ಹುಬ್ಬಳ್ಳಿ: ‘ಕುಟುಂಬದಲ್ಲಿ ಮಹಿಳೆಯೇ ಪ್ರಮುಖ ಪಾತ್ರ ವಹಿಸುತ್ತಾಳೆ. ಅವಳನ್ನು ಸಮಾನವಾಗಿ ಕಾಣುವ ಮೂಲಕ ಘನತೆಯಿಂದ ಬದುಕುವ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಹೇಳಿದರು.
ನಗರದ ಅಕ್ಕನ ಬಳಗದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘದ ಧಾರವಾಡ ಜಿಲ್ಲಾ ಸಮಿತಿ ಶನಿವಾರ ಆಯೋಜಿದ್ದ ‘ಧಾರವಾಡ ಜಿಲ್ಲಾ ಒಂಟಿ ಮಹಿಳೆಯರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ‘ಸಂಘಟನೆ ಬಲವಾಗಿದ್ದಾಗ ಮಾತ್ರ ಬೇಡಿಕೆಗಳು ಈಡೇರಲು ಸಾಧ್ಯ’ ಎಂದರು.
ರಾಜ್ಯ ಪ್ರಾಂತ್ಯ ರೈತ ಸಂಘದ ರಾಜ್ಯ ಘಟಕದ ಆಧ್ಯಕ್ಷ ಕಾಂ.ಯು. ಬಸವರಾಜ್, ‘ರಾಜ್ಯದಲ್ಲಿರುವ ಒಂಟಿ ಮಹಿಳೆಯರ ಸಮೀಕ್ಷೆ ಮಾಡಿ ಪುನರ್ವಸತಿ ಕಲ್ಪಿಸಬೇಕು. 30 ವರ್ಷ ಮೇಲ್ಪಟ್ಟ ಒಂಟಿ ಮಹಿಳೆಯರಿಗೆ ₹10 ಲಕ್ಷ ಠೇವಣಿ ಇಡಬೇಕು, ಮಾಸಿಕವಾಗಿ ₹5 ಸಾವಿರ ನೀಡಲು ಸರ್ಕಾರ ಬಜೆಟ್‌ನಲ್ಲಿ ಘೋಷಿಸಬೇಕು’ ಎಂದು ಆಗ್ರಹಿಸಿದರು.
‘ದೇವದಾಸಿ ಮಹಿಳೆಯರು, ಅವರ ಮಕ್ಕಳು, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾರೆ. ಗಂಡನ ಮನೆಯಲ್ಲಿ ಹಿಂಸೆ, ದೌರ್ಜನ್ಯದಿಂದ ಹೊರಬಂದ ಮಹಿಳೆಯರು ತವರು ಮನೆಯಿಂದಲೂ ದೂರ ತಳ್ಳಲ್ಪಟ್ಟು ಆಸರೆಯಿಲ್ಲದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.
ಒಂಟಿ ಮಹಿಳೆಯರ ಸಂರಕ್ಷಣ ಸಂಘದ ರಾಜ್ಯ ಘಟಕದ ಸಂಚಾಲಕಿ ಬಿ. ಮಾಳಮ್ಮ ಮಾತನಾಡಿ, ‘ಕೆಲವು ಸನ್ನಿವೇಶಗಳಿಂದಾಗಿ ಒಂಟಿಯಾಗುವ ಮಹಿಳೆಯರಿಗೆ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಇವರ ನೋವಿಗೆ ಧ್ವನಿಯಾಗಲು, ಘನತೆಯ ಬದುಕನ್ನು ಕಟ್ಟಿಕೊಳ್ಳಲು ಈ ಸಮಾವೇಶ ಆಯೋಜಿಸಲಾಗಿದೆ. ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಮುನ್ನಡೆಯಬೇಕು’ ಎಂದರು.
‘ಶಾಸಕ ಎನ್.ಎಚ್. ಕೋನರಡ್ಡಿ ದೂರವಾಣಿ ಮುಖಾಂತರ ಮಾತನಾಡಿ, ಸಂಘದ ಹಕ್ಕೋತ್ತಾಯಗಳನ್ನು ಪರಿಗಣಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ, ನ್ಯಾಯ ಕೊಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ’ ಎಂದು ಸಂಘದ ಗೌರವ ಸಂಚಾಲಕ ಮಹೇಶ ಪತ್ತಾರ ತಿಳಿಸಿದರು.
ಸುಜಾತಾ ಬೆಸ್ತರ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಂಚಾಲಕಿ ಸವಿತಾ ಪಾಟೀಲ, ಕಾರ್ಮಿಕ ಮುಖಂಡ ಜಿ.ಎಂ. ವೈದ್ಯ, ಎಚ್. ದುರುಗಮ್ಮ ಮಾತನಾಡಿದರು. ಮಂಜುಳಾ ಪವಾರ, ಸುನಂದಾ ಚಿಗರಿ, ಶಕುಂತಲಾ ತಹಶೀಲ್ದಾರ, ರಾಧಾ ಗುಡಿಹಾಳ, ಚನ್ನವ್ವ ಹೊಂಗಲ್, ಅನ್ನಪೂರ್ಣ ಮಡಿವಾಳರ, ಸುನಿತಾ ಸಿದ್ಲಿಂಗ್, ಫಕ್ಕೀರವ್ವ ತೆಂಬದಮನಿ ಇದ್ದರು.
ಆಧುನಿಕ ದಿನಗಳಲ್ಲೂ ಲಿಂಗ ತಾರತಮ್ಯ ಹೆಚ್ಚಾಗಿದೆ. ಸರ್ಕಾರದ ಯೋಜನೆಗಳಲ್ಲೂ ಒಂಟಿ ಮಹಿಳೆಯರಿಗೆ ಅನ್ಯಾಯ ಮಾಡಲಾಗಿದೆ. ವಿದ್ಯಾವಂತ ಒಂಟಿ ಮಹಿಳೆಯರಿಗೆ ಉದ್ಯೋಗ ನೀಡಬೇಕುಬಿ.ಮಾಳಮ್ಮ ರಾಜ್ಯ ಘಟಕದ ಸಂಚಾಲಕಿ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘ
ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಂಡು ಕೂಲಿ ಕೆಲಸ ಮಾಡಿಕೊಂಡಿರುವೆ. ಸಮಾವೇಶದಿಂದ ಧೈರ್ಯ ಉತ್ಸಾಹ ಬಂದಿದ್ದು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದೆಬಾಳಮ್ಮ ಶಿರಕೋಳ ಗ್ರಾಮ ನವಲಗುಂದ
ಸಮಾವೇಶದ ತೀರ್ಮಾನಗಳು:
ಒಂಟಿ ಮಹಿಳೆಯರ ಹಕ್ಕೋತ್ತಾಯಗಳಿಗಾಗಿ ಆಗಸ್ಟ್‌ನಲ್ಲಿ ತಾಲ್ಲೂಕು ಮಟ್ಟದ ಹಾಗೂ ಅಕ್ಟೋಬರ್‌ನಲ್ಲಿ ಜಿಲ್ಲಾ ಮಟ್ಟದ ಹೋರಾಟ ಹಾಗೂ ಕೇಂದ್ರ ರಾಜ್ಯ ಬಜೆಟ್ ಪೂರ್ವದಲ್ಲಿ ವಿಧಾನಸೌಧ ಚಲೋ ಹೋರಾಟ ನಡೆಸಲು ಮತ್ತು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ಬೇಡಿಕೆಗಳು: ಒಂಟಿ ಮಹಿಳೆಯರು ಗಂಡನಿಂದ ದೂರಾದ ಗಂಡ ಇಲ್ಲದ ಮಹಿಳೆಯರು ಹಾಗೂ 45 ವರ್ಷದೊಳಗಿನ ಮಹಿಳೆಯರ ಮದುವೆಗೆ ₹5 ಲಕ್ಷ ಪ್ರೋತ್ಸಾಹ ಧನ ನೀಡಬೇಕು. ವಿದ್ಯಾವಂತ ಮಹಿಳೆಗೆ ಉದ್ಯೋಗ ಅಥವಾ ಮಾಸಿಕ ₹10 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು. ದೌರ್ಜನ್ಯಕ್ಕೊಳಗಾಗಿ ಗರ್ಭಿಣಿ ಹಾಗೂ ಬಾಣಂತಿಯರಾದ ಒಂಟಿ ಮಹಿಳೆಯರಿಗೆ ಕನಿಷ್ಠ18 ತಿಂಗಳು ಮಾಸಿಕ ₹10 ಸಾವಿರ ವಿಶೇಷ ಧನಸಹಾಯ ಹಾಗೂ ವೈದ್ಯಕೀಯ ನೆರವು ಒದಗಿಸಬೇಕು. ವೃದ್ಧ ಒಂಟಿ ಮಹಿಳೆಯರಿಗೆ ಉಚಿತ ಊಟ ವಸತಿ ವಸ್ತ್ರ ಸಹಿತ ಸರ್ಕಾರಿ ವೃದ್ಧಾಶ್ರಮಗಳನ್ನು ಗ್ರಾಮ ಪಂಚಾಯಿತಿಗೆ ಒಂದರಂತೆ ತೆರೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.