ADVERTISEMENT

ಕರ್ನಾಟಕ ವಿ.ವಿ | ಪಿಂಚಣಿ ಪಾವತಿಗೆ ಹಣವಿಲ್ಲ: ಪ್ರೊ. ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 0:18 IST
Last Updated 20 ಫೆಬ್ರುವರಿ 2025, 0:18 IST
ಪ್ರೊ. ಸಿ.ಕೃಷ್ಣಮೂರ್ತಿ
ಪ್ರೊ. ಸಿ.ಕೃಷ್ಣಮೂರ್ತಿ   

ಧಾರವಾಡ: ‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿವೃತ್ತಿ ವೇತನ ಪಾವತಿಗೆ ಹಣಕಾಸಿನ ಕೊರತೆ ಎದುರಾಗಿದೆ. ಆಂತರಿಕ ಸಂಪನ್ಮೂಲ ಹೊಂದಿಸಿ, ಈವರೆಗೆ ಪಿಂಚಣಿ ಪಾವತಿಸಲಾಗಿದೆ. ಮುಂದಿನ ತಿಂಗಳು ವೇತನ ನೀಡಲು ಹಣ ಇಲ್ಲ’ ಎಂದು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ. ಸಿ.ಕೃಷ್ಣಮೂರ್ತಿ ತಿಳಿಸಿದರು.

‘ವಿಶ್ವವಿದ್ಯಾಲಯದ ಎಲ್ಲ ಆಂತರಿಕ ಸಂಪನ್ಮೂಲವನ್ನು ಪಿಂಚಣಿಗೆ ಬಳಸಲಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘1,800 ನಿವೃತ್ತ ನೌಕರರ ಪಿಂಚಣಿಗೆ ತಿಂಗಳಿಗೆ ₹9 ಕೋಟಿ, ವರ್ಷಕ್ಕೆ ₹126 ಕೋಟಿ ಅನುದಾನ ಬೇಕು. ಸರ್ಕಾರ ಒಮ್ಮೆ ₹ 50 ಕೋಟಿ, ಮತ್ತೊಮ್ಮೆ ₹20 ಕೋಟಿ ನೀಡಿದೆ. ಪಿಂಚಣಿ ಬಾಬ್ತಿಗೆ ಇನ್ನೂ ₹50 ಕೋಟಿ ಅನುದಾನ ಬೇಕು’ ಎಂದರು.

ADVERTISEMENT

‘ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಡಿ (ಎಚ್‌ಆರ್‌ಎಂಎಸ್‌) ವಿಶ್ವವಿದ್ಯಾಲಯದ ನೌಕರರಿಗೆ ಸರ್ಕಾರ ವೇತನ ಪಾವತಿಸುತ್ತಿದೆ. ಪಿಂಚಣಿ ನೀಡುವ ನಿಟ್ಟಿನಲ್ಲಿ ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸ್ಪಂದನೆ ಸಿಗುತ್ತಿಲ್ಲ. ಇನ್ನೊಂದು ವಾರದಲ್ಲಿ ಬೆಂಗಳೂರಿಗೆ ನಿಯೋಗದೊಂದಿಗೆ ತೆರಳಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.

ಪ್ರಭಾರ ಕುಲಪತಿ ಪ್ರೊ. ಎಸ್‌. ಜಯಶ್ರೀ ಮಾತನಾಡಿ, ‘ನಿವೃತ್ತ ನೌಕರರಿಗೂ ಎಚ್‌ಆರ್‌ಎಂಎಸ್‌ ಮೂಲಕ ಪಿಂಚಣಿ ಪಾವತಿಸಲು ಸರ್ಕಾರ ಕ್ರಮ ವಹಿಸಿದರೆ ಅನುಕೂಲವಾಗುತ್ತದೆ. ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನದಡಿ (ಪಿಎಂಉಷಾ) ವಿಶ್ವವಿದ್ಯಾಲಯಕ್ಕೆ ₹20 ಕೋಟಿ ಅನುದಾನ ಮಂಜೂರಾಗಿದೆ. ಇಲ್ಲಿನ ಸಸ್ಯವನದ ಅಭಿವೃದ್ಧಿಗೆ ಅನುದಾನದ ಸ್ವಲ್ಪ ಭಾಗವನ್ನು ಬಳಸುವ ಉದ್ದೇಶವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.