ಹುಬ್ಬಳ್ಳಿ: ‘ಧಾರವಾಡ ಮಾತ್ರವಲ್ಲದೇ ಉತ್ತರದ ಅನೇಕ ಜಿಲ್ಲೆಗಳ ಜನರ ನಂಬಿಕೆ ಗಳಿಸಿದ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಉತ್ತರ ಕರ್ನಾಟಕದ ಸಂಜೀವಿನಿ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಕಿಮ್ಸ್ ಹಾಗೂ ಕನ್ನಡ ಸಂಘ ಜಂಟಿಯಾಗಿ ಆಯೋಜಿಸಿದ್ದ ಹತ್ತನೇ ವರ್ಷದ ಕನ್ನಡ ಹಬ್ಬದ ‘ಡಿಂಡಿಮ’ ಸಮಾರಂಭದ ಎರಡನೇ ದಿನದ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕನ್ನಡವನ್ನು ವಿಜೃಂಭಿಸುತ್ತಿರುವ ಕಿಮ್ಸ್ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಕಾರ್ಯ ಶ್ಲಾಘನೀಯ’ ಎಂದರು.
‘ಹೆತ್ತ ತಾಯಿ, ತಾಯಿ ಭಾಷೆ, ಹುಟ್ಟಿದ ಊರು, ವಿದ್ಯೆ ನೀಡಿದ ಗುರು, ಸಹಾಯ ಮಾಡಿದ ಹಸ್ತವನ್ನು ಎಂದಿಗೂ ಮರೆಯಬಾರದು. ತಾಯಿಯ ಋಣ ತೀರಿಸಲಾಗದು. ಹೆತ್ತವರನ್ನು ವೃದ್ಧಾಶ್ರಕ್ಕೆ ಕಳುಹಿಸುವ ಪದ್ಧತಿ ಕೊನೆಗೊಳ್ಳಬೇಕು’ ಎಂದರು.
ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಮಾತನಾಡಿ, ‘ಸೆ.6 ರೊಳಗೆ ಕಿಮ್ಸ್ ಅನ್ನು ‘ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ’ಯಾಗಿ ಮರುನಾಮಕರಣ ಮಾಡಲಾಗುವುದು’ ಎಂದು ತಿಳಿಸಿದರು.
ಕಿಮ್ಸ್ ಪ್ರಾಚಾರ್ಯ ಡಾ.ಈಶ್ವರ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಆಡಳಿತಾಧಿಕಾರಿ ರಮೇಶ ಕಳಸದ, ವೈದ್ಯಕೀಯ ಅಧೀಕ್ಷಕ ಡಾ.ಎಸ್ ರಾಜಶೇಖರ್, ಆರ್ಥಿಕ ಸಲಹೆಗಾರ್ತಿ ಅಂಜನಾ ಡವಳೇಶ್ವರ, ಸಾಮಾನ್ಯ ಚಟುವಟಿಕೆಗಳ ಅಧ್ಯಕ್ಷೆ ಡಾ.ಜಾನಕಿ ತೊರವಿ, ಡಾ.ರಾಜಶೇಖರ ದ್ಯಾಬೇರಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕಿಮ್ಸ್) ‘ಡಿಂಡಿಮ’ ಸಮಾರಂಭದಲ್ಲಿ ಅಕ್ಕಮ್ಮ ಮತ್ತು ತಂಡದವರು ಸೋಬಾನ ಪದ ಪ್ರಸ್ತುತಪಡಿಸಿದರು
ಮೆರಗು ತಂದ ಸಂಗೀತ
‘ಡಿಂಡಿಮ’ದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸಂಗೀತ ವಾದ್ಯಗಳು ಗೀಗೀ ಪದ ಸೊಬಾನ ಪದ ಕನ್ನಡ ಗೀತೆಗಳು ಜಾನಪದ ಕಲಾ ತಂಡಗಳು ಸಮಾರಂಭದ ಮೆರಗು ಹೆಚ್ಚಿಸಿದವು. ವಾದ್ಯ ಘೋಷ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ನುಡಿಸಿದ ಕೊಳಲು ಕೀಬೋರ್ಡ್ ಡ್ರಂ ವಾದನಕ್ಕೆ ಪ್ರೇಕ್ಷಕರು ತಲೆಯಾಡಿಸಿದರು. ಇಮಾಮಸಾಬ್ ಮಲ್ಲೆಪ್ಪನವರ ಅವರ ಕಲಾ ತಂಡ ಗೀಗೀ ಪದ ಜಾನಪದ ಗೀತೆಗಳನ್ನು ಹಾಡಿ ರಂಗೇರಿಸಿತು. ಕನ್ನಡ ಗೀತೆಗಳು ಕನ್ನಡದ ಕಲರವವರನ್ನು ಹಬ್ಬಿಸಿದವು. ಅಕ್ಕಮ್ಮ ಮತ್ತು ತಂಡದವರು ಸೋಬಾನ ಪದ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.