ADVERTISEMENT

ಭಕ್ತರ ದೀಪದಿ ಭಕ್ತಿಯ ಬೆಳಕು

ಸಿದ್ಧಾರೂಢ ಮಠದಲ್ಲಿ ವಿಜೃಂಭಣೆಯಿಂದ ನಡೆದ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 15:34 IST
Last Updated 7 ಡಿಸೆಂಬರ್ 2018, 15:34 IST
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ನಡೆದ ಕಾರ್ತೀಕ ಮಾಸದ ಲಕ್ಷ ದೀಪೋತ್ಸವದಲ್ಲಿ ಸೇರಿದ್ದ ಅಪಾರ ಭಕ್ತ ಸಮೂಹ– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ನಡೆದ ಕಾರ್ತೀಕ ಮಾಸದ ಲಕ್ಷ ದೀಪೋತ್ಸವದಲ್ಲಿ ಸೇರಿದ್ದ ಅಪಾರ ಭಕ್ತ ಸಮೂಹ– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಸಿದ್ಧಾರೂಢ ಮಠದಲ್ಲಿ ಕಾರ್ತೀಕ ಮಾಸದ ಲಕ್ಷ ದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಭಕ್ತ ಸಾಗರ ಭಕ್ತಿಯಿಂದ ಬೆಳಗಿದ ದೀಪದ ಬೆಳಗಿನಲ್ಲಿ ಮಠದ ಆವರಣ ಕಂಗೊಳಿಸಿತು.

ಸೂರ್ಯಾಸ್ತವಾಗುವ ಮೊದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಮಠದತ್ತ ಹೆಜ್ಜೆ ಹಾಕಿದರು. ಲಕ್ಷ ದೀಪದ ಸಂಭ್ರಮಕ್ಕೆ ತಮ್ಮದೊಂದು ಹಣತೆಯ ಸಮರ್ಪಣೆ ಎನ್ನುವಂತೆ ಹಣತೆ ಬೆಳಗಿ ಭಕ್ತಿಯಲ್ಲಿ ಮಿಂದರು. ದೀಪದಿಂದ ದೀಪ ಬೆಳಗುತ್ತಲೇ ಸಾಗಿದಾಗ ಬೆಳಕಿನ ಸಾರ್ಥಕತೆ ಸಾಕಾರಗೊಂಡಿತು. ಕಣ್ಣು ಹಾಯಿಸಿದ ಕಡೆಯೆಲ್ಲ ಬರೀ ಬೆಳಕು ಬೆರುಗು ಮೂಡಿಸಿತು. ಆಕರ್ಷಕ ವಿದ್ಯುತ್ ದೀಪಗಳ ಸರಮಾಲೆ ಮಠ– ಮಂದಿರಕ್ಕೆ ಮೆರುಗು ನೀಡಿತು.

ಆ ನಂತರ ನಡೆದ ಸಿಡಿಮದ್ದು ಪ್ರದರ್ಶನ ವಾತಾವರಣವನ್ನು ಇನ್ನಷ್ಟು ಕಳೆಗಟ್ಟಿಸಿತು. ಒಂದರ ಹಿಂದೊಂದರಂತೆ ಆಕಾಶಕ್ಕೆ ಚಿಮ್ಮಿದ ರಾಕೆಟ್‌ಗಳು ಸಿಡಿದು ಲಕ್ಷ ದೀಪದ ಪ್ರತಿಬಿಂಬವನ್ನು ಭಾನಲ್ಲಿ ಸೃಷ್ಟಿಸಿದವು. ಅದನ್ನು ಉತ್ಸಾಹ– ಕುತೂಹಲದಿಂದ ನೋಡುತ್ತಿದ್ದ ಪುಟಾಣಿಗಳ ಕಣ್ಣಲ್ಲಿಯೂ ದೀಪೋತ್ಸವವಾಯಿತು.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಮಹಾರಾಷ್ಟ್ರ ಮತ್ತು ಗೋವಾದ ಜನರೂ ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ನಗರದ ಶಾಲೆಗಳ ವಿದ್ಯಾರ್ಥಿಗಳು, ಸಂಘ– ಸಂಸ್ಥೆಗಳ ಸದಸ್ಯರೂ ಭಾಗವಹಿಸಿ ಹಣತೆ ಬೆಳಗಿ ಭಕ್ತಿ ಸಮರ್ಪಿಸಿದರು. ಬೆಳಿಗ್ಗೆ ಸಿದ್ಧಾರೂಢರು ಹಾಗೂ ಗುರುನಾಥರೂಢರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಲಾಯಿತು. ಆ ನಂತರ ಅನ್ನಸಂತರ್ಪಣೆ ನಡೆಯಿತು.

ಮಠದ ಆಡಳಿತಾಧಿಕಾರಿಯೂ ಆದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಈಶಪ್ಪ ಕೆ ಭೂತೆ ಅವರು ಕೈಲಾಸ ಮಂಟಪದ ಮುಂಭಾಗ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೀಪಗಳು ಅಂತರಂಗದ ಜ್ಯೋತಿಯಾಗಿ ಬೆಳಗಲಿ ಎಂದು ಅವರು ಆಶಿಸಿದರು. ದೀಪಕ್ಕೆ ಜಾತಿ ಇದೆ, ಬತ್ತಿಗೆ ಜಾತಿ ಇದೆ, ಎಣ್ಣೆಗೆ ಜಾತಿ ಇದೆ ಆದರೆ ಜ್ಯೋತಿಗೆ ಜಾತಿ ಇಲ್ಲ. ಈ ಬೆಳಕಿನಲ್ಲಿ ಅಜ್ಞಾನ ಕಳೆದು ಹೋಗಲಿ ಎಂದು ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ ಹೇಳಿದರು. ನಾಶಿಕ್ ಶರಣಪ್ಪನವರ ಮಠದ ವಾಸುದೇವಾನಂದ ಸ್ವಾಮೀಜಿ, ಸಿದ್ಧಾರೂಢಸ್ವಾಮಿ ಮಠದ ಟ್ರಸ್ಟ್‌ನ ಡಿ.ಡಿ. ಮಾಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.