ADVERTISEMENT

₹27 ಸಾವಿರ ಕೋಟಿ ದಾಟಿದ ಕೆವಿಜಿ ಬ್ಯಾಂಕ್ ವಹಿವಾಟು

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 13:05 IST
Last Updated 28 ಜೂನ್ 2021, 13:05 IST

ಧಾರವಾಡ: ‘ಕೆನರಾ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಕಳೆದ ಆರ್ಥಿಕ ವರ್ಷದಲ್ಲಿ ಶೇ 5.90ರ ಪ್ರಗತಿ ದರದಲ್ಲಿ ₹27,818 ಕೋಟಿ ವಹಿವಾಟು ದಾಖಲಿಸಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಪಿ. ಗೋಪಿಕೃಷ್ಣ ತಿಳಿಸಿದರು.

‘2019–20ನೇ ಸಾಲಿನಲ್ಲಿ ಬ್ಯಾಂಕು ₹124.89ಕೋಟಿ ಕಾರ್ಯನಿರ್ವಹಣಾ ಲಾಭವನ್ನು ಗಳಿಸಿದೆ. ಆದಾಯ ತೆರಿಗೆ ಹಾಗೂ ಇನ್ನಿತರ ಶುಲ್ಕ ಪಾವತಿಸಿಯೂ ಬ್ಯಾಂಕು ₹6.50ಕೋಟಿ ನಿಕ್ಕಿ ಲಾಭಗಳಿಸಿದೆ. ಆ ಮೂಲಕ ಬ್ಯಾಂಕಿನ ಸಂಪತ್ತು ₹1192.62ಕೋಟಿಗೆ ಹೆಚ್ಚಿದೆ’ ಎಂದು ಸೋಮವಾರ ವರ್ಚ್ಯುಲ್ ವೇದಿಕೆಯಲ್ಲಿ ನಡೆದ ಸುದ್ದಿಗೋಷ್ಠಿ ತಿಳಿಸಿದರು.

‘ಒಟ್ಟು 9 ಜಿಲ್ಲೆಗಳಲ್ಲಿ 629 ಶಾಖೆಗಳನ್ನು ಹೊಂದಿರುವ ಬ್ಯಾಂಕಿನ ಠೇವಣಿ ಸಂಗ್ರಹಣೆಯು ₹16,100ಕೋಟಿ ಮಟ್ಟವನ್ನು ತಲುಪಿದ್ದು, ಗ್ರಾಹಕರ ಸಂಖ್ಯೆ 89ಲಕ್ಷಕ್ಕೆ ಏರಿದೆ. 2020–21ನೇ ಸಾಲಿನಲ್ಲಿ ₹7,068ಕೋಟಿಷ್ಟು ಸಾಲ ನೀಡಲಾಗಿದೆ. ಕಳೆದ ಸಾಲಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮೂಲಕ 1.18ಲಕ್ಷ ರೈತರಿಗೆ ₹2,750ಕೋಟಿ ಸಾಲ ವಿತರಿಸಲಾಗಿದೆ. ಇದರೊಂದಿಗೆ ಕೃಷಿ, ಉದ್ಯಮ, ರಿಟೇಲ್ ಸಾಲಗಳಿಗೆ ಬ್ಯಾಂಕ್ ಆದ್ಯತೆ ನೀಡಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕೋವಿಡ್–19 ಸೋಂಕು ಮತ್ತು ಲಾಕ್‌ಡೌನ್‌ ನಂತರದ ಸ್ಥಿತಿಯಲ್ಲಿ ಬ್ಯಾಂಕಿನ ಸಾಲ ವಸೂಲಾತಿ ಮೇಲೆ ಪರಿಣಾಮ ಬೀರಿದ್ದರೂ, ಅನುತ್ಪಾದಕ ಸಾಲದ ಮೇಲೆ ಬ್ಯಾಂಕು ಉತ್ತಮ ನಿಯಂತ್ರಣ ಸಾಧಿಸಿದೆ. ವಿಮಾ ಸೌಕರ್ಯ ಮತ್ತು ಪಿಂಚಣಿ ಯೋಜನೆ ವ್ಯಾಪ್ತಿಗೆ ಹಲವು ಗ್ರಾಹಕರನ್ನು ತಂದ ಪರಿಣಾಮ ಭಾರತೀಯ ಪಿಂಚಣಿ ಪ್ರಾಧಿಕಾರವು ರಾಷ್ಟ್ರಮಟ್ಟದ 17 ಪ್ರಶಸ್ತಿಗಳನ್ನು ಬ್ಯಾಂಕಿಗೆ ನೀಡಿದೆ. ಈ ಎಲ್ಲದರ ಜತೆಗೆ ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹31ಸಾವಿರ ಕೋಟಿ ವಹಿವಟು ದಾಟುವ ಗುರಿಯನ್ನು ಹೊಂದಿದೆ’ ಎಂದು ಗೋಪಿಕೃಷ್ಣ ಹೇಳಿದರು.

ಚಂದ್ರಶೇಖರ ಡಿ. ಮೊರೋ, ಶ್ರೀನಿವಾಸ ರಾವ್, ಬಿ.ಸಿ.ರವಿಚಂದ್ರ, ಪಿ. ನಾಗೇಶ್ವರ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.