ADVERTISEMENT

ಹುಬ್ಬಳ್ಳಿ: ರಾಜ್ಯೋತ್ಸವ ಆಚರಣೆಗೆ ಹಣ ನೀಡುವಂತೆ ಸಚಿವರ ಹೆಸರಲ್ಲಿ ಬೆದರಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 21:48 IST
Last Updated 3 ನವೆಂಬರ್ 2023, 21:48 IST
   

ಹುಬ್ಬಳ್ಳಿ: ‘ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ₹2 ಲಕ್ಷ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಂಗಡಿ ನಡೆಸದಂತೆ ಮಾಡುತ್ತೇನೆ’ ಎಂದು ಬೆದರಿಸಿದ ಆರೋಪದ ಮೇಲೆ ಮಂಜುನಾಥ ಲೂತಿಮಠ ಸೇರಿದಂತೆ ಎಂಟು ಮಂದಿ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಂಟಿಕೇರಿ ಅಳಗುಂಡಗಿ ಓಣಿಯ ಉದ್ಯಮಿ ವಿಜಯ ಅಳಗುಂಡಗಿ, ಮಂಜುನಾಥ ಲೂತಿಮಠ, ರಾಹುಲ್‌, ಅಮಿತ್‌, ಪ್ರವೀಣ, ಬಸವರಾಜ, ಬಾಲು, ಪ್ರಕಾಶ ಮತ್ತು ವಿಜಯ ವಿರುದ್ಧ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?: ‘ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಅಧ್ಯಕ್ಷ ಎಂದು ಮಂಜುನಾಥ ಲೂತಿಮಠ ಅವರು, ಎರಡು–ಮೂರು ವರ್ಷಗಳಿಂದ ಸಹಚರರ ಜೊತೆ ಬಂದು ಬಟರ್‌ ಮಾರ್ಕೆಟ್‌, ಜವಳಿ ಸಾಲ, ಉಳ್ಳಾಗಡ್ಡಿ ಓಣಿ ವ್ಯಾಪರಸ್ಥರಿಗೆ ಹೆದರಿಸಿ ₹2 ಲಕ್ಷದಿಂದ ₹3 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಅಕ್ಟೋಬರ್‌ 26ರಂದು ಉಳ್ಳಾಗಡ್ಡಿಮಠದ ಬಳಿಯ ನಿಖಿತಾ ಪ್ಲಾಸ್ಟಿಕ್‌ ಅಂಗಡಿ ಬಳಿ, ವಿಜಯ ಅವರನ್ನು ಕರೆಸಿಕೊಂಡು ರಾಜ್ಯೋತ್ಸವಕ್ಕೆ ₹2 ಲಕ್ಷ ಕೊಡಬೇಕು. ಪ್ರತಿ ಮೂರು ತಿಂಗಳಿಗೆ ನೀಡಬೇಕಾದ ₹1.70 ಲಕ್ಷ ಕಡ್ಡಾಯವಾಗಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಂಗಡಿ ನಡೆಸದಂತೆ ಮಾಡುತ್ತೇನೆ’ ಎಂದು ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

‘ನಿಷೇಧಿತ ಪ್ಲಾಸ್ಟಿಕ್‌ ಅಭಿಯಾನ ನಡೆಸಿದ್ದಕ್ಕೆ ನಗರದ ಕೆಲವು ಪ್ಲಾಸ್ಟಿಕ್‌ ವ್ಯಾಪಾರಸ್ಥರು ಹತಾಶರಾಗಿ, ನಾನು ಹಣ ಕೇಳಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಆರೋಪ ಅವರು ಸಾಬೀತು ಪಡಿಸಲಿ’ ಎಂದು ಮಂಜುನಾಥ ಲೂತಿಮಠ ಹೇಳಿದರು.

₹2.94 ಲಕ್ಷ ಆನ್‌ಲೈನ್‌ನಲ್ಲಿ ವಂಚನೆ: ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ ಹೆಚ್ಚು ಹಣ ಪಡೆಯಬಹುದು ಎಂದು ಟೆಲಿಗ್ರಾಮ್‌ ಖಾತೆಯಲ್ಲಿನ ಜಾಹೀರಾತು ನಂಬಿ, ಇಲ್ಲಿಯ ವಿದ್ಯಾನಗರದ ನಿವೃತ್ತ ಸಹಾಯಕ ಪ್ರಾಧ್ಯಾಪಕ ಜಯರಾಜ ಅವರು ₹2.94 ಲಕ್ಷ ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದಾರೆ.

‘ಜಯರಾಜ ಅವರ ಟೆಲಿಗ್ರಾಮ್‌ ಖಾತೆಗೆ ವಂಚಕ, ಪಾರ್ಟ್‌ ಟೈಂ ಉದ್ಯೋಗದ ಸಂದೇಶ ಕಳುಹಿಸಿದ್ದ. ಅದನ್ನು ನಂಬಿದ ಅವರು ಮೊದಲು ಸ್ವಲ್ಪ ಹಣ ಹೂಡಿಕೆ ಮಾಡಿ, ಹೆಚ್ಚುವರಿ ಹಣ ಪಡೆದಿದ್ದರು. ನಂತರ ವಿವಿಧ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ಅಕ್ರಮ ಸಾಗಾಟ; ವಶ

ಪರವಾನಗಿ ಇಲ್ಲದೆ ಮದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿ, ₹24 ಸಾವಿರ ಮೌಲ್ಯದ ಮದ್ಯದ ಬಾಟಲು, ₹31 ಸಾವಿರ ನಗದು ಹಾಗೂ ₹6 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಂಡಿದ್ದಾರೆ.

ವಿಶ್ವೇಶ್ವರ ನಗರದ ನಿವಾಸಿ ಶ್ರೀಕಾಂತಯ್ಯ ಹಿರೇಮಠ ಬಂಧಿತ ಆರೋಪಿ. ಮಾಹಿತಿ ಆಧರಿಸಿ ನಗರದ ಗುಜರಾತ ಭವನದ ಬಳಿ ಪೊಲೀಸರು ದಾಳಿ ನಡೆಸಿದ್ದರು. ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.