ADVERTISEMENT

ಹುಬ್ಬಳ್ಳಿ| ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅನನ್ಯ: ಶಾಸಕ ಮಹೇಶ ಟೆಂಗಿನಕಾಯಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 5:16 IST
Last Updated 9 ನವೆಂಬರ್ 2025, 5:16 IST
ಹುಬ್ಬಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಏರ್ಪಡಿಸಿದ್ದ  ಕನಕದಾಸ ಜಯಂತಿ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು
ಹುಬ್ಬಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಏರ್ಪಡಿಸಿದ್ದ  ಕನಕದಾಸ ಜಯಂತಿ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಕನಕದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ  ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ’ ಎಂಬ  
ಕೀರ್ತನೆಯ ಮೂಲಕ ಸಮಾಜದಲ್ಲಿ ಜಾತಿ ಪದ್ಧತಿ ವಿರುದ್ಧ ಹೋರಾಡಿದರು. ಸಮಾನತೆ ಸಾರಿದರು. ದಾಸರಲ್ಲಿ ಶ್ರೇಷ್ಠರು ಕನಕದಾಸರು’ ಎಂದರು.

ADVERTISEMENT

‘ಕನಕದಾಸರನ್ನು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತ ಮಾಡಬಾರದು. ಅವರು ಹಾಕಿ
ಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಇಂದಿನ ಯುವ ಪೀಳಿಗೆಗೆ ಅವರ ತತ್ವಾದರ್ಶಗಳನ್ನು ತಿಳಿಸುವ ಕೆಲಸ ಆಗಬೇಕು’ ಎಂದು ತಿಳಿಸಿದರು.

ಸಮಾಜ ಸೇವಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶರಣು ಅಣ್ಣಿಗೇರಿ ಉಪನ್ಯಾಸ
ನೀಡಿದರು. ಶಾಸಕ ಎನ್.ಎಚ್.ಕೋನರಡ್ಡಿ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. 

ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಮಹೇಶ ಗಸ್ತೆ, ಗ್ರಾಮೀಣ ತಹಶೀಲ್ದಾರ್‌ ಜೆ.ಬಿ.ಮಜ್ಜಗಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ. ಹೊಸಮನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗರತ್ನಾ ಕ್ಯಾಸನೂರ, ಹುಬ್ಬಳ್ಳಿ ಶಹರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್
ಬೋಲಾಬಾಯಿ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ್, ಸಮಾಜದ ಮುಖಂಡರಾದ ಬಸವರಾಜ ಬೋರಣ್ಣವರ, ಮಂಜುನಾಥ ಗೊಜನೂರ, ಈಶ್ವರ ಹೊಳೆಮನ್ನವರ, ಪಾರ್ವತಿ, ಆರ್. ಜಿ. ಮೇಟಿ ಇದ್ದರು.

‘ಜಾತಿಯ ಪರಿಧಿಯಲ್ಲಿ ಕನಕರನ್ನು ಗುರುತಿಸಬೇಡಿ’: ‘ಕನಕದಾಸರನ್ನು ಜಾತಿಯ ಪರಿಧಿಯಲ್ಲಿ ಗುರುತಿಸಬಾರದು. ಅದು ಅವರಿಗೆ ಮಾಡುವ ಅಪಚಾರ’ ಎಂದು ಚಿಂತಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.

ಉಣಕಲ್‌ನ ಪುಸ್ತಕ ದಾಸೋಹ ಕೇಂದ್ರದಲ್ಲಿ ಶನಿವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯಿಂದ ಏರ್ಪಡಿಸಿದ್ದ ‘ಕನಕ ಸ್ಮರಣೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಅಮರೇಶ ಕಡೆಮನಿ, ಚಂದ್ರು ಪೂಜಾರ ಮಾತನಾಡಿದರು. ಸಿದ್ದಲಿಂಗೇಶ ಸ್ವಾಗತಿಸಿ, ವಿ.ಎಸ್.ರಮೇಶ ವಂದಿಸಿದರು. 

ಬಿಜೆಪಿ ಕಚೇರಿ: ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆ‍ಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕನಕ ಜಯಂತಿ  ಆಚರಿಸಲಾಯಿತು. ಪ್ರವೀಣ ಹರಳಿ, ವಸಂತ ನಾಡಜೋಶಿ, ರಾಜು ಕಾಳೆ, ರವೀಂದ್ರ ಯಲ್ಕಾನ, ಬೀರಪ್ಪ ಖಂಡೆಕಾರ, ಪ್ರವೀಣ ಪವಾರ,   ಮಂಜುನಾಥ ಚಿತ್ತಗಿಂಜಲ, ರಾಜು ಜರತಾಘರ, ಜಗದೀಶ ಕಂಬಳಿ, ರಘು ಪವಾರ, ಪವನ ಶಿರೂರ, ಚಂದ್ರು ಮುಶಪ್ಪನವರ, ಕಿರಣ ಉಪ್ಪಾರ ಇದ್ದರು.

ಕಾಡಸಿದ್ಧೇಶ್ವರ ಕಾಲೇಜು: ಇಲ್ಲಿನ ಕಾಡಸಿದ್ಧೇಶ್ವರ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ಕನಕ ಜಯಂತಿ ಆಚರಿಸಲಾಯಿತು.

ಪದವಿ ಕಾಲೇಜಿನ ಪ್ರಾಚಾರ್ಯೆ ಸುಮಂಗಲಾ ಬಿ. ಪಾಟೀಲ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಅಣ್ಣಿಗೇರಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಕನ್ನಡ ಉಪನ್ಯಾಸಕ ಡಾ.ಈರಪ್ಪ ಪೂಜಾರಿ ಮಾತನಾಡಿದರು. ಕಾಲೇಜು ಒಕ್ಕೂಟದ ಮಾಜಿ ಅಧ್ಯಕ್ಷೆ  ಸುನೀತಾ ಹಾನಗಲ್, ಐಕ್ಯೂಎಸಿ ಸಂಯೋಜಕ ಎಂ.ಬಿ. ಸಿದ್ಧೇಶ ಇದ್ದರು.

ಹುಬ್ಬಳ್ಳಿಯ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಕನಕ ಜಯಂತಿ ಆಚರಿಸಲಾಯಿತು
ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ಕನಕ ಜಯಂತಿ ಆಚರಿಸಲಾಯಿತು
ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶನಿವಾರ ಕನಕ ಜಯಂತಿ ಕಾರ್ಯಕ್ರಮ ನಡೆಯಿತು

‘ವಿಶ್ವಮಾನವ ಸಂದೇಶ ನೀಡಿದ ಕನಕದಾಸ’

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕನಕ ಜಯಂತಿಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್.ಕಿರಣಗಿ ಮಾತನಾಡಿ ‘ಕನಕದಾಸರು ಯಾವುದೇ ಜಾತಿ ಮತ ಪಂಥ ಪ್ರದೇಶ ಹಾಗೂ ಭಾಷೆಗೆ ಸೀಮಿತವಾಗದೆ ವಿಶ್ವಮಾನವ ಸಂದೇಶಗಳನ್ನು ನೀಡಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ’ ಎಂದರು.  ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀನಿವಾಸಮೂರ್ತಿ ಸಿ.ಇ ಮಾತನಾಡಿ ಕನಕದಾಸರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.  ನವೀನಕುಮಾರ ತಿಪ್ಪಾ ಜಗದೀಶ ಕೋಳಿ ದಯಾನಂದ ಪಾಟೀಲ ಇದ್ದರು. ವಿರೂಪಾಕ್ಷ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.