ADVERTISEMENT

ಜೆಡಿಎಸ್ ಸಭೆ; ಪಕ್ಷ ಸಂಘಟನೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:08 IST
Last Updated 18 ಮಾರ್ಚ್ 2022, 4:08 IST
ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಜೆಡಿಎಸ್ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿದರು
ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಜೆಡಿಎಸ್ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿದರು   

ಧಾರವಾಡ: ನಗರದ ಸರ್ಕಾರಿ ನೌಕರರ ಭವನದಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಗುರುವಾರ ಸಭೆ ನಡೆಸಿದರು.

ಜಿಲ್ಲೆಯ ಒಟ್ಟು ಏಳು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು, ಸದಸ್ಯತ್ವ ನೋಂದಣಿ, ರಾಜ್ಯದಲ್ಲಿ ಕೈಗೊಳ್ಳುವ ಜಲಧಾರೆ ಕಾರ್ಯಕ್ರಮ, ಪಕ್ಷ ಸಂಘಟನೆ ಬಲಪಡಿಸುವುದು, ಪದಾಧಿಕಾರಿಗಳ ನೇಮಕ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ‘ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷದ ಹಿರಿಯ ನಾಯಕರು ನಿರ್ಧರಿಸಿದ್ದಾರೆ. ಕನಿಷ್ಠ ಮೂರು ಕ್ಷೇತ್ರದಲ್ಲಾದರೂ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸಲು ಈಗಿನಿಂದಲೇ ತಯಾರಿ ನಡೆಸಬೇಕು’ ಎಂದರು.

ADVERTISEMENT

‘ಈಗಾಗಲೇ ಸದಸ್ಯತ್ವ ನೋಂದಣಿ ಕಾರ್ಯ ನಡೆದಿದ್ದು, ವಾರದೊಳಗೆ ಮುಕ್ತಾಯಗೊಳಿಸಬೇಕು. ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ 6 ಸಾವಿರ ಹಾಗೂ ಗ್ರಾಮೀಣ ಭಾಗದಲ್ಲಿ 4 ಸಾವಿರ ಸದಸ್ಯತ್ವ ಮಾಡಲಾಗಿದ್ದು, ಆ ಪಟ್ಟಿ ನೀಡಬೇಕು. ಇನ್ನೂ ಹೆಚ್ಚಿನ ಸದಸ್ಯತ್ವ ನೋಂದಣಿಗೆ ಮುಂದಾಗಬೇಕು’ ಎಂದು ಹೇಳಿದರು.

‘ಜಲಧಾರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 15 ತಂಡಗಳನ್ನಾಗಿ ಮಾಡಲಾಗಿದೆ. ಕಳಸಾ ಬಂಡೂರಿ ಹಾಗೂ ಮಹದಾಯಿ ಉಗಮಸ್ಥಾನ ಬೆಳಗಾವಿಯಿಂದ ಪ್ರಾರಂಭವಾಗಿ ಧಾರವಾಡ ಜಿಲ್ಲೆಯ ಕುಂದಗೋಳಕ್ಕೆ ಮುಕ್ತಾಯವಾಗಲಿದೆ. ಅದನ್ನು ಎಲ್ಲ ಕಾರ್ಯಕರ್ತರು ಸೇರಿ ಯಶಸ್ವಿಗೊಳಿಸಬೇಕು’ ಎಂದರು.

‘ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರ ಬಂದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆ ಜಾರಿಗೆ ಕ್ರಮಕೈಗೊಳ್ಳಲಾಗುತ್ತದೆ. ಎಲ್ಲ ನದಿಗಳನ್ನು ಅಭಿವೃದ್ದಿಗೊಳಿಸಿ, ನೀರು ಸಂಗ್ರಹಗೊಳಿಸಿ, ಕುಡಿಯುವ ನೀರಿನ ಅಭಾವ ನಿಭಾಯಿಸಲು ಪಕ್ಷ ಬದ್ಧವಾಗಿದೆ. ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸಲು ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಪದಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹುಣಸಿಮರದ ಹೇಳಿದರು.

ಹಿರಿಯ ಮುಖಂಡ ಬಿ.ಬಿ. ಗಂಗಾಧರಮಠ ಅಧ್ಯಕ್ಷತೆ ವಹಿಸಿದ್ದರು. ಫಹಿಮ್ ಕಾಂಟ್ರಾಕ್ಟರ್, ಹಜರತಅಲಿ ಜೋಡಮನಿ, ಶಿವಶಂಕರ ಕಲ್ಲೂರ, ತುಳಸಿಕಾಂತ ಕೋಡೆ, ವಿ.ಐ. ಅಳಗುಂಡಗಿ, ವೆಂಕಟೇಶ ಸಗಬಾಲ, ದೇವರಾಜ ಕಂಬಳಿ, ಚಿದಂಬರ ನಾಡಗೌಡ, ಸಾಧೀಕ ಹಕೀಮ್, ಲಕ್ಷ್ಮೀ ಹಿಂಡಸಗೇರಿ, ಶೋಭಾ ಪಾಲ್ವೆ, ಗಂಗಾಧರ ಪೇರೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.