ADVERTISEMENT

‘ಪೋಸ್ಟರ್‌ ವಾರ್‌’ ಕೀಳುಮಟ್ಟದ ರಾಜಕಾರಣ: ಜಗದೀಶ್‌ ಶೆಟ್ಟರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 6:23 IST
Last Updated 25 ಸೆಪ್ಟೆಂಬರ್ 2022, 6:23 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್    

ಹುಬ್ಬಳ್ಳಿ: ‘ಕಾಂಗ್ರೆಸ್ ಗೌರವಯುತ ಪಕ್ಷವಾಗಿ ಉಳಿದಿಲ್ಲ, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪೋಸ್ಟರ್‌ ವಾರ್‌ ಮೂಲಕ ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಯಾಕೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದೆ ಗೊತ್ತಿಲ್ಲ. ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಮುಖಂಡರು ದುರುದ್ದೇಶದಿಂದ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರಲ್ಲಿ ದಾಖಲೆಗಳೇನಾದರೂ ಇದ್ದರೆ ಲೋಕಾಯುಕ್ತಕ್ಕೆ ನೀಡಲಿ’ ಎಂದರು.

‘ಭ್ರಷ್ಟಾಚಾರದ ಕುರಿತು ಡಿ.ಕೆ. ಶಿವಕುಮಾರ್‌ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಸಿದ್ದರಾಮಯ್ಯರ ಮೇಲೆ ಅರ್ಕಾವತಿ ಹಗರಣದ ಆರೋಪವಿದೆ. ಹೀಗಿದ್ದಾಗ ಅವರು ಯಾವ ನೈತಿಕತೆಯಲ್ಲಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಲು ಅವರು ನಾಲಾಯಕ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಬೇಕೆಂದು ಅವರದ್ದೇ ಪಕ್ಷದ ಮುಖಂಡರು ಒತ್ತಾಯಿಸುತ್ತಿದ್ದಾರೆ. ಆದರೆ, ಅಧ್ಯಕ್ಷರಾಗಲು ರಾಹುಲ್ ಅವರಿಗೇ ಮನಸ್ಸಿಲ್ಲ. ಪಕ್ಷದಲ್ಲಿಯೇ ಒಗ್ಗಟ್ಟು ಇಲ್ಲದ ಅವರು, ಭಾರತ್ ಜೋಡೊ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.