ADVERTISEMENT

ಉದ್ಯೋಗ ಮೇಳ| ಉದ್ಯೋಗದಾತರಾಗಿ ರೂಪುಗೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:35 IST
Last Updated 15 ನವೆಂಬರ್ 2025, 5:35 IST
   

ಹುಬ್ಬಳ್ಳಿ: ‘ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ ರೂಢಿಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಕೆಎಲ್‌ಇ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯ ಮತ್ತು ವಿಎಕೆ ಫೌಂಡೇಶನ್‌ ಸಹಯೋಗದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ‘ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು’ ಎಂದರು.

‘ದೇಶದ ಜಿಡಿಪಿ ಬೆಳವಣಿಗೆ ಹಾಗೂ ಆರ್ಥಿಕ ವ್ಯವಸ್ಥೆ ಉತ್ತಮವಾಗಿದೆ. ಅಗತ್ಯ ಸೌಲಭ್ಯ ಹೊಂದಿದೆ. ಇದರಿಂದ ಕೇಂದ್ರ ಸರ್ಕಾರವು ದೇಶದ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ನೌಕರರ ಭವಿಷ್ಯ ನಿಧಿ (ಇಪಿಎಫ್‌) ವ್ಯಾಪ್ತಿಗೆ ತರಲು ಕ್ರಮವಹಿಸಿದೆ. ಅಸಂಘಟಿತ ವಲಯದವರಿಗೂ ಉದ್ಯೋಗ ಭದ್ರತೆಯನ್ನೂ ಒದಗಿಸಲಾಗಿದೆ‘ ಎಂದರು.  

ADVERTISEMENT

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ‘ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ’ ಎಂದರು. 

ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ, ‘ಉದ್ಯೋಗದಾತ ಕಂ‍ಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯೆ ರಾಜಣ್ಣ ಕೊರವಿ, ಮಾಜಿ ಶಾಸಕ ಅಶೋಕ ಎಸ್‌. ಕಾಟವೆ, ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ ಮಾತನಾಡಿದರು. ಶಾಸಕ ಮಹೇಶ ಟೆಂಗಿನಕಾಯಿ, ಉಪ ಮೇಯರ್‌ ಸಂತೋಷ್‌ ಚವ್ಹಾಣ್‌, ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ ಪ್ರಮುಖರಾದ ಮಹೇಂದ್ರ ಕೌತಾಳ, ಮಂಜುನಾಥ ಕಾಟಕರ, ತಿಪ್ಪಣ್ಣ ಮಜ್ಜಗಿ, ರಾಜು ಕಾಳೆ, ವಿರೇಶ ಉಂಡಿ, ಕೆಎಲ್ಇ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸುಪ್ರಿತಾ ಎಂ.ಲಗಳಿ, ವೈಷ್ಣವಿ, ಶಿಲ್ಪಾ ಸುಣಗರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.