ADVERTISEMENT

ಮೇಳೈಸಿದ ಸಮರಕಲೆ– ಪಂಜಾಬಿ ನೃತ್ಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 6:13 IST
Last Updated 15 ಜನವರಿ 2023, 6:13 IST
ಧಾರವಾಡದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಶನಿವಾರ ತಮಿಳುನಾಡಿನ ಯುವಕರು ಪ್ರದರ್ಶಿಸಿದ ಸಮರ ಕಲೆ ಮೈನವಿರೇಳಿಸಿತು –ಪ್ರಜಾವಾಣಿ ಚಿತ್ರ/ ಬಿ.ಎಂ.ಕೇದಾರನಾಥ
ಧಾರವಾಡದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಶನಿವಾರ ತಮಿಳುನಾಡಿನ ಯುವಕರು ಪ್ರದರ್ಶಿಸಿದ ಸಮರ ಕಲೆ ಮೈನವಿರೇಳಿಸಿತು –ಪ್ರಜಾವಾಣಿ ಚಿತ್ರ/ ಬಿ.ಎಂ.ಕೇದಾರನಾಥ   

ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಧಾರವಾಡದ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಸಾಂಪ್ರದಾಯಿಕ ಸಮರ ಕಲೆಗಳ ಪ್ರದರ್ಶನದ ಸದ್ದು ಶನಿವಾರವೂ ಜೋರಾಗಿತ್ತು. ಕತ್ತಿ ವರಸೆ, ದೊಣ್ಣೆ ವರಸೆ, ಸಾಂಪ್ರದಾಯಿಕ ಶೈಲಿ ಬೋಡೋ ಕುಸ್ತಿ, ಬರಿಗೈ ಯುದ್ಧ ಕಲೆ ಪ್ರದರ್ಶನ ಜನಮನ ಸೆಳೆದವು.

ಮಧ್ಯಾಹ್ನ 3.15ಕ್ಕೆ ಶುರುವಾದ ಕಾರ್ಯಕ್ರಮ ಸಂಜೆ 7.45ರತನಕ ಸಾಗಿತ್ತು. ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ರಸದೌತಣ ಉಣಬಡಿಸಿತು. ಮಹಾರಾಷ್ಟ್ರದ ಚಲಿಸುವ ಸೈಕಲ್‌ ಮೇಲಿನ ಮಲ್ಲಕಂಬದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ತಮಿಳನಾಡಿನ ಕಲಾವಿದರು ಸಿಲಂಬಂ(ಬಡಿಗೆ ವರಸೆ) ಪ್ರದರ್ಶಿಸಿದರು. ಕೇರಳ ಕಲಿಗಳು ಮಲಬಾರ್ ಶೈಲಿಯ ಕಳರಿಪಯಟ್ಟು ‘ಒಡಕ್ಕಂ’ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು. ಬಳಿಕ ಜರುಗಿದ ಆಂಧ್ರಪ್ರದೇಶದ ಖರಸಾಮು(ದೊಣ್ಣೆ ವರಸೆ) ಹಾಗೂ ಕತ್ತಿಸಾಮು(ಖಡ್ಗ–ಭಲ್ಲೆ ವರಸೆ) ನೆರೆದ್ದವರಲ್ಲಿ ರೋಂಚನ ಸೃಷ್ಟಿಸಿತು.

ಸಾಂಪ್ರದಾಯಿಕ ಸಮರ ಕಲೆಗಳ ನಡು–ನಡುವೆ ಪಂಜಾಬ್ ಕಲಾವಿದರು ನೃತ್ಯ ಪ್ರದರ್ಶಿಸಿದರು. ಜನರ ಮೆಚ್ಚುಗೆಗೆ ಕಾರಣವಾಯಿತು. ಸಮಿ, ಲುಡ್ಡಾ ಹಾಗೂ ಭಾಂಗ್ಡಾ ನೃತ್ಯಗಳು ರೋಮಾಂಚನಕಾರಿ ಸಮರ ಕಲೆಗಳ ನಡುವೆಯೂ ಚಪ‍್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾದವು.

ADVERTISEMENT

ಧಾರವಾಡದ ಮಲ್ಲಕಂಬ ತಂಡ, ಅಸ್ಸಾಮಿನ ಖೊಮ್ಲೈನೈ, ಪಂಜಾಬ್‌ನ ಗತ್ಕಾ ಪ್ರದರ್ಶನ ನೆರೆದಿದ್ದವರನ್ನು ರಂಜಿಸಿತು. ಮಹಾರಾಷ್ಟ್ರದ ಚಲಿಸುವ ಸೈಕಲ್‌ ಮೇಲಿನ ಮಲ್ಲಕಂಬದೊಂದಿಗೆ ಆರಂಭವಾದ ಕಾರ್ಯಕ್ರಮ ತಮಿಳನಾಡಿನ ಸಿಲಂಬಂ ಪ್ರದರ್ಶನದೊಂದಿಗೆ ದಿನದ ಕಾರ್ಯಕ್ರಮಕ್ಕೆ ತೆರೆಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.