ವಿಜಯಾನಂದ ಕಾಶಪ್ಪನವರ, ಬಸವಜಯ ಮೃತ್ಯುಂಜಯ ಸ್ವಾಮೀಜಿ
ಹುಬ್ಬಳ್ಳಿ: 'ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ನೂತನ ಸ್ವಾಮೀಜಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಾಗಿಯೇ ಪೀಠ ತೊರೆದರೆ ಸಂತೋಷ' ಎಂದು ಅಖಿಲ ಭಾರತ ಲಿಂಗಯತ ಪಂಚಮಸಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
'ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವರ್ತನೆ, ನಡವಳಿಕೆಯಿಂದ ಸಮಾಜದ ಜನರು ಬೇಸತ್ತಿದ್ದಾರೆ. ಈ ಕುರಿತು ಸಮಾಜದ ಹಿರಿಯರು, ಮುಖಂಡರು, ಜನಪ್ರತಿನಿಧಿಗಳು ಸಭೆ ನಡೆಸಿ ಪರ್ಯಾಯ ಗುರುಗಳ ನೇಮಕದ ಬಗ್ಗೆ ಚರ್ಚಿಸಿದ್ದಾರೆ. ಆ ಕುರಿತು ವ್ಯವಸ್ಥೆ ಸಹ ನಡೆಯುತ್ತಿದೆ. ಈಗಿರುವ ಸ್ವಾಮೀಜಿಯನ್ನು ಮಠ ಬಿಟ್ಟು ಹೋಗಿ ಎಂದು ನಾವಾಗಿಯೇ ಹೇಳುವುದಿಲ್ಲ. ಅವರಾಗಿಯೇ ಹೋದರೆ ಸಂತೋಷ' ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಸಮಾಜದ ಅಭಿವೃದ್ಧಿಗಾಗಿ ಟ್ರಸ್ಟ್ ರಚಿಸಿ, 2008ರಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಲಿಂಗಾಯತ ಪಂಚಮಸಾಲಿ ಮಠಕ್ಕೆ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಬಸವತತ್ವ ಪ್ರಚಾರ ಹಾಗೂ ಸಮಾಜದ ಏಳ್ಗೆಗೆ ಶ್ರಮಿಸಬೇಕಿದ್ದ ಸ್ವಾಮೀಜಿ ಅವರ ನಡುವಳಿಕೆಯಲ್ಲಿ ತೀವ್ರ ಬದಲಾವಣೆಗಳು ಕಂಡುಬಂದವು. ಮೂಲ ಉದ್ದೇಶ ಮರೆತು, ರಾಜಕೀಯ ಪಕ್ಷದ ಬ್ಯಾನರ್ ಅಡಿ ಕುಳ್ಳುವುದು, ವರ್ಗಾವಣೆಗೆ ಶಿಫಾರಸ್ಸು ಮಾಡುವುದು, ಯಾವುದೋ ಒಬ್ಬ ವ್ಯಕ್ತಿ ಪರ ಮಾತನಾಡುವುದು ಮಾಡುತ್ತಿದ್ದಾರೆ. ಅಲ್ಲದೆ, ಮಠದಲ್ಲಿ ಇದ್ದು ಬಸವತತ್ವ ಪ್ರಚಾರ ಮಾಡದೆ, ಊರೂರು ಅಡ್ಡಾಡುತ್ತ, ಮೊಬೈಲ್‌ನಲ್ಲಿ ಮಾತನಾಡುತ್ತ ಪ್ರಚಾರದ ಹಿಂದೆ ಬಿದ್ದಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಟ್ರಸ್ಟ್ ಬೈಲಾ ಪ್ರಕಾರ ಸ್ವಾಮೀಜಿ ಸ್ವಂತ ಆಸ್ತಿ ಹೊಂದುವಂತಿಲ್ಲ. ಅದರೆ, ಬೆಳಗಾವಿಯಲ್ಲಿ ಎರಡು ಮನೆ, ಹುಬ್ಬಳ್ಳಿ-ಬೆಂಗಳೂರಲ್ಲಿ ತಲಾ ಒಂದೊಂದು ಮನೆ ಅವರ ಹೆಸರಲ್ಲಿ ಇವೆ. ಅಲ್ಲದೆ, ಮಲಪ್ರಭಾ ದಂಡೆ ಮೇಲೆ ಮಠ ಕಟ್ಟುತ್ತೇನೆ, ಸಂಸ್ಥೆ ಕಟ್ಟಿ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸುತ್ತೇನೆ ಎಂದು ಸ್ವಾಮೀಜಿಯೇ ಹೇಳಿದ್ದಾರೆ. ಇವೆಲ್ಲ ಬೈಲಾಕ್ಕೆ ವ್ಯತಿರಿಕ್ತವಾಗಿವೆ. ಟ್ರಸ್ಟ್‌ಗೆ ನಾವೇ ವಾರಸ್ದಾರರಾಗಿದ್ದೇವೆ. ಪೀಠವನ್ನು ಮುನ್ನಡೆಸಿಕೊಂಡು ಹೋಗಲಷ್ಟೇ ಸ್ವಾಮೀಜಿಯನ್ನು ನೇಮಕ ಮಾಡಿಕೊಂಡಿದ್ದು' ಎಂದು ಹೇಳಿದರು.
'2019ರಲ್ಲಿ ಸ್ವಾಮೀಜಿ ಟ್ರಸ್ಟ್ ವಿರುದ್ಧವಾಗಿ ನಡೆದುಕೊಂಡಾಗ ನೋಟಿಸ್ ನೀಡಲಾಗಿತ್ತು. ತಪ್ಪು ತಿದ್ದಿಕೊಂಡು ಮುನ್ನಡೆಯುತ್ತೇನೆ ಎಂದು ಅವರು ಹಿಂಬರಹದ ಪತ್ರ ಕೊಟ್ಟಿದ್ದರು. ಆದರೂ, ಅವರು ಮಠದಲ್ಲಿ ಸರಿಯಾಗಿ ಇರದೆ, ಸಂಚಾರದಲ್ಲಿ ನಿರತರಾಗುತ್ತಿದ್ದರು. ಒಂದೊಮ್ಮೆ ಇದ್ದರೂ ಮಠವನ್ನು ಮನೆಯನ್ನಾಗಿ ಮಾಡಿಕೊಂಡಿದ್ದರು. ಭಕ್ತರಿಗೆ ಸ್ವಾಮೀಜಿ ದರ್ಶನವಾಗುತ್ತಿರಲಿಲ್ಲ. ಆಗಾಗ, ಮಠಕ್ಕೆ ಕೆಲವು ನರಿ, ನಾಯಿಗಳು ಬರುತ್ತಿದ್ದವು. ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಟ್ರಸ್ಟ್ ಅಧ್ಯಕ್ಷನಾಗಿ ಮಠದ ರಕ್ಷಣೆಗೆ ಹಿರಿಯರೊಂದಿಗೆ ಚರ್ಚಿಸಿ ನಾನೇ ಗೇಟ್ ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ' ಎಂದು ವಿವರಿಸಿದರು.
'ಮಠಕ್ಕೆ ಬರುವುದಾಗಿ ಸ್ವಾಮೀಜಿ ನನ್ನನ್ನು ಸಂಪರ್ಕಿಸಿರಲಿಲ್ಲ. ಅವರ ಪ್ರೇರಣೆಯಿಂದಲೇ ಕೆಲವರು ಮಧ್ಯರಾತ್ರಿ ಬಂದು ಮಠದ ಗೇಟ್ ಒಡೆದು ಅಕ್ರಮ ಪ್ರವೇಶ ಮಾಡಿದ್ದಾರೆ. ಆ ಕುರಿತು ಪ್ರಕರಣ ದಾಖಲಿಸಲಾಗಿದೆ. ಮಠದ ರಕ್ಷಣೆಗೆ ಬೀಗ ಹಾಕಿದ್ದನ್ನೇ ಸ್ವಾಮೀಜಿ ಅವರು ತಪ್ಪು ತಿಳಿದು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ' ಎಂದು ಸ್ಪಷ್ಟಪಡಿಸಿದರು.
'ಸ್ವಾಮೀಜಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎನ್ನುವುದಕ್ಕಿಂತ, ಅದು ಸಹ ಪ್ರಚಾರದ ಒಂದು ಗಿಮ್ಮಿಕ್ಕು ಆಗಿರಬಹುದು' ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.