ಧಾರವಾಡ: ಅವಳಿ ನಗರಕ್ಕೆ (ಹುಬ್ಬಳ್ಳಿ–ಧಾರವಾಡ) ನೀರು ಪೂರೈಸುವ ‘ಎಲ್ ಅಂಡ್ ಟಿ‘ ವಿದ್ಯುತ್ ಘಟಕಕ್ಕೆ ನಿರಂತರ ವಿದ್ಯುತ್ ಪೂರೈಕೆಗೆ ಪ್ರತ್ಯೇಕ ಫೀಡರ್ ವ್ಯವಸ್ಥೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಇಂಧನ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಮಿಷನರ್ ಮತ್ತು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸಭೆ ನಡೆಸಿ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು. ನೀರು ಪೂರೈಕೆ ಘಟಕಕ್ಕೆ ಪ್ರತ್ಯೇಕ ಫೀಡರ್ ವ್ಯವಸ್ಥೆ ಇದ್ದರೆ ಅನುಕೂಲ ಎಂದರು.
ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ಏಳು ಗಂಟೆ ‘ತ್ರೀ ಫೇಸ್’ ವಿದ್ಯುತ್ ಪೂರೈಸಬೇಕು ರಾತ್ರಿ ಹೊತ್ತಿನಲ್ಲಿ ಪೂರೈಸಬಾರದು. ವೋಲ್ಟೇಜ್ ವ್ಯತ್ಯಯವಾಗದಂತೆ ನಿಗಾ ವಹಿಸಬೇಕು. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಇಲ್ಲ’ ಎಂದು ಹೇಳಿದರು.
‘ವಿದ್ಯುತ್ ಪರಿವರ್ತಕ ಬ್ಯಾಂಕ್‌ನಲ್ಲಿ ಪರಿವರ್ತಕಗಳ ದಾಸ್ತಾನು ಇರಬೇಕು. ಯಾವುದೇ ಪರಿವರ್ತಕ ಸುಟ್ಟರೆ, ಹಾಳಾದರೆ 24 ಗಂಟೆಯೊಳಗೆ ಹೊಸದನ್ನು ಅಳವಡಿಸಬೇಕು. ಕಂಬಗಳು ವಾಲಿದ್ದರೆ, ಹಾಳಾಗಿದ್ದರೆ ಹೊಸ ಕಂಬ ಅಳವಡಿಸಬೇಕು’ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ‘ಕಲಘಟಗಿ ತಾಲ್ಲೂಕಿನ ದೇವಿಕೊಪ್ಪದಲ್ಲಿ ವಿದ್ಯುತ್ ಘಟಕಕ್ಕೆ ಜಾಗ ಒದಗಿಸಲು ಪ್ರಸ್ತಾವ ಇದೆ. ಈ ನಿಟ್ಟಿನಲ್ಲಿ ಸಭೆ ನಡೆಸಿ ಕ್ರಮ ವಹಿಸಲಾಗುವುದು’ ಎಂದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಹೆಸ್ಕಾಂನ ಸಿಬ್ಬಂದಿ ಕೊರತೆ ನೀಗಿಸಬೇಕು. ವಿದ್ಯುತ್ ಅವಘಡಗಳ ಹಾನಿ ಪರಿಹಾರ ತ್ವರಿತವಾಗಿ ನೀಡಬೇಕು’ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಎಲ್ ಮತ್ತು ಟಿ ಘಟಕಕ್ಕೆ ತಡೆರಹಿತವಾಗಿ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕು. ಹಾಳಾಗಿರುವ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಿ ಹೊಸವನ್ನು ಅಳವಡಿಸಬೇಕು‘ ಎಂದರು.
ಶಾಸಕ ಎನ್.ಎಚ್.ಕೊನರಡ್ಡಿ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಫೀರ್ ಎಸ್. ಖಾದ್ರಿ, ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಗೌರವ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್ ವೇದಿಕೆಯಲ್ಲಿದ್ದರು.
‘ವಿದ್ಯುತ್ ಕಂಬ ಹಾನಿ: ₹ 1.71 ಕೋಟಿ ನಷ್ಟ’
ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ವಿದ್ಯುತ್ ಕಂಬ ತಂತಿಗಳು ಹಾನಿಯಾಗಿ ಸುಮಾರು 1.71 ಕೋಟಿ ನಷ್ಟವಾಗಿದೆ ಎಂದು ಸಚಿವ ಜಾರ್ಜ್ ತಿಳಿಸಿದರು. ರಾಜ್ಯದಲ್ಲಿ 100 ಉಪ ಕೇಂದ್ರಗಳ ಸಾಮರ್ಥ್ಯವರ್ಧನೆಗೆ ಉದ್ದೇಶಿಸಲಾಗಿದೆ. ನವೀಕರಿಸಬಹುದಾದ ಇಂಧನದಿಂದ ಶೇ 65 ರಷ್ಟು ಉತ್ಪಾದನೆಯಾಗುತ್ತಿದ್ದು ಬ್ಯಾಟರಿ ಸ್ಟೋರೆಜ್‌ಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಪಿ.ಎಂ.ಸೂರ್ಯ ಘರ್ (ಸೌರ ವಿದ್ಯುತ್ ಮನೆ) ಯೋಜನೆಯನ್ನು 1552 ಮನೆಗಳು ಅಳವಡಿಸಿಕೊಂಡಿವೆ. ರಾಜ್ಯದಲ್ಲಿ ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿ ಸುಮಾರು 10 ಸಾವಿರ ಕೋಟಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.