ಕೃಷಿ ಮೇಳದಲ್ಲಿ ಹೆಸರು ನೊಂದಾಯಿಸಲು ವಿದ್ಯಾರ್ಥಿನಿಯರು ಮಾರ್ಗದರ್ಶನ ನೀಡಿದರು
ಧಾರವಾಡ: ‘ಎತ್ತ ನೋಡಿದರೂ ಜನಸಾಗರ. ಮೇಳಕ್ಕೆ ಆಗಮಿಸಲು ಮತ್ತು ನಿರ್ಗಮಿಸಲು ನಾಲ್ಕು ಕಡೆ ಪ್ರತ್ಯೇಕ ದ್ವಾರಗಳಿವೆ. ಆದರೂ ಜನದಟ್ಟಣೆ ಹೆಚ್ಚುತ್ತಿದೆ. ಯಾವ ದಿಕ್ಕಿನಲ್ಲಿ ಹೇಗೆ ಹೋಗಬೇಕು? ಎಷ್ಟು ದೂರ ಹೋಗಬೇಕೆಂದು ತಿಳಿಯುತ್ತಿಲ್ಲ. ಒಂದೇ ದಿನದಲ್ಲಿ ಇಡೀ ಮೇಳ ಸುತ್ತು ಹಾಕಲು ಆಗದು. ಎಲ್ಲಾ ಮಳಿಗೆಯವರನ್ನು ಮಾತನಾಡಿಸಲು ಕನಿಷ್ಠ ಎರಡು ದಿನ ಬೇಕು’.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಮೇಳದ ಎರಡನೇ ದಿನ ಭಾನುವಾರ ಜನರಿಂದ ಕೇಳಿ ಬಂದ ಮಾತುಗಳಿವು. ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಅಲ್ಲದೇ ಸಾರ್ವಜನಿಕರು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಮೇಳಕ್ಕೆ ಭೇಟಿ ನೀಡಿದರು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಅಲ್ಲಿನ ವಿಶೇಷತೆಗಳನ್ನು ಕಂಡು ಬೆರಗಾದರು. ಕಾಲಿಡಲು ಆಗದಷ್ಟು ದಟ್ಟಣೆಯಿದ್ದರೂ ವೃದ್ಧರು ಉತ್ಸಾಹದಿಂದಲೇ ಸುತ್ತಾಡಿದರು. ಅಲ್ಲಲ್ಲಿ ಆಗಾಗ್ಗೆ ಕೆಲವರು ವಿಶ್ರಾಂತಿ ಪಡೆದರು. ನಂತರ ಮತ್ತೆ ಹುರುಪಿನಿಂದ ಮುನ್ನಡೆದರು.
ಕೃಷಿ ವಿಶ್ವವಿದ್ಯಾಲಯದ ಮುಖ್ಯದ್ವಾರ ದಾಟಿ ಪ್ರವೇಶಿಸುತ್ತಿದ್ದಂತೆಯೇ ಎಡಭಾಗದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಮಳಿಗೆಗಳು. ಅದರ ಬದಿಯಲ್ಲಿ ನೋಂದಣಿ ಕೇಂದ್ರ. ಇನ್ನೂ ಸ್ವಲ್ಪ ಮುಂದೆ ಹೆಜ್ಜೆ ಹಾಕಿದರೆ, ಮತ್ತೆ ಸಾಲು ಮಳಿಗೆಗಳ ದರ್ಶನ. ಕೃಷಿ, ಕೃಷಿಯೇತರ ಉತ್ಪನ್ನಗಳು, ವಾಹನಗಳು, ಫಲಪುಷ್ಪ ಪ್ರದರ್ಶನ, ಕೀಟಗಳ ಪ್ರದರ್ಶನ ಸೇರಿ ವೈವಿಧ್ಯಮಯ ಮಳಿಗೆಗಳು ಕುತೂಹಲ ಮೂಡಿಸುತ್ತವೆ. ವಿವಿಧ ವಿಷಯಗಳ ಕುರಿತು ಜ್ಞಾನ ಒದಗಿಸುತ್ತವೆ.
ಜನರಿಗೆ ಗೊಂದಲ ಆಗದಿರಲಿಯೆಂದು ಮೇಳದಲ್ಲಿ ಪ್ರತ್ಯೇಕ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕೃಷಿ ಮತ್ತು ಕೃಷಿಯೇತರ ವಿಷಯಗಳಿಗೆ ಸಂಬಂಧಿಸಿದ ಮಳಿಗೆಗಳು ಅಕ್ಕಪಕ್ಕದಲ್ಲಿದ್ದರೆ, ಅವುಗಳ ಬದಿಯಲ್ಲಿ ಯಶಸ್ವಿ ರೈತರದ್ದೇ ಪ್ರತ್ಯೇಕ ಮಳಿಗೆಳಿವೆ. ಇವುಗಳ ಜೊತೆಗೆ ಗೊಬ್ಬರ, ಸಸ್ಯಪಾಲನೆ, ಬೀಜ, ನೀರಾವರಿ, ಸಣ್ಣ ಮತ್ತು ದೊಡ್ಡ ಯಂತ್ರೋಪಕರಣಗಳು ಆಕರ್ಷಿಸುತ್ತವೆ. ಮೇಳದ ಹೊರವಲಯದಲ್ಲಿ ಅಲ್ಲಲ್ಲಿ ಖಾನಾವಳಿ, ತಿಂಡಿ ಮತ್ತು ಆಹಾರ ಮಳಿಗೆಗಳಿವೆ.
‘ಕಳೆದ ಸಲಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಹಲವರು ಕೃಷಿ ಉಪಕರಣ, ಸಸಿಗಳನ್ನು ಖರೀದಿಸಿದ್ದಾರೆ. ಇನ್ನೂ ಕೆಲವರು ಜಾನುವಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಮೇಳವನ್ನು ಸಂಪೂರ್ಣವಾಗಿ ಸುತ್ತು ಹಾಕಿ ನೋಡಲು ತುಂಬಾ ಸಮಯ ಬೇಕು. ಮೇಳಕ್ಕೆ ಬಂದಿದ್ದು ತುಂಬಾ ಖುಷಿ ಕೊಟ್ಟಿದೆ’ ಎಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಭರಮಪ್ಪ ತಿಳಿಸಿದರು.
ನೋಂದಣಿಗೆ ಪಡಿಪಾಟಲು
ನೋಂದಣಿ ಕೇಂದ್ರದಲ್ಲಿ ಎಲ್ಲರಿಗೂ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ನೋಂದಣಿ ಮಾಡಿಕೊಳ್ಳಲು ಹೇಳಲಾಗುತಿತ್ತು. ಸ್ಮಾರ್ಟ್‌ಫೋನ್ ಹೊಂದಿರದ ಬಹುತೇಕರಿಗೆ ಅದು ಅರ್ಥ ಆಗುತ್ತಿರಲಿಲ್ಲ. ಸ್ಮಾರ್ಟ್ ಫೋನ್‌ವುಳ್ಳವರಿಗೆ ಸ್ಕ್ಯಾನ್ ಮಾಡಲು ಬರುತ್ತಿರಲಿಲ್ಲ. ಕೃಷಿ ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ಅವರಿಗೆ ನೆರವಾದರು. ಗೊಂದಲ ನಿವಾರಿಸಿದರು.
ಬಸ್ ಸಮಸ್ಯೆ
ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರೂ ಮಧ್ಯಾಹ್ನದ ವೇಳೆ ಜನರು ಬಸ್ ಸಿಗದೇ ಪರದಾಡಿದರು. ಬಸ್ ಬರುತ್ತಿದ್ದಂತೆಯೇ ಅದರೊಳಗೆ ನುಗ್ಗುತ್ತಿದ್ದ ಜನರನ್ನು ನಿಯಂತ್ರಿಸಲು ಪ್ರಯಾಸಪಟ್ಟ ಸಾರಿಗೆ ಸಿಬ್ಬಂದಿ, ‘ಬೆಳಿಗ್ಗೆಯಿಂದ ಕರ್ತವ್ಯದಲ್ಲಿದ್ದೇವೆ. ಊಟ ಮಾಡಲು ಕಾಲಾವಕಾಶ ನೀಡಿ’ ಎಂದರು. ಹೀಗಾಗಿ ಜನರು ಅಲ್ಲಲ್ಲಿ ಓಡಾಡುತ್ತ, ಕೂರುತ್ತ ಕಷ್ಟ ಅನುಭವಿಸಿದರು. ‘ಇನ್ನೂ ಹೆಚ್ಚಿನ ಬಸ್‌ಗಳ ಸೌಲಭ್ಯ ಕಲ್ಪಿಸಬೇಕಿತ್ತು. ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಬೇಕಿತ್ತು’ ಎಂದು ಜನರು ಹೇಳಿದರು.
ಮಾಹಿತಿ, ಮಾರ್ಗರ್ಶನ
ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ ಜೊತೆಗೆ ವಿದ್ಯಾರ್ಥಿಗಳು ಮೇಳಕ್ಕೆ ಬಂದವರಿಗೆಲ್ಲ ಅಗತ್ಯ ಮಾಹಿತಿ, ಮಾರ್ಗದರ್ಶನ ನೀಡಿದರು. ಎಲ್ಲಿಯೂ ಕೂಡ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು. ಮುಖ್ಯ ಪ್ರವೇಶದ್ವಾರದ ಬಳಿಯೇ ಮೇಳದ ನಕ್ಷೆಯನ್ನು ಅಳವಡಿಸಲಾಗಿದೆ. ಅಲ್ಲಿಯೇ ಆಯಾ ದಿನದ ಕಾರ್ಯಕ್ರಮಗಳ ಪಟ್ಟಿಯೂ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.