ADVERTISEMENT

ಯೋಗೀಶಗೌಡ ಕೊಲೆ ಪ್ರಕರಣ: ಸೋಮುಗೌಡ ನ್ಯಾಮಗೌಡಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 14:58 IST
Last Updated 9 ಜುಲೈ 2021, 14:58 IST
ಧಾರವಾಡ ಉಪನಗರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ವಿಚಾರಣೆ ನಡೆಸಿದ ಬಳಿಕ ಕೆಎಎಸ್‌ ಅಧಿಕಾರಿ ಸೋಮುಗೌಡ ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಕಾರಿನಲ್ಲಿ ಕರೆದುಕೊಂಡು ಹೋಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು 
ಧಾರವಾಡ ಉಪನಗರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ವಿಚಾರಣೆ ನಡೆಸಿದ ಬಳಿಕ ಕೆಎಎಸ್‌ ಅಧಿಕಾರಿ ಸೋಮುಗೌಡ ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಕಾರಿನಲ್ಲಿ ಕರೆದುಕೊಂಡು ಹೋಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು    

ಧಾರವಾಡ: ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆಗೆ ಒಳಪಟ್ಟ ಬ್ಯಾಡಗಿ ಎಪಿಎಂಸಿ ಕಾರ್ಯದರ್ಶಿ ಸೋಮುಗೌಡ ನ್ಯಾಮಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಶುಕ್ರವಾರ ಒಪ್ಪಿಸಲಾಯಿತು.

ಗುರುವಾರ ಬಂಧಿಸಿದ್ದ ಸಿಬಿಐ ಅಧಿಕಾರಿಗಳು ದಿನವಿಡೀ ಸುದೀರ್ಘ ವಿಚಾರಣೆ ನಡೆಸಿ ನಡೆಸ ನಂತರ ಒಂದು ದಿನ ಪೊಲೀಸ್ ಕಸ್ಟಡಿಗೆ ಪಡೆಯುವಲ್ಲಿ ಸಫಲರಾಗಿದ್ದರು. ಅದರಂತೆಯೇ ಶುಕ್ರವಾರ ಸುದೀರ್ಘ ವಿಚಾರಣೆ ನಡಸಿದ ಅಧಿಕಾರಿಗಳು, ಸಂಜೆ ಸೋಮುಗೌಡರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಬೆಳಿಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ, ವಿನಯ ಕುಲಕರ್ಣಿ ಆಪ್ತ ಕೆಂಪೇಗೌಡ ಪಾಟೀಲ, ಯೋಗೀಶಗೌಡ ಪತ್ನಿ ಮಲ್ಲಮ್ಮ ಮತ್ತು ಯೋಗೀಶಗೌಡ ಜಿಮ್ ತರಬೇತುದಾರ ವಿವೇಕ ದಳವಾಯಿ ಅವರನ್ನು ದೀರ್ಘ ಕಾಲ ವಿಚಾರಣೆಗೆ ಒಳಪಡಿಸಿದರು.

ADVERTISEMENT

ವಿಚಾರಣೆಗೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಮುತ್ತಗಿ, ‘ನನ್ನ ಹೋರಾಟದ ಹಾದಿಯನ್ನು ಎಲ್ಲರೂ ನೋಡಿದ್ದಾರೆ. ನಾನು ಕೀಳು ಮಟ್ಟದ ರಾಜಕಾರಣ ಮಾಡುವವನಲ್ಲ.ರಾಜಕೀಯ ವಿಷಯವಾಗಿ ಯೋಗೀಶಗೌಡ ಕೊಲೆಯಾಗಿದೆ ಎಂಬ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನನ್ನ ನಂಬಿದ ಹುಡುಗರಿಗಾಗಿ ಸಾಕಷ್ಟು ವಿಚಾರಗಳನ್ನು ಸಿಬಿಐ ಮುಂದೆ ಹೇಳಿದ್ದೇನೆ’ ಎಂದರು.

‘ವಿನಯ ಕುಲಕರ್ಣಿ ಪರ ವಕೀಲರು ನನ್ನ ಜಾಮೀನು ರದ್ದು ಮಾಡಿ ಎಂದು ಹೇಳಿರುವುದು ಸರಿಯಲ್ಲ. ಅವರ ಮನಸ್ಥಿತಿ ಮತ್ತು ಅವರ ಉದ್ದೇಶ ದಿನ ಕಳೆದಂತೆ ಗೊತ್ತಾಗುತ್ತಿದೆ. ವಿನಯ ಅವರ ಬಗ್ಗೆ ನನಗೆ ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲ. ಅವರಿಗೆ ಹೆದರುವವನು ನಾನಲ್ಲ. ಸತ್ಯದ ಪರವಾಗಿ ಇಂದಿನಿಂದ ನನ್ನ ಹೋರಾಟ ನಡೆಯತ್ತದೆ. ಹಲವಾರು ವಿಚಾರಗಳನ್ನು ಸಿಬಿಐಗೆ ಈಗಾಗಲೇ ತಿಳಿಸಿದ್ದೇನೆ. ಇದರಿಂದ ನನ್ನ ಜೀವಕ್ಕೂ ತೊಂದರೆಯಾಗುವ ಸಾಧ್ಯತೆಗಳಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.