ADVERTISEMENT

ಅಹಿಂಸೆ, ಶಾಂತಿ ಸಾರುವ ಜೈನ ಧರ್ಮ: ಜೋಶಿ

108 ಶಾಂತಿಸಾಗರ ಮಹಾರಾಜರ ಪುತ್ಥಳಿ ಅನಾವರಣ; ಎಸ್‌.ಎಸ್‌.ಎನ್. ಅಕಾಡೆಮಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 12:07 IST
Last Updated 24 ಜನವರಿ 2021, 12:07 IST
ಹುಬ್ಬಳ್ಳಿಯ ಜೈನ ಬೋರ್ಡಿಂಗ್‌ನಲ್ಲಿ ಭಾನುವಾರ 108 ಶಾಂತಿಸಾಗರ ಮಹಾರಾಜರ ಪುತ್ಥಳಿ ಅನಾವರಣ ಹಾಗೂ ಎಸ್‌.ಎಸ್‌.ಎನ್. ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. ಶಾಸಕ ಅಭಯ ಪಾಟೀಲ ಇದ್ದಾರೆ
ಹುಬ್ಬಳ್ಳಿಯ ಜೈನ ಬೋರ್ಡಿಂಗ್‌ನಲ್ಲಿ ಭಾನುವಾರ 108 ಶಾಂತಿಸಾಗರ ಮಹಾರಾಜರ ಪುತ್ಥಳಿ ಅನಾವರಣ ಹಾಗೂ ಎಸ್‌.ಎಸ್‌.ಎನ್. ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. ಶಾಸಕ ಅಭಯ ಪಾಟೀಲ ಇದ್ದಾರೆ   

ಹುಬ್ಬಳ್ಳಿ: ‘ಜೈನ ಬೋರ್ಡಿಂಗ್ ಹಲವು ವರ್ಷಗಳಿಂದ ಆರ್ಥಿಕವಾಗಿ ತೊಂದರೆ ಇರುವವರಿಗೆ ನೆರವಾಗುತ್ತಾ, ಅವರ ಬದುಕಿನಲ್ಲಿ ಬೆಳಕು ಮೂಡಿಸಿದೆ. ಜೈನ ಧರ್ಮವು ಸಮಾಜದಲ್ಲಿ ಅಹಿಂಸೆ ಮತ್ತು ಶಾಂತಿಯನ್ನು ಸಾರುತ್ತಾ ಬಂದಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದಕ್ಷಿಣ ಭಾರತ ಜೈನ ಸಭಾ, ಪ್ರಭಾವತಿ ಮತ್ತು ಸುರೇಂದ್ರ ಶಾಂತಪ್ಪ ನಾವಳ್ಳಿ ಅಕಾಡೆಮಿ ಹಾಗೂ ದಿಗಂಬರ ಜೈನ ಬೋರ್ಡಿಂಗ್ ಮತ್ತು ಸಾಂಗ್ಲಿಯ ಪದವೀಧರ ಸಂಘಟನೆ ಸಹಯೋಗದಲ್ಲಿ, ಹುಬ್ಬಳ್ಳಿಯಲ್ಲಿ ಭಾನುವಾರ 108 ಶಾಂತಿಸಾಗರ ಮಹಾರಾಜರ ಪುತ್ಥಳಿ ಅನಾವರಣ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಎಸ್‌.ಎಸ್‌.ಎನ್. ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವ್ಯಾಪಾರವನ್ನೇ ಮುಖ್ಯ ವೃತ್ತಿಯಾಗಿಸಿಕೊಂಡಿರುವ ಜೈನ ಸಮಾಜ, ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಲು ಮುಂದಾಗಿರುವುದು ಒಳ್ಳೆಯ ನಿರ್ಧಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಮುಂದಕ್ಕೆ ಸಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಕಾಡೆಮಿ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ‘ಸಮಾಜದೊಳಗೆ ಕೇವಲ ಒಂದೇ ದೃಷ್ಟಿಕೋನದಿಂದ ಕೆಲಸ ಮಾಡುವುದು ಬದಲಾಗಬೇಕು. ಪಂಚ ಕಲ್ಯಾಣದಿಂದ ಕೇವಲ ಪಂಚರ ಕಲ್ಯಾಣವಷ್ಟೇ ಆಗುತ್ತಿದೆ.‌ ಅಕಾಡೆಮಿಯಂತಹ ಕಾರ್ಯ ಹತ್ತು ಪಂಚ ಕಲ್ಯಾಣಕ್ಕೆ ಸಮವಾಗಿದ್ದು, ಹೆಚ್ಚಿನ ಪುಣ್ಯವೂ ಬರುತ್ತದೆ. ಅಕಾಡೆಮಿಯು ಒಳ್ಳೆಯ ಅಧಿಕಾರಿಗಳನ್ನು ಸೃಷ್ಟಿಸಿ, ಉತ್ತರ ಕರ್ನಾಟಕಕ್ಕೆ ಮೈಲಿಗಲ್ಲಾಗಲಿ’ ಎಂದರು.

‘ಭಟ್ಟಾರಕರು ಯಾಕೆ ಒಂದೆಡೆ ಸೇರುವುದಿಲ್ಲ’: ‘ವಿವಿಧ ಧರ್ಮಗಳ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಗಮನಿಸಿ, ಸಮಾಜಮುಖಿಯಾಗಿ ಜೈನ ಸಮಾಜವನ್ನು ಮುಂದಕ್ಕೆ ಒಯ್ಯಬೇಕಿದೆ. ವಿವಿಧ ರಾಜಕೀಯ ಪಕ್ಷಗಳಲ್ಲಿರುವ ನಾವು ಒಂದು ಕಡೆ ಸೇರುವಾಗ, ಭಟ್ಟಾರಕರು ಯಾಕೆ ಸೇರುವುದಿಲ್ಲ?’ ಎಂದು ಪ್ರಶ್ನಿಸಿದ ಶಾಸಕ ಅಭಯ ಪಾಟೀಲ ಅವರು, ‘ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಂದೇ ವೇದಿಕೆಯಡಿ, ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಪದವೀಧರ ಸಂಘಟನೆಯ 31ನೇ ವರ್ಷದ ವಾರ್ಷಿಕೋತ್ಸವದ ಗೌರವ ಸಂಚಿಕೆಯನ್ನು ಅಭಯ ಪಾಟೀಲ ಬಿಡುಗಡೆ ಮಾಡಿದರು. ಎಸ್‌.ಡಿ. ಅಕ್ಕೋಳೆ ಅವರಿಗೆ ಸ್ವರ್ಗೀಯ ವಸಂತ ಭೀಮಗೊಂಡ ಪಾಟೀಲ (ಕೋಥಳಿಕರ) ಜೀವನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಿ.ಎಸ್. ಧರಣೆಪ್ಪನವರ ಪ್ರಕಟಿಸಿದ ಗ್ರಂಥವನ್ನು ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಬಿಡುಗಡೆ ಮಾಡಿದರು. ಅಕಾಡೆಮಿ ನಾಮಫಲಕವನ್ನು ಸಚಿವಾಲಯದ ಅಧೀನ ಕಾರ್ಯದರ್ಶಿ ಅಜಿತ ಮುರಗುಂಡೆ ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ನೋಂದಣಿಗೆ ಐಪಿಎಸ್ ಅಧಿಕಾರಿ ಜಿನೇಂದ್ರ ಕೆ. ಕಣಗಾವಿ ಮತ್ತು ಐಎಫ್‌ಎಸ್ ವಿಜಯುಮಾರ ಎಸ್. ಗೋಗಿ ಚಾಲನೆ ನೀಡಿದರು.

ದಾನಿ ಮಮತಾ ಪಾಟೀಲ, ಹುಬ್ಬಳ್ಳಿಯ ದಿಗಂಬರ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ.ಎನ್. ಅಕ್ಕಿ ಅವರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿ ದಿಗಂಬರ ಜೈನ ಬೋರ್ಡಿನಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ₹1 ಲಕ್ಷ ದೇಣಿಗೆಯನ್ನು ಸಚಿವ ಜೋಶಿ ಅವರಿಗೆ ನೀಡಲಾಯಿತು.

ನಾಂದಣಿಯ ಜೈನಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು, ವರೂರಿನ ನವಗ್ರಹ ತೀರ್ಥಿ ಕ್ಷೇತ್ರದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದಕ್ಷಿಣ ಭಾರತ ಜೈನ ಸಭಾ ಹಾಗೂ ಅಕಾಡೆಮಿಯ ಉಪಾಧ್ಯಕ್ಷ ದತ್ತಾ ಡೋರ್ಲೆ ಅತಿಥಿಗಳನ್ನು ಸ್ವಾಗತಿಸಿದರು. ಅಧ್ಯಕ್ಷ ರಾವಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಶಾಲೆ ಸಂಸ್ಥಾಪಕ ಮಹೇಂದ್ರ ಸಿಂಘಿ, ಎ.ಎ. ಮೂಡಲಗಿ, ಜಿ.ಜಿ. ಲೋಬೋಗೋಳ, ಸಂತೋಷ ದೇಶಪಾಂಡೆ, ಡಾ. ಅಜಿತ ಪಾಟೀಲ, ಪಾ.ಪಾ. ಪಾಟೀಲ, ಎಸ್‌.ಎ. ಬರಗಾಲಿ, ಸುಭದ್ರಮ್ಮ ಮುತ್ತಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.