
ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯ ವಾಸ್ತವ್ಯಕ್ಕಾಗಿ ನಿರ್ಮಿಸಲಾದ ವಸತಿ ಗೃಹಗಳಲ್ಲಿ ಅರ್ಧದಷ್ಟು ಖಾಲಿ ಇವೆ. ಖಾಲಿ ಗೃಹಗಳು ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿವೆ.
ವಿಶ್ವವಿದ್ಯಾಲಯದ ಆವರಣದಲ್ಲಿ 207 ವಸತಿಗೃಹಗಳು ಇವೆ. ಈ ಪೈಕಿ 103 ವಸತಿ ಗೃಹಗಳಲ್ಲಿ ನೌಕರರು ವಾಸವಿದ್ದಾರೆ. 98 ವಸತಿಗೃಹಗಳು ಖಾಲಿ ಇವೆ. ಆರು ವಾಸಕ್ಕೆ ಯೋಗ್ಯವಾಗಿಲ್ಲ. ವಸತಿ ಗೃಹದಲ್ಲಿ ಇದ್ದರೆ ಆ ನೌಕರನ ಮನೆ ಬಾಡಿಗೆ ಭತ್ಯೆ (ಎಚ್ಆರ್‌ಎ) ಕಡಿತಗೊಳಿಸಲಾಗುತ್ತದೆ. ಬಹಳಷ್ಟು ಬೋಧಕರು ನಗರದಲ್ಲಿ ಬಾಡಿಗೆ, ಸ್ವಂತ ಮನೆಗಳಲ್ಲಿ ವಾಸ ಇದ್ಧಾರೆ.
‘ವಿಶ್ವವಿದ್ಯಾಲಯದ ವಸತಿ ಗೃಹದಲ್ಲಿ 22 ವರ್ಷ (1985–2007) ವಾಸವಿದ್ದೆವು. ಆಗ ವಸತಿ ಗೃಹಕ್ಕಾಗಿ ಬಹಳ ಪೈಪೋಟಿ ಇತ್ತು. ಅಲ್ಲಿನ ಪರಿಸರ ಚೆನ್ನಾಗಿದೆ. ಈ ಹಿಂದೆ ಎಚ್‌ಆರ್‌ಎ ಕಡಿಮೆ ಇತ್ತು. ಹೀಗಾಗಿ, ನೌಕರರು ವಸತಿ ಗೃಹಗಳಲ್ಲಿ ಇರುತ್ತಿದ್ದರು. ಈಗ ಅದು ಜಾಸ್ತಿ ಇದೆ. ಅದಕ್ಕೆ ವಸತಿಗೃಹಗಳಲ್ಲಿ ಇರಲು ಇಷ್ಟಪಡಲ್ಲ’ ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ (ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ) ಪ್ರೊ.ಎ.ಮುರಿಗೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ 10 ಮಾದರಿಯ (‘ಎ’, ‘ಬಿ’....) ವಸತಿ ಗೃಹಗಳು ಇವೆ. ಬೋಧಕರಿಗೆ (ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು) ಪ್ರತ್ಯೇಕ ಮನೆ (ಸಿಂಗಲ್ ಹೌಸ್), ಬೋಧಕೇತರ ನೌಕರರಿಗೆ ಸಮುಚ್ಚಯ ಕಟ್ಟಡ (ಜಿ+2) ಇವೆ. ಖಾಲಿ ಇರುವ ಮನೆಗಳ ಸುತ್ತ ಗಿಡಗಂಟಿಗಳು ಬೆಳೆದಿವೆ. ನಿರ್ವಹಣೆ ಕೊರತೆಯಿಂದ ಹಲವು ಕಟ್ಟಡಗಳು ಸೊರಗಿವೆ.
ಮೂಲ ವೇತನದಲ್ಲಿಎಚ್ಆರ್‌ಎ ಶೇ 8 ಇದೆ. ಹೀಗಾಗಿ ಕ್ಯಾಂಪಸ್ ಹೊರಗೆ ಬಾಡಿಗೆ ಸ್ವಂತ ಮನೆಗಳಲ್ಲಿ ಹೆಚ್ಚು ನೌಕರರು ವಾಸ ಇದ್ಧಾರೆ. ಖಾಲಿ ಇರುವ ವಸತಿಗೃಹಗಳನ್ನು ಸಂಶೋಧನಾ ವಿದೇಶಿ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಬಳಸುವ ಉದ್ದೇಶವಿದೆ.– ಪ್ರೊ.ಎ.ಎಂ.ಖಾನ್, ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.