ನೀಡುತ್ತಿರುವುದರಿಂದ ಮುಂದೆ ಶುಲ್ಕ ವ್ಯವಸ್ಥೆ ಹೇಗೆ ಇರಲಿದೆ ಎನ್ನುವ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ಈ ಕುರಿತು ಪಾಲಿಕೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟತೆ ನೀಡಿಲ್ಲ.

‘ಜಲಮಂಡಳಿ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿತ್ತು. ಜನ ಶುಲ್ಕ ಪಾವತಿಸದಿದ್ದರೆ ಅಥವಾ ವಿಳಂಬ ಮಾಡಿದರೆ ಹೆಚ್ಚು ದಂಡ ವಿಧಿಸುತ್ತಿರಲಿಲ್ಲ. ಸಂಪರ್ಕ ಕಡಿತಗೊಳಿಸುತ್ತಿರಲಿಲ್ಲ. ಕಾನೂನಿನಲ್ಲಿಯೂ ಇದಕ್ಕೆ ಅವಕಾಶವಿರಲಿಲ್ಲ. ಆದರೆ, ಖಾಸಗಿಕಂಪನಿಗೆ ಈ ನಿರ್ಬಂಧಗಳಿರುವ ಸಾಧ್ಯತೆ ಕಡಿಮೆ’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ನಗರದ ನೀರು ಪೂರೈಕೆಯಲ್ಲಿ ಮುಂದೆ ಜಲಮಂಡಳಿಯ ಪಾತ್ರ ಇರುವುದಿಲ್ಲ. 12 ವರ್ಷ ಎಲ್‌ ಅಂಡ್‌ ಟಿ ಸಂಸ್ಥೆ ನೀರು ಸರಬರಾಜು ಮತ್ತು ನಿರ್ವಹಣೆಯ ವ್ಯವಸ್ಥೆ ನೋಡಿಕೊಳ್ಳಲಿದೆ. ಆದರೆ, ಇದರಲ್ಲಿ ಯಾವುದೇ ಲೋಪವಾಗದಂತೆ ಪಾಲಿಕೆ ಎಚ್ಚರಿಕೆ ವಹಿಸಲಿದೆ’ ಎಂದು ಹುಬ್ಬಳ್ಳಿ– ಧಾರವಾಡ ಮೇಯರ್‌ ಈರೇಶ ಅಂಚಟಗೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆಯದ್ದೇ ಸಂಪೂರ್ಣ ಜವಾಬ್ದಾರಿ’

‘ಎಲ್ ಅಂಡ್ ಟಿ ಕಂಪನಿಗೆ ನೀರು ಪೂರೈಕೆ ಮತ್ತು ನಿರ್ವಹಣೆ ಹೊಣೆ ನೀಡಲಾಗಿದೆಯಾದರೂ, ಅವಳಿ ನಗರಕ್ಕೆ ನೀರು ಪೂರೈಸುವ ಸಂಪೂರ್ಣ ಜವಾಬ್ದಾರಿ ಪಾಲಿಕೆಯದ್ದೇ ಆಗಿರುತ್ತದೆ’ ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ.

‘ಇದು ಸರ್ಕಾರಿ ಯೋಜನೆಯಾಗಿದ್ದು ಕೆಯುಐಡಿಎಫ್‌ಸಿ, ಪಾಲಿಕೆ ಹಾಗೂ ಎಲ್‌ ಅಂಡ್ ಟಿ ಒಪ್ಪಂದ ಮಾಡಿಕೊಂಡಿವೆ. ಖಾಸಗಿಯವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದೇವೆ. ಕಂಪನಿಯು ಪಾಲಿಕೆಯ ಅಧೀನದಲ್ಲಿ ಕೆಲಸ ಮಾಡುತ್ತದೆ. ಇದು ಖಾಸಗೀಕರಣ ಅಲ್ಲ. ಖಾಸಗಿ ಸಂಸ್ಥೆಯು ಏಕಾಏಕಿ ಜವಾಬ್ದಾರಿಯಿಂದ ಹಿಂದೆ ಸರಿಯಲು ಬರುವುದಿಲ್ಲ’ ಎಂದರು.

‘ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ ಸಾರ್ವಜನಿಕರು ಪಾಲಿಕೆಯ ವಲಯ ಕಚೇರಿಗೆ ಬರಬಹುದು. ಪಾಲಿಕೆಯ ಸಹಾಯವಾಣಿಯೂ ಇದೆ. ಹುಬ್ಬಳ್ಳಿಯಪಾಲಿಕೆ ಕಚೇರಿಯಲ್ಲಿರುವ ಜಲಮಂಡಳಿ ಕಟ್ಟಡದಲ್ಲೇ ಎಲ್‌ ಅಂಡ್‌ ಟಿ ಸಿಬ್ಬಂದಿ ಕಾರ್ಯನಿರ್ಹಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.