ADVERTISEMENT

ದೇಗುಲದಲ್ಲಿ ಶಿವನಾಮ ಸ್ಮರಣೆ, ಜಾಗರಣೆ

ಮಹಾಶಿವರಾತ್ರಿ: ಶಿವಲಿಂಗಕ್ಕೆ ವಿಶೇಷ ಪೂಜೆ, ಪ್ರವಚನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:14 IST
Last Updated 8 ಮಾರ್ಚ್ 2024, 16:14 IST
ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನದ ಎದುರು ಭಕ್ತರು ಶಿವಲಿಂಗದ ದರ್ಶನಕ್ಕೆ ಶುಕ್ರವಾರ ಸಾಲಿನಲ್ಲಿ ನಿಂತಿದ್ದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನದ ಎದುರು ಭಕ್ತರು ಶಿವಲಿಂಗದ ದರ್ಶನಕ್ಕೆ ಶುಕ್ರವಾರ ಸಾಲಿನಲ್ಲಿ ನಿಂತಿದ್ದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಶಿವರಾತ್ರಿ ಪ್ರಯುಕ್ತ ನಗರದ ಸಿದ್ಧಾರೂಢಮಠ, ಮೂರುಸಾವಿರಮಠ ಸೇರಿ ಶಿವ ಮಂದಿರಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೂ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು.

ಕೆಲವರು ಭಕ್ತರು ಮನೆ ಎದುರು ರಂಗೋಲಿ ಬಿಡಿಸಿ, ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ವೃತ ಕೈಗೊಂಡರು. ಕುಟುಂಬ ಸಮೇತ ಮನೆ ಸನಿಹದ ಶಿವ ದೇಗುಲಕ್ಕೆ ತೆರಳಿ ಪೂಜೆ, ಹಣ್ಣು–ಹಂಪಲ ನೈವೇದ್ಯ ಅರ್ಪಿಸಿದರು. ವಿವಿಧ ಮಂದಿರಗಳಲ್ಲಿ ಶಿವಾಷ್ಟೋತ್ತರ ಶತನಾಮಾವಳಿ ಪಠಣದೊಂದಿಗೆ ಲಕ್ಷ ಬಿಲ್ವಾರ್ಚನೆ, ದೀಪೋತ್ಸವ ನಡೆದವು. ಬೆಳಿಗ್ಗೆಯಿಂದ ಸಂಜೆವರೆಗೂ ‘ಓಂ ನಮಃ ಶಿವಾಯ’ ಸ್ಮರಣೆ ಅನುರಣಿಸುತ್ತಿತ್ತು.

ದೀವಟೆಗಲ್ಲಿಯ ಈಶ್ವರ ದೇವಸ್ಥಾನ, ವಿದ್ಯಾನಗರ ಈಶ್ವರ ದೇವಸ್ಥಾನ, ಉಣಕಲ್‌ನ ರಾಮಲಿಂಗೇಶ್ವರ ದೇವಸ್ಥಾನ, ಕೇಶ್ವಾಪುರದ ಪಾರಸ್ವಾಡಿ ಶಿವ ದೇವಸ್ಥಾನ, ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನ, ಹಳೇಹುಬ್ಬಳ್ಳಿ ಈಶ್ವರ ದೇವಸ್ಥಾನ, ನೇಕಾರ ನಗರದ ನೀಲಕಂಠೇಶ್ವರ ದೇವಸ್ಥಾನ, ಗೋಕುಲ ರಸ್ತೆಯ ಶಿವಪುರ ಕಾಲೊನಿಯ ಶಿವಮಂದಿರ ಸೇರಿದಂತೆ ಬಹುತೇಕ ಶಿವಮಂದಿರಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಶಿವಮೂರ್ತಿ ಹಾಗೂ ಈಶ್ವರ ಲಿಂಗವನ್ನು ಬಗೆಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಸ್ಟೇಷನ್‌ ರಸ್ತೆಯ ಈಶ್ವರ ದೇವಸ್ಥಾನದ ಆವರಣದಲ್ಲಿರುವ ಈಶ್ವರ ಲಿಂಗಕ್ಕೆ ಭಕ್ತರು ಹಾಲು ಮತ್ತು ನೀರಿನ ಅಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು. ಉಣಕಲ್‌ನ ಚಂದ್ರಮೌಳೇಶ್ವರ ದೇವಸ್ಥಾನದ ಎದುರು ಬೆಳಿಗ್ಗೆಯಿಂದ ಸಂಜೆವವರೆಗೆ ಭಕ್ತರು ಶಿವಲಿಂಗ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದಂಪತಿ ಸಮೇತ ಅಧ್ಯಾಪಕ ನಗರದ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇಶಪಾಂಡೆ ನಗರದ ಜಿಮ್‌ಖಾನ್ ಮೈದಾನದಲ್ಲಿ ಅಯೋಧ್ಯೆ ರಾಮಮಂದಿರ ಮಾದರಿ ನಿರ್ಮಿಸಿ, ಶ್ರೀರಾಮೇಶ್ವರ ಶಿವಲಿಂಗ ಮಾದರಿ ಪ್ರತಿಷ್ಠಾಪಿಸಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದಂಪತಿ ಸಮೇತ ಪೂಜೆ ನೆರವೇರಿಸಿದರು. ಶಿವಲಿಂಗಕ್ಕೆ ರುದ್ರಾಭಿಷೇಕ ಸಲ್ಲಿಕೆ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಲಿಂಗಾರಾಜ ಪಾಟೀಲ, ಮೇಯರ್‌ ವೀಣಾ ಬರದ್ವಾಡ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ರೂಪಾ ಶೆಟ್ಟಿ ಪಾಲ್ಗೊಂಡಿದ್ದರು. ದೇಶಪಾಂಡೆ ನಗರದ ಸುತ್ತಮುತ್ತಲಿನ ಭಕ್ತರು ಮೈದಾನಕ್ಕೆ ಬಂದು ಬಾಲರಾಮ ಹಾಗೂ ರಾಮೇಶ್ವರ ಶಿವಲಿಂಗದ ದರ್ಶನ ಪಡೆದರು. ಅವಲಕ್ಕಿ, ಬಾಳೆ ಹಣ್ಣು ಹಾಗೂ ಮಜ್ಜಗಿ ವಿತರಿಸಲಾಯಿತು.

ಜಾಗರಣೆ: ಶಿವರಾತ್ರಿ ಅಂಗವಾಗಿ ನಗರದ ವಿವಿಧೆಡೆಯಿಂದ ಹಾಗೂ ಹೊರ ಜಿಲ್ಲೆಗಳಿಂದ ಭಕ್ತರು ಕಾಲು ನಡಿಗೆ ಮೂಲಕ ಸಿದ್ಧಾರೂಢ ಮಠಕ್ಕೆ ಬಂದು, ಸಿದ್ಧಾರೂಢರ ಮತ್ತು ಗುರುನಾಥ ರೂಢರ ಗದ್ದುಗೆಗಳ ದರ್ಶನ ಪಡೆದರು. ಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಹಾಗೂ ವಿವಿಧ ಮಠಾಧೀಶರಿಂದ ಪ್ರವಚನ ನಡೆಯಿತು. ಮಠಕ್ಕೆ ಬರುತ್ತಿದ್ದ ಭಕ್ತರಿಗೆ ಮಾರ್ಗ ಮಧ್ಯದಲ್ಲಿ ಪ್ರಸಾದ, ನೀರು ಹಾಗೂ ಮಜ್ಜಗಿ ವ್ಯವಸ್ಥೆ ಮಾಡಲಾಗಿತ್ತು. ಮಠದ ದಾಸೋಹ ಭವನದಲ್ಲಿ ಭಕ್ತರಿಗೆ ಗೋಧಿ ಹುಗ್ಗಿ, ಊಟದ ವ್ಯವಸ್ಥೆ ರಾತ್ರಿಯವರೆಗೂ ನಡೆಯಿತು. ರಾತ್ರಿ ಸಂಗೀತೋತ್ಸವ ಹಾಗೂ ಭಜನೆಯನ್ನು ಆನಂದಿಸಿದ ಭಕ್ತರು ಜಾಗರಣೆ ಮಾಡಿದರು.

ಹುಬ್ಬಳ್ಳಿ ದೇಶಪಾಂಡೆನಗರದ ಜಿಮ್‌ಖಾನ್‌ ಮೈದಾನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದಂಪತಿ ಸಮೇತ ಬಂದು ಶ್ರೀರಾಮೇಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿದರು
ಹುಬ್ಬಳ್ಳಿ ಸ್ಟೇಷನ್‌ ರಸ್ತೆಯ ಈಶ್ವರ ದೇವಸ್ಥಾನದ ಆವರಣದಲ್ಲಿರುವ ಶಿವಲಿಂಗಕ್ಕೆ ಭಕ್ತರು ಹಾಲಿನ ಅಭಿಷೇಕ ಮಾಡಿದರು
ಹುಬ್ಬಳ್ಳಿ ಗೋಕುಲ ರಸ್ತೆಯ ಶಿವಪುರ ಕಾಲೊನಿಯ ಉದ್ಯಾನದಲ್ಲಿರುವ ಶಿವದೇಗುಲಕ್ಕೆ ಭಕ್ತರು ಭೇಟಿ ನೀಡಿ ಶಿವಲಿಂಗ ದರ್ಶನ ಪಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.