ADVERTISEMENT

ಪ್ರಜಾಪ್ರಭುತ್ವ ಗೆಲ್ಲಲಿ: ಕೆ.ಎಸ್‌.ಶರ್ಮಾ

ವೆಂಕಟೇಶ ಶಿಂದಿಹಟ್ಟಿ ಅವರಿಗೆ ‘ಬೆನಕಶ್ರೀ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:57 IST
Last Updated 5 ಫೆಬ್ರುವರಿ 2026, 2:57 IST
ಹುಬ್ಬಳ್ಳಿಯ ಗೋಕುಲ ರಸ್ತೆಯ ಡಾ. ಕೆ.ಎಸ್. ಶರ್ಮಾ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಬುರಗಿಯ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರಿಗೆ ‘ಬೆನಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಹುಬ್ಬಳ್ಳಿಯ ಗೋಕುಲ ರಸ್ತೆಯ ಡಾ. ಕೆ.ಎಸ್. ಶರ್ಮಾ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಬುರಗಿಯ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರಿಗೆ ‘ಬೆನಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ‘ಅನ್ಯಾಯದ ವಿರುದ್ಧ ಹೋರಾಡಲು ನರಬಲಿ ಮಾಡಬೇಕಾಗುತ್ತದೆ ಎಂಬ ವರಕವಿ ದ.ರಾ.ಬೇಂದ್ರೆ ಅವರ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ರಾಕ್ಷಸಿ ಆಡಳಿತ ಕೊನೆಯಾಗಬೇಕು, ಪ್ರಜಾಪ್ರಭುತ್ವ ಗೆಲ್ಲಬೇಕು’ ಎಂದು ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್.ಶರ್ಮಾ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಡಾ.ಕೆ.ಎಸ್.ಶರ್ಮಾ ಕಾಲೇಜಿನ ಸಭಾಂಗಣದಲ್ಲಿ ದ.ರಾ.ಬೇಂದ್ರೆಯವರ 130ನೇ ಜನ್ಮದಿನಾಚರಣೆ, ವಿದ್ಯಾವಿನಾಯಕ ದೇವಾಲಯದ 4ನೇ ವಾರ್ಷಿಕೋತ್ಸವ ಹಾಗೂ ಕಲಬುರಗಿಯ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರಿಗೆ ‘ಬೆನಕಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೇಂದ್ರೆ ಅವರು ನರಬಲಿ ಕವನ ಬರೆದು ಜೈಲುವಾಸ ಅನುಭವಿಸಬೇಕಾಯಿತು. ನರಬಲಿ‌ ಮಾಡೋಕೆ ಸಿದ್ಧರಾಗಿ, ಭಜನೆ ಮಾಡುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು‌ ಅವರು ಸಾರಿದ್ದರು’ ಎಂದರು.

ADVERTISEMENT

ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಕೆ.ಎಸ್.ಶರ್ಮಾ ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವೆಂಕಟೇಶ ಶಿಂದಿಹಟ್ಟಿ ಮಾತನಾಡಿದರು. ದ.ರಾ.ಬೇಂದ್ರೆಯವರು ರಚಿಸಿದ ‘ಗೋಲ್’ ಹಾಗೂ ‘ಶೋಭನಾ’ ನಾಟಕ ಕೃತಿಗಳ ಮರುಮುದ್ರಣಗೊಂಡ ಕೃತಿಗಳು ಮತ್ತು ಹನುಮಂತ ಅಂಕುಶ ಅವರು ರಚಿಸಿದ ‘ನಾ ಕಂಡಂತೆ ಕೆ.ಎಸ್.ಶರ್ಮಾ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ನ್ಯಾಯಾಧೀಶ ಎನ್.ಬಿ.ಕುಲಕರ್ಣಿ, ಧಾರವಾಡ ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು‌.ಬೆಳ್ಳಕ್ಕಿ, ಸುಮಿತ್ರಾ ಪೋತ್ನೀಸ್, ಸುಲೋಚನಾ ಪೋತ್ನಿಸ್, ಅಶ್ವಿನಿ ಶಿಂದಿಹಟ್ಟಿ, ಶ್ರೀನಿವಾಸ ಬನ್ನಿಗೋಳ, ಸಿ.ಸಿ.ಹಿರೇಮಠ, ಸೋಮಶೇಖರ್ ಹುದ್ದಾರ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.