ADVERTISEMENT

ನವನಗರದ ಕೆಎಸ್ಎಲ್‌ ಶುಭಾರಂಭ

ರಾಜ್ಯ ಕಾನೂನು ವಿ.ವಿ. ಅಂತರ ಕಾಲೇಜುಗಳ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 2:50 IST
Last Updated 12 ಏಪ್ರಿಲ್ 2019, 2:50 IST
ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಕಾನೂನು ವಿ.ವಿ. ಕುಲಪತಿ ಪ್ರೊ. ಈಶ್ವರ ಭಟ್ಟ ಮಾತನಾಡಿದರು
ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಕಾನೂನು ವಿ.ವಿ. ಕುಲಪತಿ ಪ್ರೊ. ಈಶ್ವರ ಭಟ್ಟ ಮಾತನಾಡಿದರು   

ಹುಬ್ಬಳ್ಳಿ: ನವನಗರದಲ್ಲಿರುವ ಕೆಎಸ್‌ಎಲ್‌ ಕಾನೂನು ಶಾಲಾ ತಂಡ ಗುರುವಾರ ಆರಂಭವಾದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಕೆಎಸ್‌ಎಲ್‌ ಕಾಲೇಜು ತಂಡ ತನ್ನ ಮೊದಲ ಪಂದ್ಯದಲ್ಲಿ ಚಿಕ್ಕೋಡಿಯ ಕೆ.ಎಲ್‌. ಕಾಲೇಜು ಎದುರು 76 ರನ್‌ಗಳ ಗೆಲುವು ಪಡೆಯಿತು. ನಾಲ್ಕು ದಿನ ನಡೆಯುವ ಟೂರ್ನಿಯಲ್ಲಿ ಒಟ್ಟು 24 ತಂಡಗಳು ಪಾಲ್ಗೊಂಡಿವೆ.

ನಾಕೌಟ್‌ ಮಾದರಿಯಲ್ಲಿ ಟೂರ್ನಿ ಜರುಗಲಿದೆ. ಮೊದಲ ದಿನ ಎಂಟು ಪಂದ್ಯಗಳು ನಡೆದವು. ಏ. 14ರಂದು ಬೆಳಿಗ್ಗೆ 11 ಗಂಟೆಗೆ ಬಿ.ವಿ.ಬಿ. ಕಾಲೇಜು ಮೈದಾನದಲ್ಲಿ ಫೈನಲ್‌ ನಡೆಯಲಿದೆ.

ADVERTISEMENT

ಮೊದಲ ದಿನ ನಡೆದ ಪಂದ್ಯಗಳಲ್ಲಿ ಗದಗಿನ ಎಸ್‌.ಎ. ಮಾನ್ವಿ ಕಾಲೇಜು ತಂಡ ಬೆಂಗಳೂರಿನ ಬಿಎಂಎಸ್‌ ಮೇಲೂ, ಮೈಸೂರಿನ ವಿದ್ಯಾವರ್ಧಕ ಕಾಲೇಜು ಧಾರವಾಡ ಹುರಕಡ್ಲಿ ಕಾಲೇಜು ವಿರುದ್ಧವೂ, ಬೆಂಗಳೂರಿನ ಅಲ್‌ ಅಮೀನ್‌ ಕಾಲೇಜು ಧಾರವಾಡದ ಕೆಪಿಎಸ್‌ ಮೇಲೂ, ಬೆಂಗಳೂರಿನ ಬಿಲ್ಸ್‌ ಕಾಲೇಜು ಜೆಎಸ್‌ಎಸ್‌ ಸಕ್ರಿ ಕಾಲೇಜು ವಿರುದ್ಧವೂ, ಬೆಂಗಳೂರಿನ ಎಂ.ಎಸ್‌. ರಾಮಯ್ಯ ಕಾಲೇಜು ಬೆಳಗಾವಿಯ ಬಿ.ವಿ. ಬೆಲ್ಲದ ಕಾಲೇಜು ಮೇಲೂ, ವಿಜಯಪುರದ ಅಂಜಮನ್‌ ಕಾಲೇಜು ದಾವಣಗೆರೆಯ ಆರ್.ಎಲ್‌. ಕಾಲೇಜು ವಿರುದ್ಧವೂ ಗೆಲುವು ಪಡೆದವು.

ಉದ್ಘಾಟನೆ:ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಟೂರ್ನಿಗೆ ಚಾಲನೆ ನೀಡಿದ ಕಾನೂನು ವಿ.ವಿ. ಕುಲಪತಿ ಪ್ರೊ. ಈಶ್ವರ ಭಟ್ಟ ‘ಕ್ರಿಕೆಟ್‌ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದೆ. ಕಾನೂನು ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು’ ಎಂದರು.

ಜಿ.ಕೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಾರದಾ ಜಿ. ಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ.ಪಿ. ಚೌರಿ, ವಿ.ವಿ. ಯ ಕ್ರೀಡಾ ವಿಭಾಗದ ನಿರ್ದೇಶಕ ಡಾ. ಖಾಲೀದ್ ಖಾನ್‌, ಡಾ.ಎಸ್‌.ಎಂ ಹುಲ್ಲೂರ, ವಿನುತಾ ಕುಲಕರ್ಣಿ, ಬಾಹುಬಲಿ ಕುರಕುರಿ, ಸತೀಶ ನಾಶಿಪುಡಿ, ನಝೀಪಾ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.