ADVERTISEMENT

ಹುಬ್ಬಳ್ಳಿ: ಮನೆ ಹಕ್ಕುಪತ್ರ ಮಹಿಳೆ ಹೆಸರಲ್ಲಿರಲಿ

ಕೊಳೆಗೇರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ವಸತಿ ಸಚಿವ ವಿ. ಸೋಮಣ್ಣ ಆಶಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 16:39 IST
Last Updated 2 ಅಕ್ಟೋಬರ್ 2021, 16:39 IST
ಹುಬ್ಬಳ್ಳಿ ಚಾಮುಂಡೇಶ್ವರಿ ನಗರದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಸಚಿವ ವಿ. ಸೋಮಣ್ಣ ಅವರು ಶನಿವಾರ ಹಕ್ಕುಪತ್ರ ವಿತರಿಸಿದರು. ಶಾಸಕ ಜಗದೀಶ ಶೆಟ್ಟರ್‌, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಇದ್ದಾರೆ
ಹುಬ್ಬಳ್ಳಿ ಚಾಮುಂಡೇಶ್ವರಿ ನಗರದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಸಚಿವ ವಿ. ಸೋಮಣ್ಣ ಅವರು ಶನಿವಾರ ಹಕ್ಕುಪತ್ರ ವಿತರಿಸಿದರು. ಶಾಸಕ ಜಗದೀಶ ಶೆಟ್ಟರ್‌, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಇದ್ದಾರೆ   

ಹುಬ್ಬಳ್ಳಿ: ‘ಕೊಳೆಗೇರಿ ನಿವಾಸಿಗಳಿಗೆ ನೀಡುವ ಹಕ್ಕುಪತ್ರವನ್ನು ಮಹಿಳೆಯ ಹೆಸರಲ್ಲಿಯೇ ನೀಡಬೇಕು. ಪುರುಷರ ಹೆಸರಲ್ಲಿ ನೀಡಿದರೆ ಕೆಲವರು ಅದನ್ನು ಮಾರಾಟ ಮಾಡುವ ಸಾಧ್ಯತೆ ಇದೆ. ಅಂತಹ ಸಾಕಷ್ಟು ಕುಟುಂಬಗಳನ್ನು ನೋಡಿದ್ದೇನೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚಾಮುಂಡೇಶ್ವರಿ ನಗರದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಶನಿವಾರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

‘ಪ್ರತಿ ಕುಟುಂಬಕ್ಕೂ ಒಂದು ಸೂರು ಇರಬೇಕು ಎನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ವಿವಿಧ ಯೋಜನೆಯಡಿ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೊಳಚೆ ಪ್ರದೇಶದ ನಿವಾಸಿಗಳಿಗೆ ಜಾಗ ನೀಡಿ, ಮನೆ ನಿರ್ಮಿಸಿಕೊಟ್ಟು ಹಕ್ಕುಪತ್ರ ನೀಡಲಾಗುತ್ತಿದೆ’ ಎಂದರು.

ADVERTISEMENT

‘ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಜಿ+2 ಮಾದರಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸರ್ಕಾರ ವಸತಿ ಗೃಹ ನಿರ್ಮಿಸಲು ಸಿದ್ಧವಿದೆ. ಅದಕ್ಕೆ ಸಂಬಂಧಿಸಿದ ಜಾಗದ ಮಾಹಿತಿ ಹಾಗೂ ಪ್ರಸ್ತಾವ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಉಣಕಲ್‌ ರೈಲ್ವೆ ನಿಲ್ದಾಣದ ಪಕ್ಕ 224 ಮನೆಗಳನ್ನು ನಿರ್ಮಿಸಲು ಶಂಕು ಸ್ಥಾಪನೆ ಮಾಡಲಾಗಿದೆ. ಜಗದೀಶ ಶೆಟ್ಟರ್‌ ಅವರ ಪ್ರಯತ್ನದ ಫಲವಾಗಿ ಇದು ಕಾರ್ಯರೂಪಕ್ಕೆ ಬಂದಿದೆ. ಹಾಗಾಗಿ, ಆ ಜಾಗಕ್ಕೆ ಅವರ ಹೆಸರು ಇಡಬೇಕು’ ಎಂದು ಸಲಹೆ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಕೊಳೆಗೇರಿ ನಿವಾಸಿಗಳಿಗೆ ಅನೇಕ ವರ್ಷಗಳಿಂದ ಹಕ್ಕುಪತ್ರ ದೊರೆತಿರಲಿಲ್ಲ. ಜಗದೀಶ ಶೆಟ್ಟರ್ ಸಚಿವರಾಗಿದ್ದಾಗ ಚಾಮುಂಡೇಶ್ವರಿ ನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ತೀರ್ಮಾನಿಸಿದ್ದರು. ಅದರ ಫಲವಾಗಿ ರಾಜ್ಯದಾದ್ಯಂತ ಹಕ್ಕುಪತ್ರ ವಿತರಣೆಗೆ ಚಾಲನೆ ದೊರೆತಿದೆ’ ಎಂದು ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 1.13 ಕೋಟಿ ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಿ, 50 ಕೋಟಿ ಮನೆ ನಿರ್ಮಿಸಿದೆ. ಉಳಿದ ಮನೆಗಳ ನಿರ್ಮಾಣಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರ ₹2 ಲಕ್ಷ ಕೋಟಿ ವಿನಿಯೋಗಿಸಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮತ್ತು ಅಮೃತ ಯೋಜನೆಯಡಿ ಎರಡನೇ ಹಂತದ ಯೋಜನೆ ಘೋಷಣೆ ಮಾಡಿದೆ. ಇದರಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆ ನಗರದ ಗಬ್ಬೂರಲ್ಲಿ ಆರಂಭವಾಗಲಿದೆ. ಇದಕ್ಕಾಗಿ ₹45 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಹಾಗೂ ಎನ್‌ಟಿಪಿಸಿ(ರಾಷ್ಟ್ರೀಯ ವಿದ್ಯುತ್‌ ಉತ್ಪಾದನಾ ನಿಗಮ) ಒಡಂಬಡಿಕೆ ಮಾಡಿಕೊಂಡಿವೆ’ ಎಂದರು.

ಚಾಮುಂಡೇಶ್ವರಿ ನಗರದ ನಿವಾಸಿಗಳು, ಜಗದೀಶ ಶೆಟ್ಟರ್‌ ಅಭಿಮಾನಿ ಬಳಗದವರು ಶಾಸಕ ಜಗದೀಶ ಶೆಟ್ಟರ್‌ ಅವರಿಗೆ ಬೃಹತ್‌ ಹೂಮಾಲೆ ಹಾಕಿ, ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಮಹೇಶ ಕುಮಠಳ್ಳಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಸೀಮಾ ಮೊಗಲಿಶೆಟ್ಟರ್, ವೀರಣ್ಣ ಸವಡಿ, ಸಂತೋಷ ಚವ್ಹಾಣ್, ರೂಪಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.