ADVERTISEMENT

ಕಳಸಾ ಬಂಡೂರಿ ಯೋಜನೆಗೆ ರಾಜ್ಯ ಸರ್ಕಾರದಿಂದ ಮಾಹಿತಿ ಬಾಕಿ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 16:24 IST
Last Updated 26 ಫೆಬ್ರುವರಿ 2024, 16:24 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಕಳಸಾ ಬಂಡೂರಿ ಯೋಜನೆ ಕಾಮಗಾರಿ ಕೇಂದ್ರದಿಂದ ತಿರಸ್ಕೃತವಾಗಿಲ್ಲ. ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಕೆಲ ಮಾಹಿತಿ ನೀಡುವುದು ಬಾಕಿ ಇದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಅಣ್ಣಿಗೇರಿಯಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳಸಾ ಬಂಡೂರಿ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಯೋಜನೆಯು ಯಾವುದೇ ಕಾರಣಕ್ಕೂ ತಿರಸ್ಕೃತವಾಗುವುದಿಲ್ಲ’ ಎಂದರು.

‘ಕೆಲ ಮಾಹಿತಿ ಕೊರತೆ ಕಾರಣದಿಂದ ಅನುಮೋದನೆ ವಿಳಂಬವಾಗಿದ್ದು, ರಾಜ್ಯದಿಂದ ಬೇಗನೆ ಮಾಹಿತಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿರುವೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರೊಂದಿಗೂ ಚರ್ಚಿಸುವೆ’ ಎಂದರು.

ADVERTISEMENT

‘ಕಾಮಗಾರಿಗೆ ಈಗಾಗಲೇ ಪರಿಸರ ಸಚಿವಾಲಯದಿಂದ ಅನುಮತಿ ಪಡೆಯಲಾಗಿದೆ. ವನ್ಯಜೀವಿ ಮಂಡಳಿಗೆ ಕರ್ನಾಟಕದಿಂದ ಮಾಹಿತಿ ಒದಗಿಸಿ, ಕಾಮಗಾರಿಗೆ ಅನುಮೋದನೆ ಪಡೆಯಲಾಗುವುದು. ಕೊಟ್ಟಿರುವ ಮಾತು ತಪ್ಪುವುದಿಲ್ಲ. ಕಳಸಾ ಬಂಡೂರಿ ಯೋಜನೆ ಕಾಮಗಾರಿ ಬಿಜೆಪಿ ಸರ್ಕಾರದಿಂದಲೇ ಮಾಡುತ್ತೇವೆ. ಇದರ ಸಂಪೂರ್ಣ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿದ್ದರೆ ಎಲ್ಲವೂ ಸಾಧ್ಯವಾಗಲಿದೆ’ ಎಂದು ತಿಳಿಸಿದರು.

 ‘ಬಿಜೆಪಿ ಅವಧಿಯಲ್ಲಿಯೇ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಯಾಗಿದೆ. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಯಾವ ಮುಖ್ಯಮಂತ್ರಿಗೂ ಅವರು ಗೌರವ ಕೊಡುತ್ತಿರಲಿಲ್ಲ. ಅವರು ರಾಜ್ಯ ಸರ್ಕಾರಗಳನ್ನು ಉರುಳಿಸಿದ್ದಲ್ಲದೆ, ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. ಇಂಥವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ‘ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.