ADVERTISEMENT

ಸಾರಿಗೆ ನೌಕರರ ಮುಷ್ಕರ: ಹುಬ್ಬಳ್ಳಿಯಲ್ಲಿ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 3:13 IST
Last Updated 5 ಆಗಸ್ಟ್ 2025, 3:13 IST
   

ಹುಬ್ಬಳ್ಳಿ: ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಬೆಂಬಲ ವ್ಯಕ್ತವಾಗಿದೆ.

ಹುಬ್ಬಳ್ಳಿ ಗ್ರಾಮೀಣ ಹಾಗೂ ನಗರ ಘಟಕದಿಂದ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ಬಹುತೇಕ ಬಸ್‌ಗಳು ಘಟಕಗಳಲ್ಲಿಯೇ ನಿಂತಿವೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಬಿಆರ್‌ಟಿಎಸ್ ಚಿಗರಿ ಬಸ್‌ಗಳ ಸಂಚಾರ ಸಹ ಸ್ಥಗಿತವಾಗಿದೆ.

ಗ್ರಾಮೀಣ ಹಾಗೂ ಇತರೆ ಭಾಗಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ ಹಾಗೂ ಗೋಕುಲ‌ ರಸ್ತೆ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ. ನಗರದ ವಿವಿಧ ಪ್ರದೇಶಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಆಟೊ ಮೊರೆ ಹೋಗುತ್ತಿದ್ದಾರೆ.

ADVERTISEMENT

ಹೊರ ರಾಜ್ಯಗಳ ಬಸ್‌ಗಳು ಹಾಗೂ ಸೋಮವಾರ ರಾತ್ರಿ ಬೆಂಗಳೂರು, ಕಲಬುರ್ಗಿ, ಮಂಗಳೂರು, ದಾಟವಣಗೆರಿ ಭಾಗದಿಂದ ಹೊರಟ ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ರೈಲ್ವೆ ನಿಲ್ದಾಣದ ಬಳಿಯ ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರು ಚಿಗರಿ ಬಸ್‌ಗಳ ಸಂಚಾರವಿಲ್ಲದೆ ಪರದಾಡುತ್ತಿದ್ದಾರೆ.

'ಪ್ರಯಾಣಿಕರ ಬೇಡಿಕೆಗೆ ತಕ್ಕಷ್ಟು ಬಸ್‌ಗಳನ್ನು ಓಡಿಸುತ್ತಿದ್ದೇವೆ. ಗ್ರಾಮಾಂತರ ವಿಭಾಗಗಳಿಂದ ಕಲಘಟಗಿ, ಅಣ್ಣಿಗೇರಿ, ನವಲಗುಂದ, ಕುಂದಗೋಳ ಭಾಗಕ್ಕೆ ಪ್ರಯಾಣಿಕ‌ರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ' ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.