ADVERTISEMENT

ತೆರೆದ ಕೊಳವೆ ಬಾವಿಗೆ ಕಾಯಕಲ್ಪ

‘ಪ್ರಜಾವಾಣಿ’ ವರದಿಗೆ ಎಚ್ಚೆತ್ತುಕೊಂಡ ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 13:11 IST
Last Updated 24 ಸೆಪ್ಟೆಂಬರ್ 2019, 13:11 IST
ಮಂಜುನಾಥನಗರ ಕ್ರಾಸ್‌ನಲ್ಲಿ ತೆರೆದ ಕೊಳವೆ ಬಾವಿಗೆ ಜಲಮಂಡಳಿ ಸಿಬ್ಬಂದಿ ಮಂಗಳವಾರ ಹ್ಯಾಂಡ್‌ ಪಂಪ್ ಅಳವಡಿಸಿದರು
ಮಂಜುನಾಥನಗರ ಕ್ರಾಸ್‌ನಲ್ಲಿ ತೆರೆದ ಕೊಳವೆ ಬಾವಿಗೆ ಜಲಮಂಡಳಿ ಸಿಬ್ಬಂದಿ ಮಂಗಳವಾರ ಹ್ಯಾಂಡ್‌ ಪಂಪ್ ಅಳವಡಿಸಿದರು   

ಹುಬ್ಬಳ್ಳಿ: ಇಲ್ಲಿನ ಮಂಜುನಾಥನಗರ ಕ್ರಾಸ್‌ನ ಗಣೇಶ ದೇವಸ್ಥಾನದ ಬಳಿ ಬಾಯ್ತೆರೆದಿದ್ದ ಕೊಳವೆ ಬಾವಿಗೆ, ಜಲಮಂಡಳಿ ಸಿಬ್ಬಂದಿ ಮಂಗಳವಾರ ಹ್ಯಾಂಡ್ ಪಂಪ್ ಜೋಡಿಸಿದ್ದಾರೆ. ಇದರಿಂದಾಗಿ, ಸ್ಥಳೀಯರು ಕೊಳವೆ ಬಾವಿಯಿಂದ ನೀರನ್ನು ಬಳಸುವಂತಾಗಿದೆ.

ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದ ಅಪಾಯಕಾರಿ ತೆರೆದ ಕೊಳವೆ ಬಾವಿ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸೆ. 22ರಂದು ‘ಬಾಯ್ತೆರೆದ ಕೊಳವೆ ಬಾವಿ: ಮಹಾನಗರ ಪಾಲಿಕೆ ನಿರ್ಲಕ್ಷ್ಯ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿದ್ದಾರೆ.

ನೀರು ಪೂರೈಕೆಗಾಗಿ ಪಾಲಿಕೆಯು ಕೆಲ ವರ್ಷಗಳ ಹಿಂದೆ ಸ್ಥಳದಲ್ಲಿ ಕೊಳವೆ ಬಾವಿ ಕೊರೆದು, ಹ್ಯಾಂಡ್ ಪಂಪ್ ಜೋಡಿಸಿತ್ತು. ಪ್ರಮುಖ ನೀರಿನ ಮೂಲವಾಗಿದ್ದ ಬಾವಿಗೆ ಆರು ತಿಂಗಳ ಹಿಂದೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಹ್ಯಾಂಡ್‌ ಪಂಪ್ ಹಾನಿಗೊಂಡಿತ್ತು.

ADVERTISEMENT

ಪಂಪ್ ಅನ್ನು ದುರಸ್ತಿಗೆ ಕೊಂಡೊಯ್ದಿದ್ದ ಜಲಮಂಡಳಿ ಅಧಿಕಾರಿಗಳು, ಬಾವಿಗೆ ಪ್ಲಾಸ್ಟಿಕ್‌ನಿಂದ ಮುಚ್ಚಿ ಮೇಲ್ಭಾಗಕ್ಕೆ ಕಲ್ಲು ಇಟ್ಟಿದ್ದರು. ಆದರೆ, ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದಾಗಿ ಪ್ಲಾಸ್ಟಿಕ್ ಹರಿದು ಹೋಗಿ, ಕಲ್ಲು ಪಕ್ಕಕ್ಕೆ ಬಿದ್ದಿದ್ದರಿಂದ ಬಾವಿ ತೆರೆದುಕೊಂಡಿತ್ತು. ದೇವಸ್ಥಾನದ ಬಳಿ, ಮಕ್ಕಳು ಆಟವಾಡಲು ಬರುತ್ತಿದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

‘ತೆರೆದ ಕೊಳವೆ ಬಾವಿಯನ್ನು ಸುರಕ್ಷಿತವಾಗಿ ಮುಚ್ಚುವಂತೆ ಹಲವು ಸಲ ಮನವಿ ಸಲ್ಲಿಸಿದರೂ ಪಾಲಿಕೆಯವರು ಸ್ಪಂದಿಸಿರಲಿಲ್ಲ. ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಬಳಿಕ, ಹೊಸ ಹ್ಯಾಂಡ್‌ ಪಂಪ್ ತಂದು ಜೋಡಿಸಿ, ಬಾವಿ ಸುತ್ತಲೂ ಕಾಂಕ್ರೀಟ್‌ ಹಾಕಿದ್ದಾರೆ’ ಎಂದು ಜೆ.ಸಿ. ನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಮಹೇಶ ಪತ್ತಾರ ‘ಪ್ರಜಾವಾಣಿ’ಗೆ ಧನ್ಯವಾದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.