ADVERTISEMENT

ವೀರಶೈವ, ಲಿಂಗಾಯತ ಸಮಾಜದ ವಿವಿಧ ಮಠಾಧೀಶರ ಸಭೆ 11ಕ್ಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 1:28 IST
Last Updated 9 ಸೆಪ್ಟೆಂಬರ್ 2025, 1:28 IST
 ದಿಂಗಾಲೇಶ್ವರ ಸ್ವಾಮೀಜಿ 
 ದಿಂಗಾಲೇಶ್ವರ ಸ್ವಾಮೀಜಿ    

ಹುಬ್ಬಳ್ಳಿ: ‘ವೀರಶೈವ– ಲಿಂಗಾಯತ ಒಂದೇ ಎಂದು ನಂಬಿರುವ ವಿವಿಧ ಮಠಾಧೀಶರು, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ಮುಖಂಡರು ಸೆ.11ರಂದು ಬೆಂಗಳೂರಿನಲ್ಲಿ ಸಭೆ ಸೇರುವರು.

‘ಜಾತಿ, ಉಪಜಾತಿ ಕಾಲಂನಲ್ಲಿ ಸಮಾಜದವರು ಏನು ನಮೂದಿಸಬೇಕು ಎಂದು ಸಭೆ ನಿರ್ಧರಿಸಲಿದೆ’ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ಇಲ್ಲಿ ತಿಳಿಸಿದರು.

‘ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಜಾತಿ, ಉಪ ಜಾತಿ ಕಾಲಂನಲ್ಲಿ ಏನು ಬರೆಸಬೇಕು ಎಂದು ಸಮಾಜದವರಲ್ಲಿ ಗೊಂದಲವಿದೆ ಇದನ್ನು ನಿವಾರಿಸುವುದು ಉದ್ದೇಶ’ ಎಂದು ತಿಳಿಸಿದರು.

ADVERTISEMENT
ನನ್ನನ್ನೂ ಸೇರಿ ನಾಡಿನ ಯಾವೊಬ್ಬ ಸ್ವಾಮೀಜಿ ವಿದ್ವಾಂಸ ನಾಯಕರೂ ಬಸವಣ್ಣ ಪ್ರತಿಪಾದಿಸಿದ ಬಸವತತ್ವ ಪಾಲಿಸುತ್ತಿಲ್ಲ. ಪ್ರಚಾರ ರಾಜಕೀಯಕ್ಕೆ ಇದು ಬಳಕೆಯಾಗುತ್ತಿದೆ
ವೀರಭದ್ರ ಚನ್ನಮಲ್ಲ, ಸ್ವಾಮೀಜಿ ನಿಡುಮಾಮಿಡಿ ಮಠ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಪಂಚಪೀಠಾಧೀಶರು ಸಹಮತ ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ಆದರೆ, ಕೆಲವರು ಬಸವ ಸಂಸ್ಕೃತಿ ಯಾತ್ರೆಯ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಯಾತ್ರೆಯ ನೇತೃತ್ವ ವಹಿಸಿರುವ ತೋಂಟದ ಸಿದ್ದರಾಮ ಸ್ವಾಮೀಜಿ, ಮಠದ ಅಡಿ ಮೂರು ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ. ಅವರ ನಡೆ–ನುಡಿಯಲ್ಲಿ ಹೋಲಿಕೆ ಇಲ್ಲ. ಬಸವ ಸಂಸ್ಕೃತಿ ಯಾತ್ರೆ ವೇದಿಕೆಗೆ ಕೆಲ ಸ್ವಾಮೀಜಿಗಳನ್ನು ಹೆದರಿಸಿ, ಬೆದರಿಸಿ ಕರೆತರುತ್ತಿದ್ದಾರೆ’ ಎಂದೂ ಆರೋಪಿಸಿದರು.

‘ಹಿಂದೂ ಧರ್ಮದ ವಿರೋಧಿ ಆಗಬೇಕಿಲ್ಲ’

ವಿಜಯಪುರ: ‘ವೀರಶೈವ ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ. ಇದು ಸ್ವತಂತ್ರ ಧರ್ಮ.  ಅಸ್ಮಿತೆ ಸಿದ್ಧಾಂತ ಆಚರಣೆಗೆ ಸ್ವತಂತ್ರ ಧರ್ಮದವರಾಗಬೇಕೇ ಹೊರತು ಹಿಂದೂ ಧರ್ಮದ ವಿರೋಧಿಗಳಾಗಬೇಕಿಲ್ಲ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ‘ಪ್ರತ್ಯೇಕ ಧರ್ಮ ಮಾನ್ಯತೆಯನ್ನು ವೀರಶೈವ ಲಿಂಗಾಯತರು ಒಟ್ಟುಗೂಡಿಯೇ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು. ‘ಕೇಂದ್ರ ಸರ್ಕಾರ ಜಾತಿ ಗಣತಿ ಆರಂಭಿಸುವ ಮುನ್ನವೇ ವೀರಶೈವ–ಲಿಂಗಾಯತರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ವೀರಶೈವ ಲಿಂಗಾಯತ ಮಹಾಸಭೆ ಶ್ರಮಿಸಬೇಕು’ ಎಂದರು.

ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.