ADVERTISEMENT

ಹುಬ್ಬಳ್ಳಿ: ರಾಷ್ಟ್ರಧ್ವಜ ಮಾರಾಟದಲ್ಲಿ ದಾಖಲೆ, ಸಂಸ್ಥೆಗೆ ₹2.50 ಕೋಟಿ ಆದಾಯ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲ

ಬಸೀರ ಅಹ್ಮದ್ ನಗಾರಿ
Published 20 ಆಗಸ್ಟ್ 2022, 5:06 IST
Last Updated 20 ಆಗಸ್ಟ್ 2022, 5:06 IST
ಹುಬ್ಬಳ್ಳಿಯ ಬೆಂಗೇರಿಯಲ್ಲಿನ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ ತ್ರಿವರ್ಣ ಧ್ವಜಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿರುವ ಸಿಬ್ಬಂದಿ –ಸಂಗ್ರಹ ಚಿತ್ರ
ಹುಬ್ಬಳ್ಳಿಯ ಬೆಂಗೇರಿಯಲ್ಲಿನ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ ತ್ರಿವರ್ಣ ಧ್ವಜಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿರುವ ಸಿಬ್ಬಂದಿ –ಸಂಗ್ರಹ ಚಿತ್ರ   

ಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸದ ಫಲವಾಗಿ ಇಲ್ಲಿನ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (ಕೆಕೆಜಿಎಸ್‌ಎಸ್‌) ಈ ಬಾರಿ ರಾಷ್ಟ್ರಧ್ವಜಗಳ ಬೇಡಿಕೆ ಹಾಗೂ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ಅಂದಾಜು ₹2.50 ಕೋಟಿ ಮೊತ್ತದ ಧ್ವಜಗಳು ಮಾರಾಟವಾಗಿದ್ದು, ಇದುವರೆಗಿನ ದಾಖಲೆಯಾಗಿದೆ.

ಏಪ್ರಿಲ್‌ನಿಂದಲೇ ಬೇಡಿಕೆ ಬರಲು ಆರಂಭಿಸಿದ್ದರಿಂದ ಹೆಚ್ಚುವರಿ ಜನರನ್ನು ಬಳಸಲಾಯಿತು. ಜುಲೈ ಇಡೀ ತಿಂಗಳು ಹಾಗೂ ಆಗಸ್ಟ್‌ 14ರ ತನಕ ಹತ್ತು ಹೆಚ್ಚುವರಿ ಸಿಬ್ಬಂದಿ ಸೇರಿದಂತೆ 40 ಸಿಬ್ಬಂದಿ ನಿತ್ಯ ಎರಡು ಗಂಟೆಗಳ ಹೆಚ್ಚುವರಿ ದುಡಿಮೆ ಮಾಡಿದರು. ವಾರದ ರಜೆಯೂ ಪಡೆಯದೆ ದುಡಿದರು.

ಈ ಸಲ ಮಹಾರಾಷ್ಟ್ರದಿಂದ ಅತಿ ಹೆಚ್ಚಿನ ಬೇಡಿಕೆ ಬಂದಿತ್ತು. ಇನ್ನುಳಿದಂತೆ ಛತ್ತೀಸಗಡ, ಬಿಹಾರ, ತಮಿಳುನಾಡು ರಾಜ್ಯಗಳಿಂದಲೂ ರಾಷ್ಟ್ರಧ್ವಜಕ್ಕೆ ಬೇಡಿಕೆ ಬಂದಿತ್ತು. ಅಲ್ಲಿಗೆ ಇಲ್ಲಿಂದಲೇ ಧ್ವಜ ಪೂರೈಸಲಾಯಿತು.

ADVERTISEMENT

‘ಕೋವಿಡ್‌ ಹೊಡೆತ ಬಳಿಕ ಈ ಸಲ ರಾಷ್ಟ್ರಧ್ವಜಗಳ ಮಾರಾಟದಲ್ಲಿ ಚೇತರಿಕೆ ಕಂಡಿದೆ. 2022ರ ಏಪ್ರಿಲ್‌ನಿಂದ ಆಗಸ್ಟ್‌15ರ ಅವಧಿಯಲ್ಲಿ ವಿವಿಧ ಅಳತೆಯ ₹2.50 ಕೋಟಿ ಮೊತ್ತ ರಾಷ್ಟ್ರಧ್ವಜಗಳು ಮಾರಾಟವಾಗಿವೆ. ಕಳೆದವರ್ಷಕ್ಕೆ ಹೋಲಿಸಿದರೆ ರಾಷ್ಟ್ರಧ್ವಜಗಳ ಮಾರಾಟ ಬಹುತೇಕ ದ್ವಿಗುಣಗೊಂಡಿದೆ’ ಎಂದು ಕೆಕೆಜಿಎಸ್‌ಎಸ್ ಕಾರ್ಯದರ್ಶಿ ಶಿವಾನಂದ ಮಠಪತಿ ತಿಳಿಸಿದರು.

ತಿದ್ದುಪಡಿ ತಂದ ಪೆಟ್ಟು: ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್‌ ಧ್ವಜಗಳ ತಯಾರಿಕೆಗೆ ಅನುಮತಿ ನೀಡಿದ್ದು, ಖಾದಿಬಟ್ಟೆಯಧ್ವಜಗಳ ಮಾರಾಟದ ಮೇಲೆ ವ್ಯಾಪಕ ಪರಿಣಾಮ ಬೀರಿದೆ.

‘ರಾಜ್ಯದಲ್ಲಿ ಬಹುತೇಕ ಒಂದು ಕೋಟಿ ಧ್ವಜಗಳಿಗೆ ಬೇಡಿಕೆ ಇತ್ತು. ಅಷ್ಟನ್ನೂ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಂದ ಧ್ವಜ ಖರೀದಿಸಿದ್ದರೆ, ಅಂದಾಜು ₹10 ಕೋಟಿ ವಹಿವಾಟು ನಡೆಯುತ್ತಿತ್ತು. ಆದರೆ, ಧ್ವಜ ಸಂಹಿತೆ ತಿದ್ದುಪಡಿಯಿಂದ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು’ ಎಂದು ಶಿವಾನಂದ ಮಠಪತಿ ಬೇಸರಿಸಿದರು.

ಧ್ವಜ ಸಂಹಿತೆ ತಿದ್ದುಪಡಿಯಿಂದ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ಧಾರವಾಡ ತಾಲ್ಲೂಕು ಗರಗ ಕ್ಷೇತ್ರೀಯ ಸೇವಾ ಸಂಘಕ್ಕೂ ನಷ್ಟದ ಬಿಸಿ ತಗುಲಿದೆ.

‘ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದ ಸಮಯದಲ್ಲಿ ರಾಷ್ಟ್ರಧ್ವಜಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ವಾರ್ಷಿಕವಾಗಿ ನಾವು ₹1.80 ಕೋಟಿ ಮೊತ್ತದ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುತ್ತಿದ್ದೇವು. ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಡುವೆಯೂ ಏಪ್ರಿಲ್‌ನಿಂದ 1ರಿಂದ ಆಗಸ್ಟ್‌ 15ರ ತನಕ ಬರೀ ₹40 ಲಕ್ಷ ಮೊತ್ತದ ರಾಷ್ಟ್ರಧ್ವಜಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು’ ಎಂದು ಧಾರವಾಡ ತಾಲ್ಲೂಕು ಗರಗ ಕ್ಷೇತ್ರೀಯ ಸೇವಾ ಸಂಘದ ಕಾರ್ಯದರ್ಶಿ ಎಂ.ಎಸ್‌ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಇದೇ ಅವಧಿಯಲ್ಲಿ ಕೋವಿಡ್‌ ಹೊಡೆತ ನಡುವೆಯೂ ₹60 ಲಕ್ಷ ಮೊತ್ತದ ರಾಷ್ಟ್ರಧ್ವಜಗಳ ಮಾರಾಟವಾಗಿತ್ತು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.