ADVERTISEMENT

ಉಪ್ಪಿನಬೆಟಗೇರಿ | ಮೂಲ ಸೌಕರ್ಯ ಕೊರತೆ: ವಿದ್ಯಾರ್ಥಿಗಳಿಗೆ ತಪ್ಪದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 5:22 IST
Last Updated 21 ಫೆಬ್ರುವರಿ 2024, 5:22 IST
ಉಪ್ಪಿನಬೆಟಗೇರಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಮುಂಭಾಗದ ಕಾಂಪೌಂಡ್ ಕೆಡವಲಾಗಿದ್ದು, ಆವರವಣ ಅನೈರ್ಮಲ್ಯದಿಂದ ಕೂಡಿದೆ
ಉಪ್ಪಿನಬೆಟಗೇರಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಮುಂಭಾಗದ ಕಾಂಪೌಂಡ್ ಕೆಡವಲಾಗಿದ್ದು, ಆವರವಣ ಅನೈರ್ಮಲ್ಯದಿಂದ ಕೂಡಿದೆ   

ಉಪ್ಪಿನಬೆಟಗೇರಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಉರ್ದು ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಭೋಜನಾಲಯ, ಹೈಟೆಕ್ ಶೌಚಾಲಯ ಇನ್ನಿತರ ಮೂಲಸೌಕಾರ್ಯಗಳು ಮಂಜೂರಾಗಿದೆ. ಕೆಲ ಕಾಮಗಾರಿಗಳು ಕುಂಟುತ್ತ ಸಾಗಿದ್ದು, ಇನ್ನೂ ಕೆಲವು ಹೆಸರಿಗಷ್ಟೇ ಎಂಬಂತಿವೆ.

ಹೆಣ್ಣು ಮಕ್ಕಳ ಶಾಲೆಗೆ ಸ್ಥಳದ ಅಭಾವದಿಂದ ಎರಡು ಕೊಠಡಿಗಳ ಚಾವಣಿ ತೆಗೆದು ಸ್ಲ್ಯಾಪ್ ಹಾಕಲಾಗಿದೆ. ಇದರ ಮೇಲೆ ಭೋಜನಾಲಯದ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಲೆ ಹತ್ತಲು ನಿರ್ಮಿಸಿದ ಮೆಟ್ಟಿಲುಗಳಿಗೆ ಬಳಸಿದ ಕಬ್ಬಿಣದ ಕಂಬಿಗಳು ಹಾಗೇ ಉಳಿದಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುವಂತಿವೆ.

ADVERTISEMENT

ಭೋಜನಾಲಯದ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಅನುದಾನ ಬಾರದೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂಬುದು ಗುತ್ತಿಗೆದಾರರ ಮಾತು.

‘ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಭೋಜನಾಲಯ ಕಟ್ಟಡ ನಿರ್ಮಾಣಕ್ಕೆ ಶಾಲೆಯ ಮುಂಭಾಗದ ಕಾಂಪೌಂಡ್ ಕೆಡವಲಾಗಿದೆ. ಇದರಿಂದಾಗಿ ಶಾಲಾ ಆವರಣದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ. ಮೇಲಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ. ಹೀಗೆ ಮುಂದುವರಿದರೆ ಗ್ರಾಮ ಪಂಚಾಯ್ತಿಗೆ ತೆರಳಿ ಧರಣಿ ನಡೆಸುತ್ತೇವೆ’ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಲ್ಲಪ್ಪ ದಿವಟಗಿ ಎಚ್ಚರಿಸಿದ್ದಾರೆ.

ಸರ್ಕಾರಿ ಗಂಡು ಮಕ್ಕಳ ಶಾಲೆಗೂ ಭೋಜನಾಲಯವಿಲ್ಲ. ಮಕ್ಕಳು ಶಾಲೆಯ ಮುಂಭಾಗದ ಚಾವಣಿಯಲ್ಲಿ ಕುಳಿತು ಊಟ ಮಾಡುವಂತಾಗಿದೆ. ಮೂರು ಮೂತ್ರಾಲಯ ಹಾಗೂ ಒಂದು ಶೌಚಾಲಯವಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಇದು ಸಾಲುತ್ತಿ‌ಲ್ಲ.

‘ಉರ್ದು ಶಾಲೆಗೆ ತೆರಳುವ ರಸ್ತೆ ಮಣ್ಣು ಕಲ್ಲಿನಿಂದ ಕೂಡಿದೆ. ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ತೊಂದರೆಯಾಗುತ್ತಿದೆ. ಈ ಕುರಿತು ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಶಿಕ್ಷಕರು.

‘ಹನುಮನಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಕೊಠಡಿಗಳ ಅಭಾವವಿದ್ದು, ದೇವಸ್ಥಾನದಲ್ಲಿ ಪಾಠ ಹೇಳುವಂತಾಗಿದೆ’ ಎಂದು ಅಲ್ಲಿಯ ಶಿಕ್ಷಕರೊಬ್ಬರು ತಿಳಿಸಿದರು.

ಉಪ್ಪಿನಬೆಟಗೇರಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಮೇಲ್ಭಾಗದ ಭೋಜನಾಲಯಕ್ಕೆ ಹೋಗಲು ನಿರ್ಮಿಸಿದ ಮೆಟ್ಟಿಲುಗಳಿಗೆ ಬಳಸಿದ ಕಬ್ಬಿಣದ ಕಂಬಿಗಳು ಹಾಗೇ ಉಳಿದಿವೆ
ಉಪ್ಪಿನಬೆಟಗೇರಿಯ ಸರ್ಕಾರಿ ಗಂಡು ಮಕ್ಕಳ ಶಾಲೆಗೆ ಭೋಜನಾಲಯವಿಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆ ಮುಂಭಾಗದಲ್ಲಿ ಕುಳಿತು ಊಟ ಮಾಡುತ್ತಾರೆ
ಶಾಲೆಗಳ ಮೂಲಸೌಕರ್ಯಗಳ ಕೊರತೆ ಗಮನಕ್ಕಿದೆ. ಶೀಘ್ರವೇ ಕಾಮಗಾರಿಗೆ ಕ್ರಮ ಕೈಗೊಂಡು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು
-ಬಿ.ಎ.ಬಾವಾಕಾನವರ ಪಿಡಿಒ ಉಪ್ಪಿನಬೆಟಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.