ADVERTISEMENT

ಪಂಚಾಯಿತಿಗೊಂದು ಕೆಪಿಎಸ್‌ ನಿರ್ಮಾಣ: ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿಕೆ

ಛಬ್ಬಿ ಸರ್ಕಾರಿ ಪ್ರೌಢಶಾಲೆ‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:25 IST
Last Updated 18 ಆಗಸ್ಟ್ 2025, 5:25 IST
ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ಪ್ರೌಢಶಾಲೆ‌ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ಪ್ರೌಢಶಾಲೆ‌ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು   

ಹುಬ್ಬಳ್ಳಿ: ‘ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಶಿಕ್ಷಣ ಒದಗಿಸುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್‌) ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ಛಬ್ಬಿಯಲ್ಲೂ ಕೆಪಿಎಸ್‌ ಸ್ಥಾಪಿಸುವ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ಪ್ರೌಢಶಾಲೆ‌ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ 600ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಲಾಗುತ್ತದೆ. ಪ್ರತಿ ಶಾಲೆಗೆ ₹5 ಕೋಟಿ ಅನುದಾನ ನೀಡಲಾಗುತ್ತದೆ. 3,000 ಶಾಲಾ ಕೊಠಡಿಗಳ ದುರಸ್ತಿ, 4,000 ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ, 5,000 ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ. ಶುಲ್ಕ ರದ್ದು ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರಿಂದ 1.06 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಶಿಕ್ಷಣದಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯವಿದೆ ಎಂಬುದನ್ನು ಮನಗಂಡು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಮೂಲಕ ಹಲವು ಉಪಯುಕ್ತ ಕೆಲಸ ಮಾಡಲಾಗಿದೆ. ಖಾಸಗಿ ಶಾಲೆಯ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲೂ ಇರಬೇಕು ಎಂಬ ಉದ್ದೇಶ ನಮ್ಮದು’ ಎಂದು ತಿಳಿಸಿದರು.

‘ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಿರುವುದರಿಂದ ಅಭಿವೃದ್ಧಿ ಸಾಧ್ಯವಾಗಿದೆ. ದೇಶದಲ್ಲಿ ಹೊಸದಾಗಿ 7,500 ವೈದ್ಯಕೀಯ ಸೀಟು ಸೃಷ್ಟಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇರುವ ಕೌಶಲ, ತಂತ್ರಜ್ಞಾನವನ್ನು ಮಕ್ಕಳಿಗೆ ಕಲಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಎಂ.ಆರ್. ಪಾಟೀಲ, ಪತ್ರಕರ್ತ ಅಜಿತ್‌ ಹನುಮಕ್ಕನವರ, ಮುಖಂಡ ವಿನಾಯಕ ಕುಲಕರ್ಣಿ ಮಾತನಾಡಿದರು. ನಿವೃತ್ತ ಡಿವೈಎಸ್‌ಪಿ ಉಮೇಶ್, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಜೆ.ಬಿ. ಮಜ್ಜಗಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಛಬ್ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಹುಲ್ಲಂಬಿ, ಪಿಡಿಒ ಚಂದ್ರಶೇಖರ ಪೂಜಾರಿ ಇದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೇರ್ಡೆಯಾಗಲು ವಿದ್ಯಾರ್ಥಿಗಳಿಗೆ ಮೂರು ಬಾರಿ ಅವಕಾಶ ನೀಡುವ ಬದಲು ಒಂದೇ ಬಾರಿಗೆ ಉತ್ತೀರ್ಣರಾಗುವಂತಹ ವಾತಾವರಣ ಸೃಷ್ಟಿಸಬೇಕು
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಗ್ರಾಮೀಣ ಭಾಗದಲ್ಲಿ‌ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಿದೆ. ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕಿದೆ
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ

‘ಶೇ 74ರಷ್ಟು ಸಾಕ್ಷರತೆ: ಆತ್ಮಾವಲೋಕ ಅವಶ್ಯ’

‘ದೇಶದ ಸಾಕ್ಷರತೆ ಪ್ರಮಾಣ ಶೇ 74ರಷ್ಟಿದೆ. ಸಾವಿರಾರು ಸರ್ಕಾರಿ ಶಾಲೆಗಳು ಬಂದ್ ಆಗಿದ್ದು ಬಹುತೇಕ ಪದವೀಧರರಿಗೆ ಕೆಲಸವಿಲ್ಲ. ಈ ಬಗ್ಗೆ ಆತ್ಮಾವಲೋಕನ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ‘ಆಡಳಿತದಲ್ಲಿ ಪಾರದರ್ಶಕತೆ ಇಲ್ಲದಿರುವುದು ಗುಲಾಮಗಿರಿ ಭ್ರಷ್ಟಾಚಾರ ಜನರ ದಿಕ್ಕು ತಪ್ಪಿಸುವುದು ಸುಳ್ಳು ಹೇಳುವುದು ಅವ್ಯಾಹತವಾಗಿ ನಡೆದಿದೆ. ಈ ದೇಶವು ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಯಾವುದೇ ಯೋಜನೆಗೆ ಸಾರ್ವಜನಿಕರ ತೆರಿಗೆ ಹಣವೇ ಬಳಕೆಯಾಗುವುದು ಎಂಬುದನ್ನು ಪ್ರಜ್ಞಾವಂತರು ಅರಿತುಕೊಳ್ಳಬೇಕು’ ಎಂದರು.

‘ಕೊರತೆ ನೀಗಿಸಲು ಕ್ರಮವಹಿಸಿ’

‘ಜ್ಞಾನ ಧ್ಯಾನ ಎಲ್ಲರಿಗೂ ಮುಖ್ಯ. ಈ ಶತಮಾನದಲ್ಲಿ ಜ್ಞಾನ ಇದ್ದವರಿಗಷ್ಟೇ ಮಹತ್ವ ಸಿಗುತ್ತದೆ. ಜ್ಞಾನಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಬುನಾದಿಯಾಗಿದೆ. ಶಾಲೆಗಳಲ್ಲಿನ ಕೊರತೆ ನೀಗಿಸಲು ಸರ್ಕಾರ ಕ್ರಮ ವಹಿಸಬೇಕು. ರಾಜ್ಯ ಶಿಕ್ಷಣ ಪದ್ಧತಿ ಜಾರಿಗೊಳಿಸಿದರೂ ಅದಕ್ಕೆ ಸೃಜನಾತ್ಮಕ ಅಂಶಗಳನ್ನು ಸೇರ್ಪಡೆ ಮಾಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ ‘ಅನ್ನ ವಿದ್ಯೆ ಕೊಟ್ಟವರನ್ನು ಸ್ಮರಿಸಬೇಕು. ಛಬ್ಬಿ ಗ್ರಾಮಕ್ಕೆ ನೀಡಿದ್ದ ₹1 ಕೋಟಿ ಅನುದಾನ ಸದ್ಬಳಕೆಯಾಗಿದೆ. ವಿದ್ಯಾದಾನ ಸಾರ್ಥಕ ಕೆಲಸವಾಗಿದ್ದು ಇಲ್ಲಿ ಕಾಲೇಜನ್ನೂ ನಿರ್ಮಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.