ADVERTISEMENT

ಸರ್ಕಾರದ‌ ಅಂಗಸಂಸ್ಥೆಯೆಂದು ಘೋಷಣೆ; ಆಯುಷ್ಮಾನ್ ಕಾರ್ಡ್ ಸೌಲಭ್ಯ: ಸಿಎಂ‌ ಬೊಮ್ಮಾಯಿ

ಕರ್ನಾಟಕ ಕ್ಯಾನ್ಸರ್ ಥೆರಪಿ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 10:30 IST
Last Updated 10 ಜನವರಿ 2023, 10:30 IST
ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ‌ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಸಂಸ್ಥೆಯ ಸಂಸ್ಥಾಪಕ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ
ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ‌ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಸಂಸ್ಥೆಯ ಸಂಸ್ಥಾಪಕ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ   

ಹುಬ್ಬಳ್ಳಿ: 'ಕರ್ನಾಟಕ ಕ್ಯಾನ್ಸರ್ ಥೆರಪಿ‌ ಮತ್ತು ಸಂಶೋಧನಾ ಸಂಸ್ಥೆಯನ್ನು‌ ಸರ್ಕಾರದ ಬೆಂಬಲಿತ ಸಂಸ್ಥೆಯೆಂದು ಘೋಷಿಸಿ, ಆಯಷ್ಮಾನ್ ಕಾರ್ಡ್ ಹೊಂದಿದ ಬಡವರಿಗೆ ನೇರವಾಗಿ ಚಿಕಿತ್ಸೆ ದೊರೆಯುವಂತೆ‌ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ‌ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಸಂಸ್ಥೆಯ ಸಂಸ್ಥಾಪಕ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು

'ಆಯುಷ್ಮಾನ್ ಕಾರ್ಡ್ ಹೊಂದಿದ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯ ವೈದ್ಯರ ಶಿಫಾರಸ್ಸಿನ ಮೇಲೆ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆದರೆ, ಈ ಕ್ಯಾನ್ಸರ್ ಆಸ್ಪತ್ರೆಗೆ ಆಯುಷ್ಮಾನ್ ಕಾರ್ಡ್ ಹೊಂದಿದ‌ವರು ನೇರವಾಗಿ ಬಂದು ಚಿಕಿತ್ಸೆ ಪಡೆಯಬಹುದು. ಈ ನಿಟ್ಟಿನಲ್ಲಿ ಸರ್ಕಾರದಿಂದ ಶೀಘ್ರ ಆದೇಶ ಹೊರಡಿಸಲಾಗುವುದು' ಎಂದರು

ADVERTISEMENT

'ಹರ್ಬಲ್‌, ಆಯುರ್ವೇದದಿಂದ ಕ್ಯಾನ್ಸರ್'ಗೆ ನೋವು ರಹಿತ ಚಿಕಿತ್ಸೆ ನೀಡಬಹುದು ಎನ್ನುವ ಸಂಶೋಧನೆಗೆ ಸಂಸ್ಥೆ ಮುಂದಾಗುತ್ತಿದೆ. ದ್ದು, ಸಿಎಸ್‌ಆರ್‌ ನಿಧಿಯಿಂದ ₹5 ಕೋಟಿ ಅನಜದಾನ ನೀಡಲಾಗುವುದು. ಪೂರ್ಣ ಪ್ರಮಾಣದಲ್ಲಿ ಈ ಸಂಸ್ಥೆ ಸಂಶೋಧನಾ ಕೇಂದ್ರವಾಗಲು ಸರ್ಕಾರದ ಸಂಪೂರ್ಣ ಬೆಂಬಲ ನೀಡಲಿದೆ' ಎಂದರು.

'ಕ್ಯಾನ್ಸರ್ ರೋಗಿ ಮತ್ತು ಅವರ‌ ಕಟುಂಬದವರು ಒತ್ತಡಕ್ಕೆ ಒಳಗಾಗಿ, ಚಿಕಿತ್ಸೆ ನೀಡಬೇಕೋ, ಬೇಡವೋ ಎನ್ನುವ ಗೊಂದಲಕ್ಕೆ ಒಳಗಾಗುತ್ತಾರೆ. ವೈದ್ಯಕೀಯ ವಿಜ್ಞಾನದ ವಿವಿಧ ಚಿಕಿತ್ಸೆಯಿಂದ ಗುಣಮುಖರಾಗಬಹುದು ಎನ್ನುವ ನಂಬಿಕೆಯೂ ನಮ್ಮಲ್ಲಿದೆ. ಯಾರೂ ದುಃಖ ಪಡಬೇಕಿಲ್ಲ, ಹತಾಶರಾಗಬೇಕಿಲ್ಲ. ಇತ್ತೀಚೆಗೆ ಆಧುನಿಕ ಯಂತ್ರೋಪಕರಣ, ನೂತನ ಚಿಕಿತ್ಸಾ ವಿಧಾನಗಳು ಬಂದಿವೆ' ಎಂದು ಹೇಳಿದರು.

'ಕ್ಯಾನ್ಸರ್ ರೋಗಿಗಳ ಜೊತೆ ವೈದ್ಯರು ಪ್ರೀತಿ, ಸಮಾಧಾನ ಮತ್ತು ಕಾರುಣ್ಯದಿಂದ ಮಾತನಾಡಬೇಕು. ಅದರಿಂದ ರೋಗಿಯಲ್ಲಿ ಆತ್ಮವಿಶ್ವಾಸ ಮೂಡಿ ಅರ್ಧದಷ್ಟು ಗುಣಮುಖರಾಗುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ತಂಬಾಕು, ಸಿಗರೇಟ್ ಸೇವನೆ‌ ಹೆಚ್ಚಿರುವುದರಿಂದ ಬಾಯಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಕುರಿತು ಜಾಗೃತಿ ಅಗತ್ಯ' ಎಂದು ಅಭಿಪ್ರಾಯಪಟ್ಟರು.

ಹೆಚ್ಚಿನ ಅನುದಾನ: '₹250 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣವಾಗಲಿದ್ದು, ಮುಂದಿನ ತಿಂಗಳು ಕಟ್ಟಡದ ಶಂಕು ಸ್ಥಾಪನೆ ನೆರವೇರಲಿದೆ. ಆಸ್ಪತ್ರೆ ಸಂಪೂರ್ಣ ನಿರ್ಮಾಣವಾಗಲು ₹500 ಕೋಟಿ ಅಗತ್ಯವಿದೆ. ಕಟ್ಟಡದ ಒಂದು ಹಂತ ಪೂರ್ಣವಾದ ಬಳಿಕ ಅದನ್ನು ನೀಡಲಾಗುವುದು' ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, 'ಬಡವರಿಗೆ‌ ಸೇವೆ ನೀಡಬೇಕೆನ್ನುವ ಸಂಸ್ಥೆಯ ಧ್ಯೇಯ ಶ್ಲಾಘನೀಯ. ಈ ಧ್ಯೇಯ ಎಂದಿಗೂ ಬದಲಾಗಬಾರದು. ಇಲ್ಲಿ ಚಿಕಿತ್ಸೆಗೆ ಬಂದರೆ ಗುಣಮುಖರಾಗುತ್ತೇವೆ ಎನ್ನುವ ಭಾವ ರೋಗಿಗಳಲ್ಲಿ ಮೂಡಬೇಕು' ಎಂದು ಆಶಿಸಿದರು.

ಸಂಸ್ಥೆ ಮುಖ್ಯಸ್ಥ ಬಿ.ಆರ್. ಪಾಟೀಲ, 'ಸರ್ಕಾರ ಸಂಸ್ಥೆಗೆ ₹10ಕೋಟಿ ಅನುದಾನ ನೀಡಿದ್ದು, ಅಗತ್ಯವಾದ ಯಂತ್ರೋಪಕರಣಗಳ ಖರೀದಿಗೆ ಮುಂದಾಗಿದ್ದೇವೆ. ಭಾರತದಲ್ಲಿಯೇ ತಯಾರಾಗುವ ಪನೇಶಿಯಾ ಕಂಪನಿಯಿಂದ ₹5 ಕೋಟಿ ವೆಚ್ಚದಲ್ಲಿ ರೆಡಿಯೋ ಥೆರಪಿ ಯಂತ್ರ ಖರೀದಿಸುತ್ತಿದ್ದೇವೆ. ಈ ಯಂತ್ರ ಅಳವಡಿಕೆ ದೇಶದಲ್ಲಿಯೇ ಎರಡನೆಯದಾಗಿದೆ. ಡೆಡಿಕೇಟೆಟ್ ಸಿಟಿ ಸ್ಕ್ಯಾನ್ ಯಂತ್ರದ ಅಗತ್ಯವಿದ್ದು, ₹1.40 ಕೋಟಿ ವೆಚ್ಚದಲ್ಲಿ ತೋಷಿಬಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಬಾಯಿ ಕ್ಯಾನ್ಸರ್ ಸಂಬಂಧಿಸಿ ಸಂಶೋಧನೆಗೆ ವಿಜ್ಞಾನ ಪ್ರಯೋಗಾಲಯ ಮತ್ತು ಕ್ಯಾನ್ಸರ್ ಜಾಗೃತಿ ಮೂಡಿಸಲು ವಾಹನದ ಅಗತ್ಯವಿರುವುದರಿಂದ, ಯೋಜನೆ ಸಿದ್ಧಪಡಿಸಲಾಗಿದೆ' ಎಂದರು.

ಮೇಯರ್ ಈರೇಶ ಅಂಚಟಗೇರಿ, ಶಾಸಕ ಅರವಿಂದ ಬೆಲ್ಲದ, ಡಾ. ಎಂ.ಎಂ. ಜೋಶಿ, ಮಹೇಂದ್ರ ಸಿಂಘಿ, ಭರದ್ವಾಯ್ ಕಿಂಜ್ವಿ, ವೀರೂ ಛಡ್ಡಾ ಇದ್ದರು.

'ಬೆನ್ನು ತಟ್ಟಿ, ಇಲ್ಲ ಕಿವಿ ಹಿಂಡಿ...'
ಹುಬ್ಬಳ್ಳಿಯಲ್ಲಿ ಬೆಳೆದ ಹುಡುಗ ಮುಖ್ಯಮಂತ್ರಿಯಾಗಿ, ಸರ್ಕಾರ ಹೇಗೆ ನಡೆಸುತ್ತಿದ್ದಾನೆ, ಯಾವೆಲ್ಲ ಯೋಜನೆಗಳನ್ನು ಜಾರಿಗೆ ತಂದಿದ್ದಾನೆ ಎಂದು ಸ್ಥಳೀಯರು ವಿಶ್ಲೇಷಿಸಬೇಕು. ಒಳ್ಳೆಯದನ್ನು ಮಾಡಿದಾಗ ಬೆನ್ನು ತಟ್ಟಬೇಕು, ಕೆಟ್ಟದ್ದು ಮಾಡಿದಾಗ ಕಿವಿ ಹಿಂಡಬೇಕು. ಅದರೆ, ಇಲ್ಲಿಯ ಜನ ಎರಡನ್ನೂ ಮಾಡುತ್ತಿಲ್ಲ. ಹಿರಿಯರ ಪ್ರೋತ್ಸಾಹದಾಯಕ ಮಾತುಗಳು ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಹಿಂದೆ ಹುಬ್ಬಳ್ಳಿಯಲ್ಲಿ ನಾಗರಿಕ ಸಮಾಜವಿತ್ತು. ನಗರ ಬೆಳೆದಂತೆ ಅದು ಮಾಯವಾಗಿದೆ. ಎಲ್ಲ ಮಹಾನಗರಗಳಲ್ಲಿ ನಾಗರಿಕ‌ ಸಮಾಜ‌ ಅಗತ್ಯವಾಗಿರಬೇಕು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.