ADVERTISEMENT

ಹುಬ್ಬಳ್ಳಿಯಲ್ಲಿ 20ರಿಂದ ಗಾಳಿಪಟ ಉತ್ಸವ

ರಂಜಿಸಲಿರುವ ವಿಜಯ ಪ್ರಕಾಶ, ಅರ್ಚನಾ ಉಡುಪ, ಗಂಗಾವತಿ ಪ್ರಾಣೇಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 11:28 IST
Last Updated 16 ಜನವರಿ 2020, 11:28 IST
   

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕ್ಷಮತಾ ಸಂಸ್ಥೆಯು ಕುಸುಗಲ್‌ ರಸ್ತೆಯಲ್ಲಿರುವ ಆಕ್ಸ್‌ಫರ್ಡ್ ಕಾಲೇಜು ಹತ್ತಿರದ ಮೈದಾನದಲ್ಲಿ ಜ. 20 ಹಾಗೂ 21ರಂದು ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಹಮ್ಮಿಕೊಂಡಿದೆ.

ಸಂಸ್ಥೆಯ ಟ್ರಸ್ಟಿ ಗೋವಿಂದ ಜೋಶಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ದೇಶ, ವಿದೇಶಗಳಿಂದ ಗಾಳಿಪಟ ಹಾರಿಸುವವರು ಪಾಲ್ಗೊಳ್ಳಲಿದ್ದಾರೆ. ಭೂಮಿ ಮೇಲೆ 15 ಕೆ.ಜಿ. ಭಾರ ಇರುವ ಡ್ರ್ಯಾಗನ್‌ ಪತಂಗ ಆಕಾಶದಲ್ಲಿ ಹಾರಾಡಿದಾಗ 150 ಕೆ.ಜಿ. ಭಾರವಾಗುತ್ತದೆ. ಇದು ಉತ್ಸವದ ಆಕರ್ಷಣೆಯಾಗಿದ್ದು, ಲಂಡನ್‌, ಇಂಗ್ಲೆಂಡ್‌, ಅಮೆರಿಕ, ಫ್ರಾನ್ಸ್‌ ಸೇರಿದಂತೆ 15 ದೇಶಗಳ ಸುಮಾರು 25 ಗಾಳಿಪಟ ಹಾರಿಸುವವರು ಬರಲಿದ್ದಾರೆ’ ಎಂದರು.

‘ಉತ್ಸವದ ಮೊದಲ ದಿನ ಬೆಳಿಗ್ಗೆ 10 ಗಂಟೆಗೆ ಅಂತರರಾಷ್ಟ್ರೀಯ ಚಿತ್ರಕಲಾ ಕಲಾವಿದ ವಿಲಾಸ ನಾಯಕ ಅವರಿಂದ ಚಿತ್ರ ಪ್ರದರ್ಶನ, ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಮತ್ತು ಮನರಂಜನಾ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ, ಖ್ಯಾತ ಸಂಗೀತಗಾರರಾದ ವಿಜಯ ಪ್ರಕಾಶ, ಅರ್ಚನಾ ಉಡುಪ ಹಾಗೂ ಅವರ ತಂಡದವರಿಂದ ಸಂಗೀತ ಸಂಜೆ ಜರುಗಲಿದೆ’ ಎಂದರು.

ADVERTISEMENT

‘21ರಂದು ಬೆಳಿಗ್ಗೆ 11.30ಕ್ಕೆ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ಧೆ ಹಾಗೂ ಪ್ರದರ್ಶನ, ಉತ್ಸವದ ಸಮಾರೋಪ ಮತ್ತು ಸಂಜೆ 6 ಗಂಟೆಗೆ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ಸವ ನೋಡಲು ಬರುವ ಹತ್ತು ಸಾವಿರ ಮಕ್ಕಳಿಗೆ ಗಾಳಿ‍ಪಟ ನೀಡಲಾಗುವುದು. ಪಟ ಹಾರಿಸಲು ಅಪಾಯಕಾರಿಯಾದ ಮಂಜಾ ದಾರ ಬಳಸದಿರುವಂತೆ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ನಾಗೇಶ ಕಲಬುರ್ಗಿ, ಸುಧೀರ ಸರಾಫ್‌, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಮಹೇಶ ದೂಶಿ, ಮಹೇಂದ್ರ ಕೌತಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.