ADVERTISEMENT

ಸ್ಥಳೀಯ ಸಂಸ್ಥೆಗಳಿಗೆ ಮತದಾನ 29ರಂದು; ಕಣದಲ್ಲಿ ಒಟ್ಟು 210 ಅಭ್ಯರ್ಥಿಗಳು

47 ಸಾವಿರ ಮತದಾರರು

​ಪ್ರಜಾವಾಣಿ ವಾರ್ತೆ
Published 28 ಮೇ 2019, 14:36 IST
Last Updated 28 ಮೇ 2019, 14:36 IST

ಧಾರವಾಡ: ನವಲಗುಂದ ಪುರಸಭೆ, ಕಲಘಟಗಿ ಮತ್ತು ಅಳ್ನಾವರ ಪಟ್ಟಣ ಪಂಚಾಯ್ತಿ ಸದಸ್ಯ ಸ್ಥಾನಗಳಿಗೆ ಬುಧವಾರ ಚುನಾವಣೆ ಜರುಗಲಿದ್ದು, ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ನವಲಗುಂದ ಪುರಸಭೆಯ ಒಟ್ಟು 23 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 87 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು 9,766 ಪುರುಷ ಮತ್ತು 9,744 ಮಹಿಳಾ ಮತದಾರರು ಸೇರಿ 19,512 ಮತದಾರರು ಇದ್ದಾರೆ.

ಇಲ್ಲಿ ಒಟ್ಟು 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 4 ಸೂಕ್ಷ್ಮ, 7 ಅತಿ ಸೂಕ್ಷ್ಮ ಮತ್ತು 12 ಸಾಮಾನ್ಯ ಮತಗಟ್ಟೆಗಳಿವೆ. ಮತದಾನಕ್ಕೆ 23 ಕಂಟ್ರೋಲ್ ಯೂನಿಟ್‌ ಮತ್ತು 23 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗುತ್ತಿದೆ.

ADVERTISEMENT

27 ಮತಗಟ್ಟೆ ಅಧಿಕಾರಿಗಳೊಂದಿಗೆ 1ನೇ, 2ನೇ ಮತ್ತು 3ನೇ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 108 ಸಿಬ್ಬಂದಿ ಮತದಾನ ಕೇಂದ್ರಗಳಲ್ಲಿ ಚುನಾವಣಾ ಕರ್ತ್ಯ ನಿರ್ವಹಿಸಲಿದ್ದಾರೆ.

ಅಳ್ನಾವರ ಪಟ್ಟಣ ಪಂಚಾಯ್ತಿಯ 18 ಸ್ಥಾನಗಳಿಗೆ 76 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 7,682 ಪುರುಷ ಮತ್ತು 7,563 ಮಹಿಳೆಯರು ಸೇರಿ ಒಟ್ಟು 15,249 ಮತದಾರರು ಇದ್ದಾರೆ.

ಇಲ್ಲಿ ಒಟ್ಟು 18 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲವೂ ಸಾಮಾನ್ಯ ಮತಗಟ್ಟೆಗಳಾಗಿವೆ. ಮತದಾಣಕ್ಕಾಗಿ 18 ಕಂಟ್ರೋಲ್ ಯೂನಿಟ್ ಹಾಗೂ ಅಷ್ಟೇ ಪ್ರಮಾಣದ ಬ್ಯಾಲೆಟ್ ಯೂನಿಟ್ ಬಳಸಲಾಗುತ್ತಿದೆ. 21 ಮತಗಟ್ಟೆ ಅಧಿಖಾರಿಗಳು ಸೇರಿ ಒಟ್ಟು 84 ಸಿಬ್ಬಂದಿ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಹಾಗೆಯೇ ಕಲಘಟಗಿ ಪಟ್ಟಣ ಪಂಚಾಯ್ತಿಯಲ್ಲಿ ಒಟ್ಟು 17 ಸ್ಥಾನಗಳಿದ್ದು, ಇದಕ್ಕೆ 87 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರ ವ್ಯಾಪ್ತಿಯಲ್ಲಿ 6,400 ಪುರುಷ ಹಾಗೂ 6,517 ಮಹಿಳಾ ಮತದಾರರು ಸೇರಿ ಒಟ್ಟು 12,919 ಮತದಾರರು ಇದ್ದಾರೆ.

ಕಲಘಟಗಿ ಪಟ್ಟಣ ಪಂಚಾಯ್ತಿ ಚುನಾವಣೆಗಾಗಿ ಒಟ್ಟು 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 2 ಸೂಕ್ಷ್ಮ, 4 ಅತಿ ಸೂಕ್ಷ್ಮ ಹಾಗೂ 11 ಸಾಮಾನ್ಯ ಮತಗಟ್ಟೆಗಳಾಗಿವೆ. ತಲಾ 17 ಕಂಟ್ರೋಲ್ ಮತ್ತು ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗುತ್ತಿದೆ. 20 ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 80 ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ಮೂರು ಸ್ಥಳೀಯ ಸಂಸ್ಥೆಗಳ ಒಟ್ಟು 85 ಸದಸ್ಯ ಸ್ಥಾನಗಳಿಗೆ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು 210 ಜನ ಕಣದಲ್ಲಿದ್ದಾರೆ. 23,848 ಪುರುಷ ಹಾಗೂ 23,826 ಮಹಿಳೆಯರು ಸೇರಿ ಒಟ್ಟು 47,680 ಮತದಾರರು ಮತ ಚಲಾಯಿಸಲಿದ್ದಾರೆ. ಮತ ಚಲಾಯಿಸುವವರ ಎಡಗಯ ಉಂಗುರ ಬೆರಳಿಗೆ ಶಾಹಿ ಹಾಕಲಾಗುತ್ತಿದೆ.

‘ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವ್ಯಾಪ್ತಿಯಲ್ಲಿ ಮೇ 29ರಂದು ಮತದಾನ ನಿಮಿತ್ತ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಟಾ ಮತ ಚಲಾವಣೆಗೂ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.