ADVERTISEMENT

ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹ | ‘ಸುವರ್ಣಸೌಧ ಚಲೋ’ 18 ರಂದು: ನಾಗಪ್ಪ ಉಂಡಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:35 IST
Last Updated 13 ಡಿಸೆಂಬರ್ 2025, 5:35 IST
ನಾಗಪ್ಪ ಉಂಡಿ
ನಾಗಪ್ಪ ಉಂಡಿ   

ಧಾರವಾಡ: ‘ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸಬೇಕು, ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಡಿ.18 ರಂದು ‘ಸುವರ್ಣಸೌಧ ಚಲೋ’ ನಡೆಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ನಾಗಪ್ಪ ಉಂಡಿ ಕೋರಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ರಾಜಕಾರಣ ಬದಿಗಿರಿಸಿ ಈ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಬೇಕು’ ಎಂದರು. 

‘ಮುಂಗಾರಿನಲ್ಲಿ ಸತತ ಮಳೆ ಸುರಿದು ಬೆಳೆಗಳು ಹಾನಿಯಾಗಿವೆ. ಬೆಳೆಹಾನಿ, ಬೆಳೆ ವಿಮೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು, ರೈತರ ಮತ್ತು ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡಬೇಕು, ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು, ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ರೈತರ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಟನ್ ಕಬ್ಬಿಗೆ ₹ 3,500 ಹಾಗೂ ಕ್ವಿಂಟಲ್ ಮಕ್ಕೆಜೋಳಕ್ಕೆ ₹ 3,000 ದರ ನಿಗದಿಪಡಿಸಬೇಕು, ವಿದ್ಯುತ್ ಅಕ್ರಮ ಸಕ್ರಮ ಯೋಜನೆಯನ್ನು ಮುಂದುವರಿಸಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಟಿಸಿ ಅಳವಡಿಸಬೇಕು ಎಂಬುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿರಾಜ ಕಾಂಬಳೆ, ರವಿ ನಡ್ಡರ, ಶಿವಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.