ಹುಬ್ಬಳ್ಳಿ: ‘ವಕೀಲಿ ವೃತ್ತಿ ಶ್ರೇಷ್ಠವಾದದ್ದು. ಕಾನೂನು ವಿದ್ಯಾರ್ಥಿಗಳು ಹಾಗೂ ವಕೀಲರು ಸದಾ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಬೇಕು’ ಎಂದು ಹೈಕೋರ್ಟ್ ಧಾರವಾಡ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಶಾಂತವೀರ ಶಿವಪ್ಪ ಹೇಳಿದರು.
ಇಲ್ಲಿನ ವಿದ್ಯಾನಗರದ ಜಿ.ಕೆ. ಕಾನೂನು ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಕಾಲೇಜು ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಕೀಲಿ ವೃತ್ತಿಯಲ್ಲಿ ಕಲಿಕೆ ನಿರಂತರ. ವಕೀಲರಲ್ಲಿ ಭಾಷಾ ಕೌಶಲ, ಅಧ್ಯಯನ ಮುಖ್ಯ. ಕಾನೂನು ವಿದ್ಯಾರ್ಥಿಗಳಿಗೆ ಅಣಕು ನ್ಯಾಯಾಲಯದಂತಹ ಪ್ರಾಯೋಗಿಕ ಸ್ಪರ್ಧೆಗಳನ್ನು ಏರ್ಪಡಿಸಬೇಕು. ವಕೀಲರು ಆಧುನಿಕ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಜ್ಞಾನೇಶ್ವರ ಪಿ. ಚೌರಿ ಮಾತನಾಡಿ, ‘ವಕೀಲಿ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು’ ಎಂದು ಕಿವಿಮಾತು ಹೇಳಿದರು.
ಜಿ. ಕೆ. ಕಾನೂನು ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಉಮೇಶ ಎಂ. ಪಾಟೀಲ ಮಾತನಾಡಿ, ‘ನಿರಂತರ ಶ್ರಮದಿಂದ ಉತ್ತಮ ವಕೀಲರಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ವಕೀಲಿ ವೃತ್ತಿಗೆ ಹೆಚ್ಚಿನ ಬೇಡಿಕೆ ಇದೆ. ಕಾನೂನು ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಶಾರದಾ ಜಿ. ಪಾಟೀಲ, ಸಂಜೀವ ಎಂ. ಹುಲ್ಲೂರ, ಪ್ರೊ. ಕವಿತಾ ಬೆಳಗಲಿ, ಪ್ರೊ. ನವೀನ ರಫುಗಾರ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.