ADVERTISEMENT

ರಾಮ ಮಂದಿರ ಉದ್ಘಾಟನೆಗೆ ಹೋದರು, ಹೋಗದಿದ್ದರೂ ಕಾಂಗ್ರೆಸ್ಸಿಗೆ ಕಷ್ಟ: ಜೋಶಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 15:50 IST
Last Updated 30 ಡಿಸೆಂಬರ್ 2023, 15:50 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಮತ ಬ್ಯಾಂಕ್‌ ಆಸೆಗಾಗಿ ರಾಮನ ಅಸ್ತಿತ್ವ ಪ್ರಶ್ನಿಸಿದ ಕಾಂಗ್ರೆಸ್ಸಿಗರಿಗೆ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಹೋದರೂ ಕಷ್ಟ, ಹೋಗದಿದ್ದರೂ ಕಷ್ಟ ಎಂಬಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು. 

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉದ್ಘಾಟನೆಗೆ ಹೋದ್ರೆ ಅಲ್ಪಸಂಖ್ಯಾತರ ಮತಗಳು ಬಿಟ್ಟು ಹೋಗುತ್ತವೆ ಎನ್ನುವ ಭಯ, ಮತ್ತೊಂದೆಡೆ, ಹೋಗದಿದ್ದರೆ ಹಿಂದೂಗಳ ಮತಗಳು ಕೈಬಿಟ್ಟು ಹೋಗುತ್ತವೆ ಅನ್ನೋ ಭಯ ಕಾಂಗ್ರೆಸ್ಸಿಗರಿಗೆ ಕಾಡುತ್ತಿದೆ’ ಎಂದು ಟೀಕಿಸಿದರು. 

‘ರಾಮ ಮಂದಿರ ನಿರ್ಮಾಣ ಟ್ರಸ್ಟ್‌ನವರು ಎಲ್ಲರಂತೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರಿಗೂ ಆಹ್ವಾನ ನೀಡಿದ್ದಾರೆ. ಅವರು ಬಂದರೆ ರಾಜಕಾರಣ ಆಗಲ್ಲ. ಬರದಿದ್ದರೆ ಜನ ಬೈತಾರೆ. ಅದನ್ನೇ ರಾಜಕಾರಣ ಅಂದರೆ ನಾವೇನು ಮಾಡೋಣ. ರಾಮ ಮಂದಿರ ವಿಚಾರವಾಗಿ ನಾವು ರಾಜಕಾರಣ ಮಾಡುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ಕೊಡುವುದು ಸರಿಯಲ್ಲ. ಕೂಡಲೇ ನಿಲ್ಲಿಸಬೇಕು’ ಎಂದು ಅವರು ಪರೋಕ್ಷವಾಗಿ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸೂಚಿಸಿದರು.

ಬಿ.ಆರ್. ಪಾಟೀಲ, ಬಸವರಾಜ ರಾಯರೆಡ್ಡಿ ಮತ್ತು ಆರ್.ವಿ. ದೇಶಪಾಂಡೆಗೆ ದೊರೆತ ವಿಶೇಷ ಸ್ಥಾನಮಾನದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ ವಿಶೇಷ ಸ್ಥಾನಮಾನ ಸಿಗುತ್ತೆ ಎನ್ನುವುದು ಖಾತ್ರಿ ಆಯ್ತು. ಇನ್ನು ಮುಂದೆ ಯಾರಿಗಾದರೂ ವಿಶೇಷ ಸ್ಥಾನಮಾನ ಸಿಗಬೇಕಾದರೆ ಸಿ.ಎಂ. ವಿರುದ್ಧ ಮಾತನಾಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಕುತೂಹಲ ಕೆರಳಿಸಿದ ಈಶ್ವರಪ್ಪ ಭೇಟಿ

ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌. ಈಶ್ವರಪ್ಪ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಹುಬ್ಬಳ್ಳಿಯ ಅವರ ಮನೆಯಲ್ಲಿ ಶನಿವಾರ ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

ಈಶ್ವರಪ್ಪ ಅವರ ಪುತ್ರ ಕಾಂತೇಶ್‌ ಅವರು ಹಾವೇರಿ ಲೋಕಸಭಾ ಟಿಕೆಟ್‌ ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ಭೇಟಿಗೆ ಮಹತ್ವ ಬಂದಿದೆ. ಭೇಟಿಯಾದ ನಂತರ ಈಶ್ವರಪ್ಪ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟುಹೋದರು.

‘ಈಶ್ವರಪ್ಪ ಅವರದ್ದು ಸೌಹಾರ್ದಯುತ ಭೇಟಿ ಅಷ್ಟೆ. ಅವರ ಪುತ್ರ ಕಾಂತೇಶ್‌ ಹಾವೇರಿಯಲ್ಲಿ ಓಡಾಡುತ್ತಿದ್ದಾರೆ. ಒಳ್ಳೆಯ ಕಾರ್ಯಕರ್ತ. ಆದರೆ  ಲೋಕಸಭಾ ಟಿಕೆಟ್‌ ತೀರ್ಮಾನ ನಾವಿಬ್ಬರು  ಮಾಡುವುದಲ್ಲ. ಇದರ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.