ಹುಬ್ಬಳ್ಳಿ: ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿ ಜಾರಿಯಾದ ಪರಿಣಾಮ ರಾಷ್ಟ್ರಧ್ವಜ ಪೂರೈಸುವ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರದಲ್ಲಿ (ಕೆಕೆಜಿಎಸ್‌ಎಸ್) ರಾಷ್ಟ್ರಧ್ವಜ ಮಾರಾಟದಲ್ಲಿ ತೀವ್ರ ಕುಸಿತವಾಗಿದ್ದು, ಈ ವರ್ಷ ಜುಲೈ 20ರವರೆಗೆ ಕೇವಲ ₹30 ಲಕ್ಷ ವಹಿವಾಟು ಆಗಿದೆ.
2022ರಲ್ಲಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ದಾಖಲೆ ಪ್ರಮಾಣದಲ್ಲಿ ರಾಷ್ಟ್ರಧ್ವಜ ಮಾರಾಟವಾಗಿತ್ತು. ₹4.28 ಕೋಟಿಗೂ ಅಧಿಕ ವಹಿವಾಟು ನಡೆದಿತ್ತು. ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು, ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ 2023–24 ಹಾಗೂ 2024–25ರಲ್ಲಿ ಖಾದಿ ಧ್ವಜಗಳ ಬೇಡಿಕೆ ಕುಸಿಯಿತು.
‘ಪ್ರತಿವರ್ಷ ಕೋಟಿಗಟ್ಟಲೆ ವಹಿವಾಟು ನಡೆಯುತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈವರೆಗೆ ಶೇ 25ರಷ್ಟು ಮಾತ್ರ ವಹಿವಾಟು ನಡೆದಿದೆ. ಜೂನ್ ಹಾಗೂ ಜುಲೈನಲ್ಲಿ ಜಮ್ಮು ಕಾಶ್ಮೀರ, ಛತ್ತೀಸಗಢ, ಕೋಲ್ಕತ್ತ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಇರುತಿತ್ತು. ಆದರೆ ಈ ಬಾರಿ ಬೇಡಿಕೆ ತೀವ್ರ ಕುಸಿದಿದೆ’ ಎಂದು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಾಗಲೇ ₹2 ಕೋಟಿ ಮೊತ್ತದ ಧ್ವಜಗಳನ್ನು ತಯಾರಿಸಲಾಗಿದೆ. ಅವು ಮಾರಾಟವಾಗದಿದ್ದಲ್ಲಿ ಆರ್ಥಿಕ ಹೊರೆ ಆಗಲಿದೆ. ಕೈಯಿಂದ ಧ್ವಜ ತಯಾರಿಸುವುದು ಹೆಚ್ಚು ಶ್ರಮ ಹಾಗೂ ವೆಚ್ಚದಾಯಕ. ಪಾಲಿಸ್ಟರ್‌ನಿಂದ ತಯಾರಿಸುವ ಧ್ವಜಗಳ ಬೆಲೆ ಕಡಿಮೆ. ಹೆಚ್ಚಿನ ಜನರು ಅವುಗಳನ್ನು ಖರೀದಿಸುತ್ತಾರೆ. ಹೀಗಾಗಿ ಬೇಡಿಕೆ ಕುಸಿದಿದೆ’ ಎಂದರು.
‘ಕರ್ನಾಟಕದಲ್ಲಿ ಆಗಸ್ಟ್ ಮೊದಲ ವಾರದ ನಂತರ ಪೂರೈಸಲಾಗುತ್ತದೆ. ಈ ಬಾರಿ ಬೆಂಗೇರಿ ಕೇಂದ್ರದಲ್ಲಿ 35ರಿಂದ 40 ಮಹಿಳೆಯರು ಧ್ವಜ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಉಳಿದ ಕಾರ್ಯದಲ್ಲಿ 400 ಕಾರ್ಮಿಕರು ತೊಡಗಿದ್ದಾರೆ. ಅವರಿಗೆ ಒಂದು ತಿಂಗಳ ವೇತನ ನೀಡುವುದು ಬಾಕಿ ಇದೆ’ ಎಂದರು.
‘ಬೆಂಗೇರಿಯಲ್ಲಿ ಸಿದ್ಧಪಡಿಸುವ ರಾಷ್ಟ್ರಧ್ವಜಕ್ಕೆ ಹತ್ತಿಯನ್ನು ಗದಗ ಹಾಗೂ ಕಚ್ಚಾ ಸಾಮಗ್ರಿಗಳನ್ನು ಬಾಗಲಕೋಟೆ ಹಾಗೂ ಚಿತ್ರದುರ್ಗದಿಂದ ಪೂರೈಸಲಾಗುತ್ತದೆ. ಆದರೆ ಖಾದಿ ಬಟ್ಟೆಯನ್ನು ಕತ್ತರಿಸುವುದು, ಹೊಲಿಯುವುದು, ಚಕ್ರ ಅಚ್ಚೊತ್ತುವುದು, ಒಣಗಿಸುವುದು ಹಾಗೂ ಅಚ್ಚುಕಟ್ಟಾಗಿ ಇಸ್ತ್ರಿ ಮಾಡಿ, ಬೇರೆಡೆ ರಫ್ತು ಮಾಡುವ ಕಾರ್ಯ ಬೆಂಗೇರಿ ಕೇಂದ್ರದಲ್ಲಿಯೇ ಮಾಡಲಾಗುತ್ತದೆ’ ಎಂದು ತಿಳಿಸಿದರು.
‘ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಪ್ರಕಾರ 9 ವಿವಿಧ ಅಳತೆಯ ಧ್ವಜಗಳನ್ನು ಸಿದ್ಧಪಡಿಸಿ, ಮಾರಾಟ ಮಾಡಲಾಗುತ್ತದೆ. ಅಳತೆಗೆ ತಕ್ಕಂತೆ ₹250ರಿಂದ ₹30,150 ರವರೆಗೆ ಧ್ವಜಗಳ ದರ ನಿಗದಿಪಡಿಸಲಾಗಿದೆ. 10ರಿಂದ 12 ಅತೀ ದೊಡ್ಡ ಧ್ವಜಗಳಿಗೆ (21x14 ಅಡಿ) ಬೇಡಿಕೆ ಇರುತ್ತದೆ. ಇವುಗಳನ್ನು ನರಗುಂದ ಗುಡ್ಡ, ಜೆಎಸ್‌ಡಬ್ಲ್ಯು ಸಿಮೆಂಟ್ ಕಂಪನಿ ಹಾಗೂ ಗ್ವಾಲಿಯರ ಪೋರ್ಟ್ ಸೇರಿದಂತೆ ವಿವಿಧೆಡೆ ಹಾರಿಸಲಾಗುತ್ತದೆ. 3x2 ಅಡಿ ಅಳತೆಯ ಧ್ವಜಗಳು ಹೆಚ್ಚು ಮಾರಾಟವಾಗುತ್ತವೆ’ ಎಂದು ಶಿವಾನಂದ ತಿಳಿಸಿದರು.
ಈ ವರ್ಷ ₹2.5 ಕೋಟಿವರೆಗೆ ವಹಿವಾಟು ನಿರೀಕ್ಷಿಸಲಾಗಿತ್ತು. ಆದರೆ ಬೇಡಿಕೆ ಪ್ರಮಾಣ ಗಮನಿಸಿದರೆ ಒಂದು ಕೋಟಿ ದಾಟುವುದು ಅನುಮಾನವಾಗಿದೆಶಿವಾನಂದ ಮಠಪತಿ ಕಾರ್ಯದರ್ಶಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆ
ಧಾರವಾಡದ ಗರಗ ಖಾದಿ ಕೇಂದ್ರದಲ್ಲಿ ಈವರೆಗೆ 3x2 ಅಡಿ ಅಳತೆಯ 400ಕ್ಕೂ ಹೆಚ್ಚು ಧ್ವಜಗಳು ಮಾರಾಟವಾಗಿ ₹6 ಲಕ್ಷ ವಹಿವಾಟು ನಡೆದಿದೆ. ₹10 ಲಕ್ಷ ರಿಂದ ₹12 ಲಕ್ಷ ಮೊತ್ತದ ಧ್ವಜಗಳನ್ನು ತಯಾರಿಸಲಾಗಿದೆಈಶ್ವರಪ್ಪ ಇಟಗಿ ಅಧ್ಯಕ್ಷ ಗರಗ ಖಾದಿ ಕೇಂದ್ರ
ವರ್ಷದಿಂದ ವರ್ಷಕ್ಕೆ ಖಾದಿ ಧ್ವಜದ ಬೇಡಿಕೆ ಕುಸಿಯುತ್ತಿದೆ. ಸರ್ಕಾರ ಪಾಲಿಸ್ಟರ್ ಧ್ವಜ ಮಾರಾಟ ನಿಷೇಧಿಸಿದರೆ ಮಾತ್ರ ಖಾದಿ ಧ್ವಜಕ್ಕೆ ಬೇಡಿಕೆ ಹೆಚ್ಚಲಿದೆರಮೇಶ ಡೊಂಬರಪೇಟ ವ್ಯಾಪಾರಿ ಸರ್ವೋದಯ ಸೇವಾರಮೇಶ ಡೊಂಬರಪೇಟ ವ್ಯಾಪಾರಿ ಸರ್ವೋದಯ ಸೇವಾ ಕೇಂದ್ರ ಕಟಕೋಳ ಬೆಳಗಾವಿ ಕೇಂದ್ರ ಕಟಕೋಳ ಬೆಳಗಾವಿ
ರಾಷ್ಟ್ರಧ್ವಜ ಮಾರಾಟದ ಅಂಕಿ–ಅಂಶ ವರ್ಷ;ಮಾರಾಟವಾದ ಧ್ವಜ;ಮೊತ್ತ (ಕೋಟಿಗಳಲ್ಲಿ) 2020–21;16290;₹1.15 2021–22;20171;₹2.5 2022–23;28850;₹4.28 2023-24;18614;₹2.26 2024–25;12922;₹1.89
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.