
ಹುಬ್ಬಳ್ಳಿ: ಧಾರವಾಡ, ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕುಡಿಯುವ ನೀರು, ಗೋದಾಮು, ರಸ್ತೆ, ಮಳಿಗೆ ಸೇರಿ ವಿವಿಧ ಮೂಲಸೌಕರ್ಯಗಳ ಕೊರತೆಯಿದ್ದು, ಅವುಗಳನ್ನು ನೀಗಿಸುವುದಕ್ಕಾಗಿಯೇ 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ₹500 ಕೋಟಿ ಅನುದಾನ ಮೀಸಲಿಡಬೇಕು ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಭಾಗದ ಎಪಿಎಂಸಿ ಮಾರುಕಟ್ಟೆಗಳು ಇಂದಿಗೂ ಅಗತ್ಯ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಇದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಕೆಲ ಎಪಿಎಂಸಿಗಳಲ್ಲಿ ಉತ್ತಮ ರಸ್ತೆಗಳು ಇದ್ದರೂ, ರೈತ ಭವನ, ಕುಡಿಯುವ ನೀರು, ಶೌಚಾಲಯ ಮತ್ತು ನೆರಳಿನ ವ್ಯವಸ್ಥೆಯಿಲ್ಲದೆ ರೈತರು ಪರದಾಡುತ್ತಿದ್ದಾರೆ.
ಇನ್ನೂ ಕೆಲ ಎಪಿಎಂಸಿಗಳಲ್ಲಿ ವ್ಯಾಪಾರ ಮಳಿಗೆಗಳಿಲ್ಲದೇ ರೈತರು ರಸ್ತೆ ಬದಿ, ಶೆಡ್‌ಗಳಲ್ಲಿ ದಲಾಲರು ಕೇಳಿದ ದರಕ್ಕೆ ಬೆಳೆಗಳನ್ನು ಮಾರಾಟ ಮಾಡುತ್ತಿರುವುದೂ ಇದೆ.
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯು ವಿಶಾಲವಾಗಿದೆ. ಇಲ್ಲಿ ಈರುಳ್ಳಿ, ಒಣಮೆಣಸಿನಕಾಯಿ, ಕಾಳುಕಡಿ ವಿಭಾಗ, ಅಕ್ಕಿ, ಹೂವು–ಹಣ್ಣು, ತರಕಾರಿ ಸಗಟು ವ್ಯಾಪಾರ ಹೆಚ್ಚು ನಡೆಯುತ್ತಿದೆ. ತರಕಾರಿ ಸಗಟು ಮಾರುಕಟ್ಟೆ ವಿಭಾಗದಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಈರುಳ್ಳಿ ಹಾಗೂ ಒಣಮೆಣಸಿನಕಾಯಿ ಋತುವಿನಲ್ಲಿ ಕೋಟಿಗಟ್ಟಲೆ ರೂಪಾಯಿ ವಹಿವಾಟು ನಡೆಯುತ್ತದೆ.
ಇಲ್ಲಿ ವಿಶಾಲವಾದ ಉತ್ತಮ ರಸ್ತೆಗಳಿವೆ. ಆದರೆ, ಇಲ್ಲಿಗೆ ಬರುವ ರೈತರ ಸಂಖ್ಯೆಗೆ ಅನುಗುಣವಾಗಿ ರೈತಭವನ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಬೆಳೆಗಳ ರಕ್ಷಣೆಗೆ ಅಗತ್ಯ ಶೀತಲೀಕರಣ ಘಟಕ/ ಗೋದಾಮು ಸೌಲಭ್ಯಗಳಿಲ್ಲ.
ಉತ್ತರ ಕರ್ನಾಟಕದ ಜಿಲ್ಲೆಗಳ ರೈತರು ಸೇರಿದಂತೆ ನೆರೆಯ ರಾಜ್ಯದ ರೈತರೂ ಇಲ್ಲಿಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬರುತ್ತಾರೆ. ರೈತರ ಬೆಳೆಗಳ ರಕ್ಷಣೆಗಾಗಿ ಶೀತಲೀಕರಣ ಘಟಕ, ಗೋದಾಮು ನಿರ್ಮಿಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಾರುಕಟ್ಟೆ ಆವರಣದಲ್ಲಿಯೇ ಪೊಲೀಸ್ ಠಾಣೆ ಆರಂಭಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರೈತರು ಮನವಿ ಸಲ್ಲಿಸಿದರೂ ಇಂದಿಗೂ ಈಡೇರಿಲ್ಲ. ರೈತರಿಂದ ಲಕ್ಷಾಂತರ ರೂಪಾಯಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಆದರೆ, ಆ ಮಟ್ಟಿಗಿನ ಸೌಕರ್ಯ ಮಾತ್ರ ಇಲ್ಲ.
ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿಯೂ ಅಗತ್ಯ ಮಳಿಗೆಗಳಿಲ್ಲ, ಸರಿಯಾದ ತೂಕದ ಯಂತ್ರಗಳಿಲ್ಲ, ನಿರ್ವಹಣೆ ಸಮಸ್ಯೆಯಿದೆ. ಕುಡಿಯುವ ನೀರು, ಶೌಚಾಲಯ ಸಮಸ್ಯೆ ಸೇರಿದಂತೆ ಹಲವು ಸೌಕರ್ಯಗಳ ಸಮಸ್ಯೆಯಿದೆ. ರೈತರು, ಜಾನುವಾರು ಖರೀದಿದಾರರು ಹಾಗೂ ಮಾರಾಟಗಾರರು ಇಂದಿಗೂ ತೊಂದರೆ ಅನುಭವಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸೌಕರ್ಯ ಕಲ್ಪಿಸಲು ಈ ಬಾರಿಯ ಬಜೆಟ್‌ನಲ್ಲಿ ₹500 ಕೋಟಿ ಅನುದಾನ ಮೀಸಲಿಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆಜಿ.ಕೆ.ಆದಪ್ಪಗೌಡರ, ಅಧ್ಯಕ್ಷ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ
ಅಮರಗೋಳದ ಎಪಿಎಂಸಿ ಮಾರುಕಟ್ಟೆ ವಿಶಾಲವಾಗಿದ್ದು ಸುತ್ತಮುತ್ತಲ ಜಿಲ್ಲೆಗಳಿಂದ ಹೆಚ್ಚು ಸಂಖ್ಯೆಯಲ್ಲಿ ರೈತರು ಬರುತ್ತಾರೆ. ಇಲ್ಲಿ ಶೀತಲೀಕರಣ ಘಟಕ ಸೇರಿ ಮೂಲಸೌಕರ್ಯಗಳ ಉನ್ನತೀಕರಣವಾಗಬೇಕಿದೆಕೆ.ಎಚ್. ಗುರುಪ್ರಸಾದ್, ಎಪಿಎಂಸಿ ಕಾರ್ಯದರ್ಶಿ
ಎಪಿಎಂಸಿಗಳಲ್ಲಿ ಕುಡಿಯುವ ನೀರು ತೂಕದ ಯಂತ್ರ ವೈಫೈ ಸೌಲಭ್ಯ ಸೇರಿದಂತೆ ರೈತರಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ರೈತಭವನಗಳ ಸೌಲಭ್ಯ ಕಲ್ಪಿಸಿಕೊಡಬೇಕುಸುರೇಶ ಕಿರೇಸೂರ, ಮಾಜಿ ಅಧ್ಯಕ್ಷ ಎಪಿಎಂಸಿ ಅಮರಗೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.