ADVERTISEMENT

ಮದ್ಯ ನಿಷೇಧಕ್ಕೆ ಒತ್ತಾಯ: ಮಹಿಳೆಯರಿಂದ ಸರ್ಕಾರದ ಬೊಕ್ಕಸಕ್ಕೆ ಹಣ ತುಂಬುವ ಚಳವಳಿ

​ಪ್ರಜಾವಾಣಿ ವಾರ್ತೆ
Published 18 ಮೇ 2020, 9:49 IST
Last Updated 18 ಮೇ 2020, 9:49 IST
ಮದ್ಯ ನಿಷೇಧಕ್ಕೆ ಒತ್ತಾಯಿಸಿ ಚಳುವಳಿಯಲ್ಲಿ ತೊಡೆಗಿರುವ ಮಹಿಳೆಯರು
ಮದ್ಯ ನಿಷೇಧಕ್ಕೆ ಒತ್ತಾಯಿಸಿ ಚಳುವಳಿಯಲ್ಲಿ ತೊಡೆಗಿರುವ ಮಹಿಳೆಯರು    

ಧಾರವಾಡ: ಖಜಾನೆ ತುಂಬಲು ಮದ್ಯ ಮಾರಾಟ ಆರಂಭಿಸಿರುವ ಸರ್ಕಾರದ ಕ್ರಮ ಖಂಡಿಸಿ ಮಹಿಳೆಯರು ಮನಿ ಆರ್ಡರ್ ಮೂಲಕ ಸರ್ಕಾರಕ್ಕೆ ಸೋಮವಾರ ಹಣ ಕಳುಹಿಸಿ ಮದ್ಯ ನಿಷೇಧಕ್ಕೆ ಆಗ್ರಹಿಸಿದರು.

ಹೋರಾಟಗಾರ್ತಿ ಶಾರದಾ ಡಾಬಡೆ ಅವರ ನೇತೃತ್ವದಲ್ಲಿ ಜಿಲ್ಲೆಯ ಮಹಿಳೆಯರು ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಹಣ ಭರಿಸಿ ಸರ್ಕಾರಕ್ಕೆ ಕಳುಹಿಸಿದರು. ನಂತರ ಮದ್ಯ ನಿಷೇಧಕ್ಕೆ ಫಲಕ ಪ್ರದರ್ಶಿಸಿ ಆಗ್ರಹಿಸಿದರು.

ಈ ಕುರಿತು ಮಾತನಾಡಿದ ಶಾರದಾ ದಾಬಡೆ, 'ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ‌ಮದ್ಯ ವ್ಯಸನಿಗಳು ಮದ್ಯ ಸೇವನೆಯ ಚಟದಿಂದ ಮುಕ್ತರಾಗಿದ್ದರು. ಹಾಗೆ ಹಳ್ಳಿ ನಗರವೆನ್ನದೆ ಲಕ್ಷಾಂತರ ‌ಕುಟುಂಬಗಳಲ್ಲಿ ನೆಮ್ಮದಿ, ಶಾಂತಿ ನೆಲೆಸಿತ್ತು. ಮಹಿಳೆಯರು, ಮಕ್ಕಳು ಹಿಂಸೆಯಲ್ಲದ ದಿನಗಳನ್ನು ಕಾಣಲು ಸಾಧ್ಯವಾಯಿತು.

ADVERTISEMENT

ಆದರೆ ಸರ್ಕಾರ ಆದಾಯದ ನೆಪ ಹೇಳಿ ಸಮಾಜದ ಎಲ್ಲಾ ವರ್ಗದ ಜನರ ವಿರೋಧದ ನಡುವೆಯೂ ಮತ್ತೆ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಈಗ ಮತ್ತೆ ಮದ್ಯದ ಕಾರಣಕ್ಕೆ ಕೊಲೆ, ಆಸ್ತಿಪಾಸ್ತಿ ‌ಹಾನಿ, ಹಿಂಸೆ, ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ.‌ ಒಂದೆಡೆ ಉದ್ಯೋಗ ಇಲ್ಲ, ಕೂಲಿ ಇಲ್ಲ , ಕೈಯಲ್ಲಿ ಹಣ ಇಲ್ಲ. ಮದ್ಯ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ಸಾಮಾನುಗಳನ್ನೆಲ್ಲ ಮದ್ಯದ ಅಂಗಡಿಗಳಿಗೆ ಅಡವು ಇಡುತ್ತಿದ್ದಾರೆ. ಆಹಾರ ಭದ್ರತೆಗಾಗಿ‌ ನೀಡಿದ ಆಹಾರ ಧಾನ್ಯ , ಜೀವನ ನಿರ್ವಹಣೆಗಾಗಿ ಜನಧನ್- ಕಾರ್ಮಿಕ ಕಾರ್ಡುಗಳಿಗೆ ಜಮಾ ಆದ ಹಣವೆಲ್ಲ ಪುನಃ ಮದ್ಯದ ಅಂಗಡಿಗಳ ಮೂಲಕ ಸರ್ಕಾರದ ಖಜಾನೆ ಸೇರುತ್ತಿದೆ. ಹೀಗಾಗಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದರು.

'ಆದಾಯಕ್ಕಾಗಿ ಹಾತೊರೆಯುತ್ತಿರುವ ಸರ್ಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಆದರೆ ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಮಾಡಿಕೊಡಿ' ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನೆ ಮಾಡುವ ಸಲುವಾಗಿ ಹಳ್ಳಿ ಹಳ್ಳಿಗಳ ಅಂಚೆ ಕಛೇರಿಯಲ್ಲಿ ಹೆಣ್ಣುಮಕ್ಕಳು, ಮುಖ್ಯಮಂತ್ರಿಗಳಿಗೆ ₹10, ₹20 ರೂಪಾಯಿಗಳನ್ನು ಮನಿ ಆರ್ಡರ್ ಮಾಡಲಾಯಿತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.