ADVERTISEMENT

ಕರ್ನಾಟಕ ವಿಶ್ವವಿದ್ಯಾಲಯ | ಅನುದಾನ ಕೊರತೆ; ಮಾರ್ಚ್‌ ಪಿಂಚಣಿ ಸ್ಥಗಿತ

ಬಿ.ಜೆ.ಧನ್ಯಪ್ರಸಾದ್
Published 5 ಏಪ್ರಿಲ್ 2025, 5:12 IST
Last Updated 5 ಏಪ್ರಿಲ್ 2025, 5:12 IST
ಕರ್ನಾಟಕ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯವು ಹಣಕಾಸಿನ ಕೊರತೆಯಿಂದ ಮಾರ್ಚ್‌ ತಿಂಗಳ ಪಿಂಚಣಿ ಪಾವತಿಸಿಲ್ಲ. ಕೆಲವು ಪಿಂಚಣಿದಾರರಿಗೆ ನಿವೃತ್ತಿ ಉಪದಾನ (ಡಿಸಿಆರ್‌ಜಿ), ಗಳಿಕೆ ರಜೆ (ಇಎಲ್‌) ನಗದು ನೀಡುವುದು ಬಾಕಿ ಇದೆ.

75 ವರ್ಷಗಳ ಇತಿಹಾಸವುಳ್ಳ ಈ ವಿಶ್ವವಿದ್ಯಾಲಯದಲ್ಲಿ 1,748 ನಿವೃತ್ತ ನೌಕರರು ಇದ್ದಾರೆ. ಅವರಿಗೆ ಒಟ್ಟು ₹ 9 ಕೋಟಿ ಪಿಂಚಣಿ ಪಾವತಿಸಬೇಕು. ಕೆಲ ನಿವೃತ್ತ ನೌಕರರ ಡಿಸಿಆರ್‌ಜಿ, ಇಎಲ್‌ ಬಾಕಿ ಪಾವತಿಗೆ ₹ 12 ಕೋಟಿ ಪಾವತಿಸುವುದು ಬಾಕಿ ಇದೆ.

ಅನುದಾನ ಇಲ್ಲದ ಕಾರಣ ಮಾರ್ಚ್‌ ಪಿಂಚಣಿ ನೀಡಿಲ್ಲ. ಉನ್ನತ ಶಿಕ್ಷಣ ಇಲಾಖೆಯು 6 ವಿಶ್ವವಿದ್ಯಾಲಯಗಳ ಹಣಕಾಸು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಸರ್ಕಾರದ ಗಮನದಲ್ಲೂ ಇದೆ.
ಪ್ರೊ.ಕೃಷ್ಣಮೂರ್ತಿ, ಹಣಕಾಸು ಅಧಿಕಾರಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

ಪಿಂಚಣಿಗಾಗಿ ವಿಶ್ವವಿದ್ಯಾಲಯಕ್ಕೆ ₹ 126 ಕೋಟಿ ಅನುದಾನ ಅಗತ್ಯ ಇದೆ. ಸರ್ಕಾರ ₹ 55 ಕೋಟಿ ಹಂಚಿಕೆ ಮಾಡಿದೆ. ಬಾಕಿ ಹಣವನ್ನು ವಿಶ್ವವಿದ್ಯಾಲಯ ಆಂತ‌ರಿಕ ಮೂಲಗಳಿಂದ ಹೊಂದಿಸುವಂತೆ ಸೂಚಿಸಿದೆ.

ADVERTISEMENT

‘ವಿವಿಧ ಕೋರ್ಸ್‌ ದಾಖಲಾತಿ ಶುಲ್ಕ, ಗ್ರಂಥಾಲಯ, ಪ್ರಯೋಗಾಲಯ ಶುಲ್ಕ ಇತ್ಯಾದಿಯಿಂದ ₹ 24 ಕೋಟಿ ಸಂಗ್ರಹ ಆಗುತ್ತದೆ. ಆಂತರಿಕ ಮೂಲಗಳಿಂದ ಪಿಂಚಣಿ ಪಾವತಿ ಕಷ್ಟ. ಸರ್ಕಾರಿ ಪದವಿ ಕಾಲೇಜುಗಳ ನಿವೃತ್ತ ನೌಕರರಿಗೆ ನೀಡಲು ಸರ್ಕಾರ ಒಂದು ವ್ಯವಸ್ಥೆ ಕಲ್ಪಿಸಿದೆ. ವಿಶ್ವವಿದ್ಯಾಲಯದ ನಿವೃತ್ತ ನೌಕರರಿಗೂ ಅದನ್ನು ಅನ್ವಯಿಸಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಕೃಷ್ಣಮೂರ್ತಿ ತಿಳಿಸಿದರು.

ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಐದು ಸಂಯೋಜಿತ ವಿದ್ಯಾಲಯಗಳು, ಎರಡು ‌ಸ್ನಾತಕೋತ್ತರ ಕೇಂದ್ರಗಳು (ಗದಗ ಮತ್ತು ಕಾರವಾರ), ಒಂದು ಪ್ರೌಢಶಾಲೆ, ಒಂದು ಪ್ರಾಥಮಿಕ ಶಾಲೆ ಇವೆ.

‘ನಮಗೆ 80 ವರ್ಷ ವಯಸ್ಸಾಗಿದೆ. ಆಸ್ಪತ್ರೆ ಖರ್ಚು, ಔಷಧ ಇತ್ಯಾದಿಗೆ ಪಿಂಚಣಿಯನ್ನೇ ಅವಲಂಬಿಸಿದ್ದೇವೆ. ಪಿಂಚಣಿ ಪಾವತಿ ವಿಳಂಬ ಮಾಡಬಾರದು. ವಿಶ್ವವಿದ್ಯಾಲಯದ ಅಧಿಕಾರಿಗಳು ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು’ ಎಂದು ನಿವೃತ್ತ ನೌಕರರೊಬ್ಬರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.