ಬಸನಗೌಡ ಪಾಟೀಲ ಯತ್ನಾಳ
ಹುಬ್ಬಳ್ಳಿ: ‘ಹಿಂದೂ ಧರ್ಮವನ್ನು ಅಪಮಾನ ಮಾಡಬೇಕೆನ್ನುವುದೇ ಕೆಲವು ಮಠಾಧೀಶರ ಉದ್ದೇಶವಾಗಿದೆ. ಅದಕ್ಕಾಗಿ ಅವರು ಲಿಂಗಾಯತ–ವೀರಶೈವ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ’ ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.
‘ಲಿಂಗಾಯತ ಮತ್ತು ವೀರಶೈವ ಇಬ್ಬರ ಸಂಪ್ರದಾಯವೂ ಒಂದೆಯಾಗಿದ್ದು, ಹಿಂದೂ ಧರ್ಮದ ಭಾಗವಾಗಿದ್ದಾರೆ. ಕೆಲವು ಕಮ್ಯೂನಿಸ್ಟ್ ಮನಸ್ಥಿತಿ ಸ್ವಾಮೀಜಿಗಳು ಉದ್ದೇಶಪೂರ್ವಕವಾಗಿ ತಮ್ಮ ವೈಭವೀಕರಣಕ್ಕಾಗಿ, ಸ್ವಾರ್ಥಕ್ಕಾಗಿ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ. ಹಿಂದೂ ಶಬ್ಧಕ್ಕೆ ಅಪಮಾನ ಮಾಡಬೇಕೆನ್ನುವ ವ್ಯವಸ್ಥಿತ ಸಂಚು ರಾಜ್ಯದಲ್ಲಿ ನಡೆಯುತ್ತಿದೆ’ ಎಂದು ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದರು.
‘ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿನ ಹೋಮ–ಹವನಕ್ಕೆ ಅಪಮಾನ ಮಾಡುವುದು ಸ್ವಾಮೀಜಿಗಳ ಉದ್ದೇಶ. ಹಿಂದೂ ಧರ್ಮ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಿ, ಹಸಿರು, ಬಿಳಿ ಬಟ್ಟೆ ಧರಿಸಲಿ. ಅಂಥ ಸ್ವಾಮೀಜಿ ನಮಗೆ ಬೇಕಾಗಿಲ್ಲ. ಬಿಜೆಪಿಯಿಂದ ಹಿಂದೂ ಧರ್ಮದ ಹೆಸರು ಹೇಳಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಪಕ್ಷ ಬಿಟ್ಟು ಹೋಗಲಿ’ ಎಂದರು.
‘ಹಿಂದೂ ಧರ್ಮವನ್ನು ಹೀಯಾಳಿಸುವ ಏಕತಾ ಸಮಾವೇಶಕ್ಕೆ ನಾನು ಹೋಗುವುದಿಲ್ಲ. ಹಿಂದೂ ಧರ್ಮ ಬೇಡ ಎನ್ನುವವರು ದೇಶವೇ ಬೇಡ ಎಂದ ಹಾಗೆ’ ಎಂದು ಅಭಿಪ್ರಾಯಪಟ್ಟರು.
‘ಲಿಂಗಾಯತ ವೀರಶೈವ ಅಧಿಕೃತ ಧರ್ಮವಲ್ಲ, ಅದಕ್ಕೆ ಕೇಂದ್ರ ಸರ್ಕಾರದಿಂದ ಮಾನ್ಯತೆಯೂ ಸಿಕ್ಕಿಲ್ಲ. ಹೀಗಾಗಿ ಲಿಂಗಾಯತ ಸಮುದಾಯದವರು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಸಬೇಕು’ ಎಂದು ವಿನಂತಿಸಿದರು.
‘ಬಸವರಾಜ ಬೊಮ್ಮಾಯಿ ಅವರು ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಬರೆಸುವಂತೆ ಹೇಳಿದ್ದು ಸ್ವಾಗತಾರ್ಹ. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅದು ಮಠಾಧೀಶರಿಗೆ ಬಿಟ್ಟಿದ್ದು ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಮೂಲ ಸಿದ್ಧಾಂತವೇ ಹಿಂದುತ್ವವಾಗಿದೆ. ಹಿಂದೂ ಎಂದುಕೊಳ್ಳುವವರು ಬಿಜೆಪಿಯಲ್ಲಿರಲಿ, ವಿರೋಧಿಸುವವರು ಬೇರೆ ಪಕ್ಷ ಸೇರಿಕೊಳ್ಳಲಿ’ ಎಂದರು.
‘ಮಹಾಸಭಾದಿಂದ ಹೊರಗೆ ಬರಲಿ’
‘ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾವು ಬಿ.ಎಸ್. ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಹಾಗೂ ಈಶ್ವರ ಖಂಡ್ರೆ ಅವರ ಕುಟುಂಬದ ಕೈಲಿ ಸಿಲುಕಿ ನಲುಗುತ್ತಿದೆ. ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ನಡೆಸಿದಾಗ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವರ ಮೇಲೆ ಲಾಠಿ ಚಾರ್ಜ್ ನಡೆಸಿತು. ಆ ಸಂದರ್ಭ ಮಹಾಸಭಾ ನಾಯಕರು ಮೌನ ವಹಿಸಿದ್ದು ಯಾಕೆ? ಸಮಾಜದ ಮೇಲೆ ಕಳಕಳಿಯಿದ್ದರೆ ಈ ಮೂರು ಮಂದಿ ಹೊರಗೆ ಬಂದು, ಮಹಾಸಭಾವನ್ನು ವಿಸರ್ಜಿಸಬೇಕು. ಕುಟುಂಬದ ಸ್ವಾರ್ಥ ರಾಜಕಾರಣಕ್ಕೆ ಮಹಾಸಭಾವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಶಾಸಕ ಯತ್ನಾಳ ಆರೋಪಿಸಿದರು.
‘ಏಕತಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಬಿಜೆಪಿ ಮುಖಂಡರಿಗೆ ಹೈಕಮಾಂಡ್ ನೋಟಿಸ್ ನೀಡಬೇಕು. ಹಿಂದೂ ಎಂದು ಕರೆಸಿಕೊಳ್ಳಲು ನಾಚಿಕೆ ಪಡುವ ಮುಖಂಡರು ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಅವರ ಮನೆಯಲ್ಲಿ ಕುಳಿತುಕೊಳ್ಳಲಿ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.