ADVERTISEMENT

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ: ಲಾಭದ ಲೆಕ್ಕಾಚಾರವೇನು?

ಲಿಂಬಿಕಾಯಿ ಟೀಕೆಗೆ ಬಿಜೆಪಿ ನಾಯಕರ ಮೌನ!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 5:39 IST
Last Updated 7 ಏಪ್ರಿಲ್ 2022, 5:39 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆಜೂನ್‌ನಲ್ಲಿ ನಡೆಯಲಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಇದರಿಂದ ಹೊರಟ್ಟಿ ಅವರಿಗೆ ಹಾಗೂ ಬಿಜೆಪಿಗೆ ಲಾಭವೇನು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಶಾಸಕ ಬಿ.ಎಸ್‌. ಯಡಿಯೂರಪ್ಪ ಅವರು ದಶಕದ ಹಿಂದೆಯೇ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಕರೆ ತರಲು ಮುಂದಾಗಿದ್ದರು. ಆಗ ನಯವಾಗಿ ಅವರ ಆಹ್ವಾನ ತಿರಸ್ಕರಿಸಿದ್ದ ಹೊರಟ್ಟಿ, ಈಗ ಸೇರ್ಪಡೆಯಾಗಲು ಕಾರಣವೇನು ಎಂಬ ಚರ್ಚೆ ಮುನ್ನಲೆಗೆ ಬಂದಿದೆ.

ಬಿಜೆಪಿ ಲೆಕ್ಕಾಚಾರ:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ಪರಿಷತ್‌ನಲ್ಲಿ ಬಹುಮತಕ್ಕೆ ಇನ್ನೂ ಒಂದು ಮತ ಕಡಿಮೆ ಇದೆ. ಹೊರಟ್ಟಿ ಅವರ ಸೇರ್ಪಡೆಯಿಂದ ಆ ಕೊರತೆ ನೀಗಿಸಬಹುದು.

ADVERTISEMENT

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಹೊರಟ್ಟಿ ಅವರು ಸತತ ಏಳು ಬಾರಿ ಗೆಲುವು ಸಾಧಿಸಿದ್ದಾರೆ. ಅವರನ್ನು ಸೋಲಿಸಲು ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಂದ ಸಾಧ್ಯವಾಗಿಲ್ಲ. ಈ ಬಾರಿಯೂ ಬಿಜೆಪಿಯಲ್ಲಿ ಆಕಾಂಕ್ಷಿಗಳು ಇದ್ದಾರೆ. ಆದರೆ, ಅವರು ಗೆಲ್ಲುವ ವಿಶ್ವಾಸ ಆ ಪಕ್ಷದ ನಾಯಕರಿಗೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರ ಶಿಗ್ಗಾವಿ ಹಾಗೂ ಅವರ ಮನೆ ಇರುವ ಹುಬ್ಬಳ್ಳಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವಾಗ ವಿಧಾನ ಪರಿಷತ್‌ ಚುನಾವಣೆ ಸೋಲು ಬೇರೆಯದೇ ಸಂದೇಶ ನೀಡಬಹುದು. ಹೊರಟ್ಟಿಯಾದರೆ, ಗೆಲುವು ಸುಲಭವಾಗಬಹುದು ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರ.

ಹೊರಟ್ಟಿ ಲೆಕ್ಕಾಚಾರ:ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ರಚನೆಯಾಗಿ ಮಂತ್ರಿಯಾಗುವ ಸಾಧ್ಯತೆಗಳು ತೀರಾ ಕಡಿಮೆ. ಬಿಜೆಪಿ ಸೇರ್ಪಡೆಯಾದರೆ ವಿಧಾನ ಪರಿಷತ್‌ನ ಸಭಾಪತಿಯಾಗಿ ಮುಂದುವರಿಯಬಹುದು.

ಪುತ್ರ ವಸಂತ ಹೊರಟ್ಟಿಗೆ ರಾಜಕೀಯ ನೆಲೆ ಕಲ್ಪಿಸಲು ಹೊರಟ್ಟಿ ಅವರು 2014ರಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸಿದ್ದರು. ಆದರೆ, ಗೆಲುವು ದಕ್ಕಲಿಲ್ಲ. ಆ ನಂತರ ಅವರ ಪುತ್ರ ರಾಜಕೀಯದಿಂದ ದೂರ ಉಳಿದಿದ್ದಾರೆ. ತಮ್ಮ ರಾಜಕೀಯ ನಿವೃತ್ತಿ ನಂತರ ಪುತ್ರ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಗೆಲುವು ಕಷ್ಟ. ಅದೇ ಬಿಜೆಪಿಯಲ್ಲಿದ್ದರೆ ಪುತ್ರನಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಬಹುದು ಎಂಬುದು ಅವರ ಲೆಕ್ಕಾಚಾರ ಎನ್ನುತ್ತವೆ ಅವರ ಆಪ್ತ ಮೂಲಗಳು.

ವಂಶಪಾರಂಪರ್ಯ ರಾಜಕಾರಣಕ್ಕೆ ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅವಕಾಶ ನಿರಾಕರಿಸಲಾಗುತ್ತಿದೆ. ಹಿಂದೆ ಸಭಾಪತಿಯಾಗಿದ್ದ ಡಿ.ಎಚ್‌. ಶಂಕರಮೂರ್ತಿ ಅವರ ರಾಜಕೀಯ ನಿವೃತ್ತಿ ನಂತರ ಅವರ ಪುತ್ರನಿಗೆ ಅವಕಾಶ ನೀಡಲಾಗಿದೆ. ಅಂತಹದೇ ಅವಕಾಶ ನೀಡಬೇಕು ಎಂಬ ಮಾತುಕತೆಯೊಂದಿಗೆ ಹೊರಟ್ಟಿ ಬಿಜೆಪಿಯತ್ತ ಹೆಜ್ಜೆಯಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ನಾಯಕರ ಮೌನ: ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರ ಹೇಳಿಕೆಯ ನಂತರವೂ ಬಿಜೆಪಿ ಆಕಾಂಕ್ಷಿಯಾಗಿರುವ ಮೋಹನ ಲಿಂಬಿಕಾಯಿ ಅವರು, ಹೊರಟ್ಟಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಹೊರಟ್ಟಿ ಹೇಳಿಕೆ ಸಮರ್ಥಿಸಿಕೊಳ್ಳದೆ ಬಿಜೆಪಿ ನಾಯಕರು ಮೌನವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.