ಶಾಸಕ ಅರವಿಂದ ಬೆಲ್ಲದ
ಹುಬ್ಬಳ್ಳಿ: 'ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಬದುಕಿನ ಗ್ಯಾರಂಟಿ ಕಸಿದುಕೊಂಡು, ಲವ್ ಜಿಹಾದ ಗ್ಯಾರಂಟಿ ನೀಡುತ್ತಿದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಲವ್ ಜಿಹಾದ್ ನಡೆಯುತ್ತಿದೆ' ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ತೃಷ್ಟೀಕರಣ ನೀತಿಯಿಂದ ರಾಜ್ಯದಲ್ಲಿ ಮತಾಂಧ ಶಕ್ತಿಗಳಿಗೆ ಪ್ರೇರಣೆ ಸಿಕ್ಕಂತಾಗಿದೆ. ಮಹಿಳೆಯರಿಗೆ ಗ್ಯಾರಂಟಿ ನೀಡುವ ಸರ್ಕಾರ, ಅವರಿಗೆ ರಕ್ಷಣೆಯ ಗ್ಯಾರಂಟಿ ನೀಡಿಲ್ಲ. ಅದರ ಬದಲಾಗಿ ಹಿಂದೂಗಳಿಗೆ ಸಾವಿನ ಗ್ಯಾರಂಟಿ ಕೊಡುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಇತ್ತೀಚೆಗೆ ಮೈಸೂರಿನಲ್ಲಿ ಯುವಕನ ಮೇಲೆ ಹಲ್ಲೆ, ಹಾವೇರಿಯಲ್ಲಿ ಅತ್ಯಾಚಾರ, ಹನುಮಾನ ಚಾಲೀಸ್ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ, ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದು ಹೀಗೆ ಸಾಲು ಸಾಲು ಪ್ರಕರಣಗಳು ನಡೆದಿವೆ. ಆದರೂ ಸರ್ಕಾರ ಇದ್ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಾಗಿ ಮತಾಂಧ ಶಕ್ತಿಗಳನ್ನು ಬೆಳೆಸುವ ಅಜೆಂಡಾ ಇಟ್ಟುಕೊಂಡಿದೆ' ಎಂದು ಹರಿಹಾಯ್ದರು.
'ಹಿಂದೂಗಳ ಭಾವನೆ ಬಗ್ಗೆ ಕಾಂಗ್ರೆಸ್'ನವರಿಗೆ ಕಾಳಜಿಯೇ ಇಲ್ಲವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಾಂಬ್ ಇಟ್ಟವರಿಗೆ ಬ್ರದರ್ ಅನ್ನುತ್ತಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೇಹಾ ಕೊಲೆ ಪ್ರಕರಣವನ್ನು ಈವರೆಗೂ ಖಂಡಿಸಿಲ್ಲ. ಬದಲಾಗಿ, ಆಕಸ್ಮಿಕ, ವೈಯಕ್ತಿಕ ಎಂದು ಹೇಳಿಕೆ ನೀಡುತ್ತಾರೆ' ಎಂದು ವಾಗ್ದಾಳಿ ನಡೆಸಿದರು.
'ರಾಜ್ಯದಲ್ಲಿ ನೀರಿನ ಗ್ಯಾರಂಟಿ ಇಲ್ಲ, ಶಾಂತಿ ಸುವ್ಯವಸ್ಥೆ ಗ್ಯಾರಂಟಿ ಇಲ್ಲ, ಮಹಿಳೆಯರ ಜೀವಕ್ಕೆ, ರೈತರ ಬದುಕಿಗೆ ಹಾಗೂ ದಲಿತರ ಹಕ್ಕುಗಳಿಗೆ ಗ್ಯಾರಂಟಿ ಇಲ್ಲ. ಬದಲಾಗಿ ಅಲ್ಪಸಂಖ್ಯಾತರ ಯೋಜನೆಗಳಿಗೆ, ಗಲಭೆಕೋರರಿಗೆ, ಮತಾಂಧರಿಗೆ ಸಾಕಷ್ಟು ಗ್ಯಾರಂಟಿ ಕೊಟ್ಟಿದ್ದಾರೆ' ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗಾರಾಜ ಪಾಟೀಲ, ಗುರು ಪಾಟೀಲ, ದತ್ತಮೂರ್ತಿ ಕುಲಕರ್ಣಿ, ತವನೇಶ ನಾವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.