ADVERTISEMENT

‘ಕನೇರಿ ಶ್ರೀಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಿ’

ಬಸವಾದಿ ಶರಣರ ಹಿಂದೂ ವೇದಿಕೆಯಿಂದ ತಹಶೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:58 IST
Last Updated 23 ಡಿಸೆಂಬರ್ 2025, 2:58 IST
ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಜಿಲ್ಲೆಗಳ ಪ್ರವೇಶ ನಿಷೇಧ ಖಂಡಿಸಿ ನವಲಗುಂದದಲ್ಲಿ ಬಸವಾದಿ ಶರಣರ ಹಿಂದೂ ವೇದಿಕೆ ಸದಸ್ಯರು ತಹಶೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಿದರು
ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಜಿಲ್ಲೆಗಳ ಪ್ರವೇಶ ನಿಷೇಧ ಖಂಡಿಸಿ ನವಲಗುಂದದಲ್ಲಿ ಬಸವಾದಿ ಶರಣರ ಹಿಂದೂ ವೇದಿಕೆ ಸದಸ್ಯರು ತಹಶೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಿದರು   

ನವಲಗುಂದ: ‘ಭಾರತ ನೆಲದ ಸಂಸ್ಕಾರ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರುವುದು ಖಂಡನೀಯ. ಸರ್ಕಾರ ತಕ್ಷಣವೇ ಆ ಆದೇಶವನ್ನು ಹಿಂಪಡೆದು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಕನೇರಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿಯನ್ನು ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆ ಪ್ರವೇಶ ನಿಷೇಧ ಖಂಡಿಸಿ ಸೋಮವಾರ ಬಸವಾದಿ ಶರಣರ ಹಿಂದೂ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವೀರಶೈವ ಲಿಂಗಾಯತ ಸಮಾಜವು ಅತಿಪ್ರಾಚೀನ ಪರಂಪರೆಯುಳ್ಳದ್ದಾಗಿದ್ದು ಸುದೀರ್ಘ ಕಾಲದಿಂದಲೂ ಸಮಾಜವನ್ನು ಬೆಸೆಯುತ್ತಾ ಭಕ್ತಿ ಮಾರ್ಗದಲ್ಲಿ ಮುನ್ನೆಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಈ ಸಮಾಜವನ್ನು ಒಡೆಯುವ ಪ್ರಯತ್ನಕ್ಕೆ ಕೆಲವರು ನೇತೃತ್ವ ವಹಿಸಿದ್ದಾರೆ. ಅವರಿಗೆ ಸಹಕಾರಿಯಾಗಿ ಕೆಲವು ಕಾವಿಧಾರಿಗಳೂ ಎಡಪಂಥೀಯ ವಿಚಾರಧಾರೆಯವರೂ ನಿಂತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಡಸಿದ್ಧೇಶ್ವರ ಸ್ವಾಮಿಗಳು ತಮ್ಮ ನೈಸರ್ಗಿಕ ಕೃಷಿಯ ಚಟುವಟಿಕೆಗಳ ಮೂಲಕ, ಜನೋಪಯೋಗಿ ಸೇವಾ ಚಟುವಟಿಕೆಗಳ ಮೂಲಕ, ಗುರುಕುಲ ಪದ್ಧತಿಯ ಶಿಕ್ಷಣದ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಸಮಾಜದ ನಿರ್ಮಾಣಕ್ಕೆ ನಿಸ್ವಾರ್ಥವಾಗಿ, ಬಸವತತ್ವಕ್ಕೆ ಪೂರಕವಾಗಿ ಹಗಲು-ರಾತ್ರಿ ದುಡಿಯುತ್ತಿರುವ ಸಂತರೊಬ್ಬರು 'ದಂಗೆಗೆ ಕಾರಣವಾಗಲಿದ್ದಾರೆ' ಎಂಬ ಸರ್ಕಾರದ ಆರೋಪವೇ ನಮ್ಮೆಲ್ಲರನ್ನು ಗಾಬರಿಗೊಳಿಸಿದೆ ಎಂದರು.

ADVERTISEMENT

ಗುರ್ಲಹೊಸೂರ ಚರಮುರ್ತೆಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರ ನಾಡು ಕಟ್ಟುವ ಕೆಲಸ ಮಾಡಬೇಕು. ಒಡೆಯುವ ನೇತೃತ್ವ ವಹಿಸಬಾರದು. ಸರ್ಕಾರ ನಾಡಿನ ಪರಂಪರೆ-ಸಂಸ್ಕೃತಿಗೆ ಗೌರವ ದಕ್ಕುವಂತೆ ಮಾಡಬೇಕು. ಅದರ ಮುಂದಾಳುಗಳಿಗೆ ಅವಮಾನ ಮಾಡುವುದಲ್ಲ.

ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದು ಹಿಂದೂ ಸಮಾಜದಲ್ಲಿ ಒಡಕು ತರುವ ಪ್ರಯತ್ನ ಮಾಡುತ್ತಿರುವ ಮಂತ್ರಿಗಳನ್ನು ನಿಯಂತ್ರಿಸಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದ್ದು, ಜನಸಾಮಾನ್ಯರ ಸಾತ್ವಿಕ ಆಕ್ರೋಶವನ್ನು ಎದುರಿಸಬೇಕಾದೀತು ಎಂದಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ಈ ಕುರಿತಂತೆ ಮುತುವರ್ಜಿ ವಹಿಸಿ ಕರ್ನಾಟಕವನ್ನು ಉರಿಯುವ ಗೂಡಾಗಿಸದೇ 'ಸರ್ವ ಜನಾಂಗದ ಶಾಂತಿಯ ತೋಟ'ವಾಗಿ ಉಳಿಯಲು ಬಿಡಬೇಕು ಎಂಬುದು ನಮ್ಮ ಆಗ್ರಹ ಎಂದರು.

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಕ್ಕಡಿಯೊಂದಿಗೆ ತಹಶೀಲ್ದಾರ ಕಚೇರಿವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವೀರಣ್ಣ ಪೂಜಾರ್, ವಿಜಯ ನಾಗಾವಿ, ಜಯಶಂಕರ ವನ್ನೂರ್, ಮಲ್ಲಪ್ಪ ಮೆಣಸಿನಕಾಯಿ, ಶರಣಪ್ಪ ಹಕ್ಕರಕಿ, ವಿಜಯ ಬ್ಯಾಳಿ, ಬಸವರಾಜ ಕಾತರಕಿ, ಅಪ್ಪಣ್ಣ ಹಿರಗಣ್ಣವರ, ಮಂಜುನಾಥ ಬಿಜಾಪುರ, ರಾಜು ಸಿಸ್ವಿನಹಳ್ಳಿ, ಸೋಮಯ್ಯ ಪೂಜಾರ್, ಸಾಯಿಬಾಬಾ ಆನೆಗುಂದಿ, ಅಮರೇಶ ಕನಕೇರಿ, ನಿಂಗಪ್ಪ ಸುಳ್ಳದ ಮುಂತಾದವರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.