
ಧಾರವಾಡ: ಉತ್ತರ ಕರ್ನಾಟಕದ ದೊಡ್ಡ ರಥೋತ್ಸವಗಳಲ್ಲೊಂದಾದ ಗರಗದ ಮಡಿವಾಳೇಶ್ವರ ಶಿವಯೋಗಿಯವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.
ಗರಗದ ತುಪ್ಪರಿ ಹಳ್ಳದ ದಂಡೆಯ ಮಡಿವಾಳೇಶ್ವರ ಮಠ ಮುಂಭಾಗದಲ್ಲಿದ್ದ ಪುಷ್ಪಾಲಂಕೃತ ರಥ ಮತ್ತು ಪಲ್ಲಕ್ಕಿಯಲ್ಲಿ ಗುರು ಮಡಿವಾಳೇಶ್ವರರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಕಲ್ಮಠದ ಆತ್ಮಾರಾಮ ಸ್ವಾಮೀಜಿ ಅವರು ಪೂಜೆ ನೆರವೇರಿಸಿದರು. ಸಂಜೆ 5 ಗಂಟೆಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತರು ‘ಹರ ಹರ ಮಹಾದೇವ’, ‘ಜೈ ಮಡಿವಾಳೇಶ’, ‘ಜೈ ಬಸವೇಶ’ ಘೋಷಣೆಗಳನ್ನು ಮೊಳಗಿಸಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬೆ ಹಣ್ಣು ತೂರಿ ಭಕ್ತಿ ಸಮರ್ಪಿದರು. ಭಜನೆ, ಕೋಲಾಟ, ಜಗ್ಗಲಗಿ ಮೇಳ ಸಹಿತ ಹಲವು ಜನಪದ ಕಲಾತಂಡಗಳ ವಾದ್ಯ ಮೇಳಗಳು ರಥೋತ್ಸವಕ್ಕೆ ಮೆರಗು ನೀಡಿದವು.
ತಾಲ್ಲೂಕಿನ ಕೋಟೂರ, ಹಂಗರಕಿ, ತಡಕೋಡ, ದುಬ್ಬನಮರಡಿ, ಉಪ್ಪಿನ ಬೆಟಗೇರಿ, ಕೊಟಬಾಗಿ, ಜೀರಿಗವಾಡ, ನರೇಂದ್ರ, ಮರೇವಾಡ, ಪುಡಕಲಕಟ್ಟಿ, ಯಾದವಾಡ, ಹೆಬ್ಬಳ್ಳಿ, ಅಮ್ಮಿನಬಾವಿ, ತೇಗೂರ, ಶಿಂಗನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ತೇರನ್ನು ಎಳದು ಪುನೀತಭಾವ ಮೆರೆದರು. ಬೆಳಗಾವಿ, ಹಾವೇರಿ, ಬಾಗಲಕೋಟೆ ಜಿಲ್ಲೆಗಳ ಭಕ್ತರೂ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಮಠದ ಬಳಿಯಿಂದ ಹೊರಟ ತೇರು ಪಾದಗಟ್ಟೆಯವರೆಗೆ ಸಾಗಿ ಮರಳಿ ಮಠದ ಬಳಿಗೆ ತಲುಪಿ ಸಂಪನ್ನಗೊಂಡಿತು.
ಮುರುಘಾಮಠ ಮಲ್ಲಿಕಾರ್ಜುನ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ,ಅಮ್ಮಿನಬಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ,ಯಕ್ಕುಂಡಿಯ ಪಂಚಾಕ್ಷರಿ ಸ್ವಾಮೀಜಿ, ಶಿಂಗನಹಳ್ಳಿಯ ರಾಚೋಟೇಶ್ವರ ಸ್ವಾಮೀಜಿ, ಹೊಸುರಿನ ಗಂಗಾಧರ ಸ್ವಾಮೀಜಿ,ಬೈಲಹೊಂಗಲದ ನಿಲಕಂಠ ಸ್ವಾಮೀಜಿ, ಹುಬ್ಬಳ್ಳಿ ಬಸವಲಿಂಗ ಸ್ವಾಮೀಜಿ, ಮುನವಳ್ಳಿಯ ಮುರುಘರಾಜೇಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು.
ವಿವಿಧೆಡೆಗಳಿಂದ ಚಕ್ಕಡಿ ಹಾಗೂ ಟ್ರಾಕ್ಟರ್‌ಗಳಲ್ಲಿ ಜಾತ್ರೆಗೆ ಬಂದಿರುವ ಭಕ್ತರು ಮಠದ ಸುತ್ತಲಿನ ಜಮೀನುಗಳಲ್ಲಿ ಬೀಡುಬಿಟ್ಟಿದ್ದಾರೆ. ಜಾನುವಾರುಗಳ ಪರಿಕರಗಳು, ಆಟಿಕೆಗಳ ಅಂಗಡಿ, ಖಾದ್ಯಗಳ ಮಳಿಗೆಗಳಲ್ಲಿ ಜನದಟ್ಟಣೆ ಹೆಚ್ಚು ಇತ್ತು. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕರ್ತೃ ಗದ್ದುಗೆಗೆ ವಿಶೇಷ ಪೂಜೆ
ಜಾತ್ರೆಮಹೋತ್ಸವ ಪ್ರಯುಕ್ತ ಬೆಳಿಗ್ಗೆ ಮಡಿವಾಳೇಶ್ವರ ಶಿವಯೋಗಿಗಳ ಕರ್ತೃ ಗದ್ದುಗೆಯನ್ನು ವಿಶೇಷ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಕತೃ ಗದ್ದುಗೆಯ ದರ್ಶನ ಪಡೆದು ದಾಸೋಹದಲ್ಲಿ ಬೂಂದಿ ಹುಗ್ಗಿ ಹೋಳಿಗೆ ಬದನಿಕಾಯಿ ಪಲ್ಲೆ ಅನ್ನ ಸಾಂಬಾರು ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.