ADVERTISEMENT

ಹುಬ್ಬಳ್ಳಿ | ಲಾಕ್‌ಡೌನ್ ಬರೆ, ನೆಲಕ್ಕಚ್ಚಿದ ಹೋಟೆಲ್ ವಹಿವಾಟು

ಸಂಕಷ್ಟದಲ್ಲಿ ಮಾಲೀಕರು, ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 22 ಮೇ 2020, 19:30 IST
Last Updated 22 ಮೇ 2020, 19:30 IST
ಹುಬ್ಬಳ್ಳಿಯಲ್ಲಿ ಕೆನರಾ ಹೋಟೆಲ್‌ನಿಂದ ಪಾರ್ಸೆಲ್‌ ತೆಗೆದುಕೊಂಡು ಹೋಗಲು ಕಾಯುತ್ತಿದ್ದ ಗ್ರಾಹಕರು
ಹುಬ್ಬಳ್ಳಿಯಲ್ಲಿ ಕೆನರಾ ಹೋಟೆಲ್‌ನಿಂದ ಪಾರ್ಸೆಲ್‌ ತೆಗೆದುಕೊಂಡು ಹೋಗಲು ಕಾಯುತ್ತಿದ್ದ ಗ್ರಾಹಕರು   

ಹುಬ್ಬಳ್ಳಿ: ಲಾಕ್‌ಡೌನ್‌ ಹೊಡೆತಕ್ಕೆ ನಲುಗಿರುವ ಹುಬ್ಬಳ್ಳಿಯ ಹೋಟೆಲ್ ಉದ್ಯಮದ ವಹಿವಾಟು ಶೇ 15ಕ್ಕೆ ಕುಸಿದಿದೆ. ಅಳಿವು–ಉಳಿವಿನ ಹಂತಕ್ಕೆ ತಲುಪಿರುವ ಹೋಟೆಲ್‌ಗಳಲ್ಲಿ ಸದ್ಯ ಪಾರ್ಸೆಲ್‌ ಕೊಡಲು ಅನುಮತಿ ಇದ್ದರೂ, ಉದ್ಯಮದಲ್ಲಿ ಚೇತರಿಕೆಯ ಲಕ್ಷಣಗಳು ಗೋಚರಿಸುತ್ತಿಲ್ಲ.

ನಗರದಲ್ಲಿ ದೊಡ್ಡ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ದರ್ಶಿನಿಗಳು ಸೇರಿ ಅಂದಾಜು 700 ಹೋಟೆಲ್‌ಗಳಿವೆ. ಅಡುಗೆ ಮಾಡುವವರು, ಸರ್ವರ್‌ಗಳು, ಕ್ಲೀನರ್, ಸಹಾಯಕರು, ಕ್ಯಾಷಿಯರ್‌ ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಮಂದಿ ಈ ಉದ್ಯಮವನ್ನೇ ನೆಚ್ಚಿಕೊಂಡಿದ್ದಾರೆ.

ಈಗ ಲಾಕ್‌ಡೌನ್ ಸಡಿಲಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ, ಹೋಟೆಲ್‌ ಆರಂಭಕ್ಕೆ ಮಾತ್ರ ಪೂರ್ಣ ಅನುಮತಿ ಸಿಕ್ಕಿಲ್ಲ. ಆದ್ದರಿಂದ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಷರತ್ತುಬದ್ಧ ಅನುಮತಿ ನೀಡಬೇಕಿತ್ತು: ‘ಎಲ್ಲಾ ಉದ್ಯಮಗಳಿಗೂ ಸರ್ಕಾರ ಷರತ್ತುಬದ್ಧ ಅನುಮತಿ ಕೊಟ್ಟಿದೆ. ಆದರೆ, ಲಕ್ಷಾಂತರ ಮಂದಿ ಅವಲಂಬಿಸಿರುವ ಹೋಟೆಲ್ ಉದ್ಯಮಕ್ಕೆ ಕೇವಲ ಪಾರ್ಸೆಲ್‌ಗೆ ಅವಕಾಶ ನೀಡಿರುವುದು ಸರಿಯಲ್ಲ. ಷರತ್ತುಗಳೊಂದಿಗೆ ವಹಿವಾಟಿಗೆ ನಮಗೂ ಅನುಮತಿ ನೀಡಬೇಕಿತ್ತು’ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಸುಕುಮಾರ್ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅತಂತ್ರ ಸ್ಥಿತಿ: ‘ಲಾಕ್‌ಡೌನ್ ನೆಪದಲ್ಲಿ ಕೆಲಸದಲ್ಲಿ ಪಳಗಿರುವ ಹಾಗೂ ವರ್ಷಗಟ್ಟಲೆ ನಮ್ಮಲ್ಲಿ ಕೆಲಸ ಮಾಡಿಕೊಂಡಿರುವ ಕಾರ್ಮಿಕರನ್ನು ಕೈ ಬಿಡುವಂತಿಲ್ಲ. ನಮ್ಮ ಕಷ್ಟದ ಜತೆಗೆ, ಅವರ ಕಷ್ಟಕ್ಕೂ ಸ್ಪಂದಿಸಬೇಕಾದ ಅತಂತ್ರ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಕೆನರಾ ಹೋಟೆಲ್ ಮಾಲೀಕ ಹಾಗೂ ಹೋಟೆಲ್ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಅನಂತಪದ್ಮನಾಭ ಐತಾಳ್ ಹೇಳಿದರು.

‘ಬಂಡವಾಳ ಹಾಕಿ, ಲಾಭ ತೆಗೆಯುವ ಉದ್ಯಮ ನಮ್ಮದು. ಕಾರ್ಮಿಕರು, ರೈತರು, ದಿನಸಿ ಅಂಗಡಿ ಸೇರಿದಂತೆ ಅನೇಕರು ನಮ್ಮನ್ನು ನಂಬಿಕೊಂಡಿದ್ದಾರೆ. ಹೋಟೆಲ್ ತೆರೆಯದ ಕಾರಣ ಎಲ್ಲರೂ ಕಷ್ಟದಲ್ಲಿದ್ದೇವೆ. ಶೇ 50ರಷ್ಟು ಮಂದಿ ಕಾರ್ಮಿಕರು ಊರಿಗೆ ಹೋಗಿದ್ದಾರೆ. ಇರುವವರನ್ನೇ ನೆಚ್ಚಿಕೊಂಡು ಪಾರ್ಸೆಲ್ ನೀಡುತ್ತಿದ್ದೇವೆ’ ಎಂದು ಪರಿಸ್ಥಿತಿ ವಿವರಿಸಿದರು.

‘ಸಾಲ, ರಿಯಾಯತಿ ಕೊಟ್ಟರೆ ಪಾರು’
‘ಹೋಟೆಲ್ ಮಾಲೀಕರು ಸಂಕಷ್ಟದಿಂದ ಪಾರಾಗಬೇಕಿದ್ದರೆ ಸರ್ಕಾರ ಕಡಿಮೆ ಬಡ್ಡಿಯಲ್ಲಿ ಒಂದು ವರ್ಷದ ಅವಧಿಗೆ ಸಾಲ ನೀಡಬೇಕು. ಚಿನ್ನಾಭರಣದ ಮೇಲೂ ಸಾಲ ಒದಗಿಸಬೇಕು. ತೆರಿಗೆ ಮತ್ತು ವಿದ್ಯುತ್ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಬೇಕು. ಆಗ ಮಾತ್ರ ಹೋಟೆಲ್ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯ’ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ರವೀಂದ್ರ ಗಾಯ್ತೊಂಡೆ ಸರ್ಕಾರಕ್ಕೆ ಮನವಿ ಮಾಡಿದರು.

*
ಹೋಟೆಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅನುಮತಿ ನೀಡುವಂತೆ ಸಂಘದ ರಾಜ್ಯ ಘಟಕದಿಂದ ಮುಖ್ಯಮಂತ್ರಿಗೆ ಮನವಿ ನೀಡಲಾಗಿದೆ. ಮನವಿಗೆ ಸ್ಪಂದಿಸುವ ವಿಶ್ವಾಸವಿದೆ.
-ಸುಕುಮಾರ್ ಶೆಟ್ಟಿ, ಅಧ್ಯಕ್ಷ, ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘ

*
ಲಾಕ್‌ಡೌನ್‌ನಿಂದಾಗಿ ಹೋಟೆಲ್ ವ್ಯವಹಾರ ಸ್ಥಗಿತಗೊಂಡರೂ ಮಾಲೀಕರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಆರ್ಥಿಕವಾಗಿ ಕೈಲಾದಷ್ಟು ನೆರವು ನೀಡಿದ್ದಾರೆ.
-ಶರತ್‌ಕುಮಾರ್ ರೈ, ಕ್ಯಾಷಿಯರ್, ವೈಭವ್ ಹೋಟೆಲ್

*
ಹೋಟೆಲ್ ಮುಚ್ಚಿದ್ದರೂ ಕಟ್ಟಡ ಬಾಡಿಗೆ ಕಟ್ಟಬೇಕು. ತೆರಿಗೆ, ಕಾರ್ಮಿಕರಿಗೆ ಸಂಬಳ, ವಿದ್ಯುತ್ ಮತ್ತು ನೀರಿನ ಬಿಲ್‌ಗೆ ಎಲ್ಲಿಂದ ಹಣ ತರಬೇಕು?
– ರವೀಂದ್ರ ಗಾಯ್ತೊಂಡೆ, ಕಾರ್ಯದರ್ಶಿ, ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.